ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಸಪ್ಲಿಮೆಂಟರಿ’ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಶಿಕ್ಷಣ ವ್ಯವಸ್ಥೆಯ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಪ್ರಯತ್ನಿಸಬಾರದು ಎಂಬ ಸಂದೇಶ ಕೂಡ ಈ ಚಿತ್ರದಲ್ಲಿದೆ.
ಇನ್ನೊಂದು ವಿಶೇಷವೆಂದರೆ, ಈ ಚಿತ್ರದ ಪ್ರಮುಖ ಭಾಗವನ್ನು ತುಮಕೂರಿನ ಸಿದ್ಧಗಂಗಾ ಮಠದ ಆವರಣದಲ್ಲಿ ಚಿತ್ರೀಕರಿಸಲಾಗಿದೆ. ಈ ಬಗ್ಗೆ ಮಾತನಾಡುವ ಚಿತ್ರದ ನಿರ್ದೇಶಕ ದೇವರಾಜ್, “ಸುಮಾರು ಆರು ತಿಂಗಳ ಹಿಂದೆ ಈ ದೃಶ್ಯಗಳನ್ನು ಮಠದ ಆವರಣದಲ್ಲಿ ಚಿತ್ರೀಕರಿಸಲಾಗಿದೆ.
ಆಗ ಶಿವಕುಮಾರ ಸ್ವಾಮಿ ಆರೋಗ್ಯವಾಗಿದ್ದು, ಚಿತ್ರದ ದೃಶ್ಯವೊಂದರಲ್ಲಿ ಕಾಣಿಸಿಕೊಂಡಿದ್ದು, ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದರು. ಚಿತ್ರದ ಕಥೆ ವಿದ್ಯಾರ್ಥಿಗಳ ಮೇಲೆ ಸಾಗುವುದರಿಂದ ಚಿತ್ರದಲ್ಲಿ ಬರುವ “ಯೋಚಿಸಬೇಡ, ಚಿಂತಿಸಬೇಡ ಫೇಲಾದರೇನು, ಸಪ್ಲಿಮೆಂಟರಿ ಬರಿ ನೀನು……’ ಹಾಡನ್ನು ಮಠದ ಸುಮಾರು ಆರು ಸಾವಿರ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಚಿತ್ರೀಕರಿಸಲಾಗಿದೆ’ ಎಂದು ಚಿತ್ರೀಕರಣದ ನೆನಪನ್ನು ಮೆಲುಕು ಹಾಕುತ್ತಾರೆ.
ಚಿತ್ರದ ಬಗ್ಗೆ ಮಾತನಾಡುವ ದೇವರಾಜ್, “ವ್ಯಕ್ತಿ ತನ್ನ ಬದುಕಿನಲ್ಲಿ ಫೇಲ್ ಆಗಿಬಿಟ್ಟರೆ, ಅವನಿಗೆ ಮತ್ತೂಂದು ಅವಕಾಶ ಇದ್ದೇ ಇರುತ್ತೆ. ಅದೇ “ಸಪ್ಲಿಮೆಂಟರಿ’. ಅಲ್ಲಿ ತನ್ನ ಬದುಕಿನ ಏರಿಳಿತ, ನೋವು-ನಲಿವು, ಕಷ್ಟ,ನಷ್ಟಗಳನ್ನೆಲ್ಲಾ ಸರಿಯಾಗಿಸುವ ಅವಕಾಶ ಇರುತ್ತೆ. ಪ್ರತಿಯೊಬ್ಬರ ಲೈಫಲ್ಲೂ ಸಪ್ಲಿಮೆಂಟರಿ ಎಂಬುದಿರುತ್ತೆ.
ಆ ನಂತರ ಸರಿಯಾಗಿ ಆಲೋಚನೆ ಮಾಡಿದರೆ ಮಾತ್ರ ಅಲ್ಲಿ ಪಾಸ್ ಆಗಲು ಸಾಧ್ಯವಿದೆ. ಇಲ್ಲಿ ಗುರು ಮತ್ತು ಶಿಷ್ಯನ ಸಂಬಂಧ ಇಟ್ಟುಕೊಂಡು ಕಥೆ ಹೆಣೆದಿದ್ದೇನೆ. ಇದು ಈಗಿನ ಯುವಕರಿಗೆ ಹೇಳಿಮಾಡಿಸಿದ ಕಥೆ. ಈಗಿನ ವಾಟ್ಸಾಪ್, ಫೇಸ್‌ಬುಕ್‌ನಲ್ಲೇ ಕಾಲ ಕಳೆಯುವ ಯುವ ಸಮೂಹಕ್ಕೊಂದು ಸಂದೇಶವಿದೆ. ಹಾಗಂತ ನೀತಿ ಪಾಠವಿಲ್ಲ. ಮನರಂಜನೆ ಜೊತೆಗೊಂದು ಸಂದೇಶವಿದೆ’ ಎನ್ನುತ್ತಾರೆ.