ಬೆಳಗಾವಿ: ಜಿಲ್ಲೆಯಲ್ಲಿ ರೆಮ್‌ಡೆಸಿವಿಯರ್ ಇಂಜಕ್ಷನ್ ಹಾಗೂ ಆಕ್ಸಿಜನ್ ಕೊರತೆ ಇದ್ದು ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಕಾರಣ ಇವುಗಳ ಕೊರತೆಯಾಗದಂತೆ ತ್ವರಿತ ಕ್ರಮಕೈಗೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದ ಕಾಂಗ್ರೆಸ್ ನಿಯೋಗ ಜಿಲ್ಲಾಡಳಿತವನ್ನು ಆಗ್ರಹಿಸಿತು.
ಸೋಮವಾರ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರನ್ನು ಭೇಟಿ ಮಾಡಿ ಜಿಲ್ಲೆಯಲ್ಲಿನ ಕೋವಿಡ್ ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಸತೀಶ ಜಾರಕಿಹೊಳಿ, ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆಯಿಂದ ಕೋವಿಡ್ ಸೋಂಕಿತರಿಗೆ ತೊಂದರೆಯಾಗುತ್ತಿದೆ. ಕೂಡಲೇ ಅದನ್ನು ಸರಿಪಡಿಸಬೇಕು. ರೆಮ್‌ಡೆಸಿವಿಯರ್ ಇಂಜಕ್ಷನ್ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಅದನ್ನು ಸರಿಯಾಗಿ ನೀಡುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಲಕ್ಷಿ¾ ಹೆಬ್ಟಾಳಕರ, ಜಿಲ್ಲೆಯಲ್ಲಿ ಪ್ರತಿನಿತ್ಯ ಕೋವಿಡ್‌ನಿಂದ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಲ್ಲದೆ ಕೊರೊನಾ ಸೋಂಕಿತರ ಸಂಖ್ಯೆ ಸಾವಿರದ ಗಡಿಯತ್ತ ಸಾಗುತ್ತಿದೆ. ಸರಕಾರ ಕೊಡುವುದು ಒಂದು ಲೆಕ್ಕ, ನಮ್ಮ ಬಳಿ ಬರುವುದು ಒಂದು ಲೆಕ್ಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಮ್ಸ್ ನಲ್ಲಿ 350 ಆಕ್ಸಿಜನ್ ಬೆಡ್ ಲಭ್ಯವಿದೆ. 200 ಹೆಚ್ಚುವರಿ ಆಕ್ಸಿಜನ್ ಬೆಡ್ ನೀಡುವುದಾಗಿ ಸರ್ಕಾರ ಹೇಳಿತ್ತು. ಆದರೆ ಇದುವರೆಗೆ ಹೆಚ್ಚುವರಿ ಬೆಡ್‌ಗಳನ್ನು ನೀಡದೇ ಸರ್ಕಾರ ಬೆಳಗಾವಿಗೆ ತಾರತಮ್ಯ ಮಾಡುತ್ತಿದೆ ಎಂದರು. ಕೋವ್ಯಾಕ್ಸಿನ್ ಲಸಿಕೆ ಯಾವಾಗ ಕೊಡಲಾಗುತ್ತದೆ. ಎಷ್ಟು ತಾಲೂಕಿಗೆ ಎಷ್ಟು ಸಂಖ್ಯೆಯಲ್ಲಿ ಕೊಡಲಾಗಿದೆ. ಈಗ ಎಷ್ಟು ಬರುತ್ತಿದೆ ಎಂಬ ಮಾಹಿತಿಯನ್ನು ಜಿಲ್ಲಾಡಳಿತ ಕೊಡಬೇಕು. ಆನ್‌ಲೈನ್ ನಲ್ಲಿ ರಿಜಿಸ್ಟರ್ ಮಾಡಲು ಗ್ರಾಮೀಣ ಭಾಗದ ಜನರಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಇದಕ್ಕೆ ಬೇರೆ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲೆಯಲ್ಲಿ ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ವರದಿಯಾಗುತ್ತಿದ್ದು ಅವರಿಗೆ ಪೊಲೀಸ್ ಇಲಾಖೆಯಿಂದ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ ಬಿಮ್ಸ್ ನಲ್ಲಿ 800 ಬೆಡ್‌ಗಳಿವೆ. ಸಮಸ್ಯೆಗೆ ಅನುಗುಣವಾಗಿ ನಾವು ವ್ಯವಸ್ಥೆ ಮಾಡುತ್ತೇವೆ. ತಾಲೂಕಾ ಆಸ್ಪತ್ರೆಯಲ್ಲಿ 30 ಬೆಡ್ ವ್ಯವಸ್ಥೆ ಮಾಡಲಾಗಿದೆ. ಸೋಂಕಿತರು ಬೆಳಗಾವಿಗೆ ಬರದಂತೆ ನೋಡಿಕೊಳ್ಳಬೇಕು. ಅವಶ್ಯಕತೆ ಇದ್ದರೆ ಮಾತ್ರ ಅವರು ಪತ್ರ ತೆಗೆದುಕೊಂಡು ಬಂದರೆ ಬಿಮ್ಸ್‌ನಲ್ಲಿ ಚಿಕಿತ್ಸೆ ಕೊಡುವ ವ್ಯವಸ್ಥೆ ಇದೆ ಎಂದು ಹೇಳಿದರು. ಜಿಲ್ಲೆಗೆ ಅನುಗುಣವಾಗಿ ರೆಮ್‌ಡೆಸಿವಿಯರ್ ಹಾಗೂ ಆಕ್ಸಿಜನ್ ವ್ಯವಸ್ಥೆಯನ್ನು ಸರಕಾರ ಮಾಡುತ್ತಿದೆ. ಸಾರ್ವಜನಿಕರು ವಿನಾಕಾರಣ ಭಯ ಪಡುವ ಅಗತ್ಯ ಇಲ್ಲ ಎಂದು ಅವರು ಹೇಳಿದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಅದನ್ನು ಸರಿದೂಗಿಸಬೇಕು. 10 ರಿಂದ 15 ಜನ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನಿಯುಕ್ತಿ ಮಾಡುವಂತೆ ಸೂಚಿಸಿದರು. ಶಾಸಕಿ ಅಂಜಲಿ ನಿಂಬಾಳ್ಕರ್ ಮಾತನಾಡಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಆಕ್ಸಿಜನ್ ಘಟಕ ಸ್ಥಾಪನೆ ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ. ಸರ್ಕಾರದ ಬಳಿ ಆಕ್ಸಿಜನ್ ಕೇಳುವ ಅವಶ್ಯಕತೆಯೇ ಬರುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಎಐಸಿಸಿ ಗೋವಾ ವೀಕ್ಷಕ ಸುನೀಲ ಹನುಮಣ್ಣವರ ಮೊದಲಾದವರು ಉಪಸ್ಥಿತರಿದ್ದರು.