Advertisement

ರಾಜ್ಯಕ್ಕೆ ತಕ್ಷಣ 50 ಸಾವಿರ ಆಂಪೋಟೆರಿಸಿನ್ ಬಿ ಪೂರೈಸಲು ಈಶ್ವರ ಖಂಡ್ರೆ ಆಗ್ರಹ

04:27 PM Jun 06, 2021 | Team Udayavani |

ಬೆಂಗಳೂರು: ರಾಜ್ಯಕ್ಕೆ ತಕ್ಷಣವೇ ಕೇಂದ್ರ ಸರ್ಕಾರ 50 ಸಾವಿರ ಆಂಪೋಟೋರಿಸಿನ್ –ಬಿ ಪೂರೈಸುವ ಮೂಲಕ ಕಪ್ಪು ಶಿಲೀಂಧ್ರ ಸೋಂಕಿನಿಂದ ಜೀವನ್ಮರಣ ಹೋರಾಟ ಮಾಡುತ್ತಿರುವ ರಾಜ್ಯದ ಜನತೆಯನ್ನು ರಕ್ಷಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.

Advertisement

ಕೋವಿಡ್ ಸೋಂಕಿತರ, ಮರಣ ಹೊಂದಿದವರ ಸಂಖ್ಯೆಯಲ್ಲಿ ಸುಳ್ಳು ಹೇಳಿದ ಸರ್ಕಾರ ಈಗ, ಕಪ್ಪು ಶಿಲೀಂಧ್ರ ಸೋಂಕಿನಿಂದ ನರಳುತ್ತಿರುವವರ ಮತ್ತು ಸಾವಿಗೀಡಾಗುತ್ತಿರುವವರ ಸಂಖ್ಯೆಯಲ್ಲೂ ಅಸ್ಪಷ್ಟ ಮಾಹಿತಿ ನೀಡುತ್ತಿರುವುದರಿಂದ ರಾಜ್ಯಕ್ಕೆ ಸೂಕ್ತ ಪ್ರಮಾಣದಲ್ಲಿ ಚುಚ್ಚುಮದ್ದು ಹಂಚಿಕೆಯಾಗುತ್ತಿಲ್ಲ, ಇದರಿಂದ ರಾಜ್ಯದಲ್ಲಿ ತೀವ್ರ ಕೊರತೆ ಉಂಟಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ.

ರಾಜ್ಯದಲ್ಲಿ ಪ್ರಸ್ತುತ ಕೋವಿಡ್ ನಿಂದ ಗುಣವಾದ ಎರಡು ಸಾವಿರಕ್ಕೂ ಹೆಚ್ಚು ಜನರಲ್ಲಿ ಕಪ್ಪು ಶಿಲೀಂಧ್ರದ ಸೋಂಕು ಕಾಣಿಸಿಕೊಂಡಿದೆ. ಇವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ. ಇವರಿಗೆ ನಿತ್ಯ 4 ರಿಂದ 5 ಆಂಪೋಟೋರಿಸಿನ್ –ಬಿ ಚುಚ್ಚುಮದ್ದು ನೀಡಬೇಕಾಗುತ್ತದೆ. ಆದರೆ, ರಾಜ್ಯಕ್ಕೆ ಪೂರೈಕೆ ಆಗುತ್ತಿರುವುದು ಕೆಲವೇ ಸಾವಿರ, ಹೀಗಾಗಿ ಸೋಂಕಿತರ ಪಾಡು ಹೇಳತೀರದಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಬೀದರ್ ನಿಂದ ಚಾಮರಾಜನಗರದವರೆಗೆ ಎಲ್ಲ ಕಡೆಯೂ ಆಂಪೋಟೋರಿಸಿನ್ ಬಿ ಚುಚ್ಚುಮದ್ದಿನ ತೀವ್ರ ಕೊರತೆ ಎದುರಾಗಿದೆ. ಆದರೂ ಆರೋಗ್ಯ ಇಲಾಖೆ ಇತ್ತ ಗಮನ ಹರಿಸದಿರುವುದು ನಿಜಕ್ಕೂ ದುರ್ದೈವ, ಇವರಿಗೆ ಜನರ ಕಾಳಜಿಯೇ ಇಲ್ಲವೇ ಎಂದು ಖಂಡ್ರೆ ಪ್ರಶ್ನಿಸಿದ್ದಾರೆ.

ರಾಜ್ಯದ ಸಂಸತ್ ಸದಸ್ಯರೇ ಕೇಂದ್ರ ರಾಸಾಯನಿಕ ಸಚಿವರಾಗಿದ್ದರೂ ಸೂಕ್ತ ಪ್ರಮಾಣದಲ್ಲಿ ಔಷಧ ಹಂಚಿಕೆ ಆಗುತ್ತಿಲ್ಲ. 25 ಬಿಜೆಪಿ ಸಂಸದರು ನಾಡಿನ ಜನರ ಜೀವ ಉಳಿಸಲು ಚುಚ್ಚುಮದ್ದು ಕೇಳಲೂ ಬಾಯಿ ಇಲ್ಲದವರಾಗಿದ್ದಾರೆ. ಕೂಡಲೇ ಕೇಂದ್ರ ಸರ್ಕಾರ ಕನಿಷ್ಠ 50 ಸಾವಿರ ಆಂಪೋಟೆರಿಸಿನ್ –ಬಿ ಪೂರೈಸುವ ಮೂಲಕ 2 ಸಾವಿರ ಸೋಂಕಿತರ ಪ್ರಾಣ ಉಳಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next