ಬಂಟ್ವಾಳ: ದೇಶದ ರೈತರ ಆದಾಯವು 2024ರ ವೇಳೆಗೆ ದ್ವಿಗುಣ ಗೊಳ್ಳಬೇಕು ಎಂಬ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಹಲವು ಕೃಷಿ ಪೂರಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಪೂರಕವಾಗಿ ಸಾವಯವ ಕೃಷಿಗೆ ಒತ್ತು ನೀಡುವ ಎರೆಹುಳ ಗೊಬ್ಬರ ಘಟಕಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಹೇಳಿದರು.
ಬಿ.ಸಿ.ರೋಡ್‌ನ ತೋಟಗಾರಿಕ ಇಲಾಖೆ ಆವರಣದಲ್ಲಿ ಬಂಟ್ವಾಳ ತಾ.ಪಂ. ವತಿಯಿಂದ ಬಂಟ್ವಾಳ ತೋಟಗಾರಿಕ ಹಾಗೂ ಕೃಷಿ ಇಲಾಖೆ ಸಹಯೋಗದೊಂದಿಗೆ ನಿರ್ಮಿಸಲಾದ ಮಾದರಿ ಎರೆಹುಳ ಘಟಕವನ್ನು ಉದ್ಘಾಟಿಸಿ ನರೇಗಾದ ಬಂಟ್ವಾಳ ತಾಲೂಕು ಮಟ್ಟದ ರೈತಬಂಧು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಎರೆಹುಳ ಎಂದರೆ ಕಸವನ್ನು ತಿಂದು ರಸ ಕೊಡುವ ಫ್ಯಾಕ್ಟರಿಯಾಗಿದ್ದು, ಹಿಂದೆ ಅದು ಸ್ವಾಭಾವಿಕವಾಗಿ ಗೊಬ್ಬರ ನೀಡುತ್ತಿತ್ತು. ಆದರೆ ಈಗ ರಾಸಾಯನಿಕ ಗೊಬ್ಬರದ ಪ್ರಭಾವದಿಂದ ನಶಿಸಿ ಹೋಗುತ್ತಿದ್ದು, ಅದನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ ಪ್ರತಿ ಗ್ರಾ.ಪಂ. ಮಟ್ಟದಲ್ಲಿ 25 ಎರೆಹುಳ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಇದು ಕೃಷಿಗೆ ಅತ್ಯುತ್ತಮ ದರ್ಜೆಯ ಗೊಬ್ಬರ ಎಂದರು.
ಇದನ್ನೂ ಓದಿ:ಕಲಹ ಪೀಡಿತ ಕಾಬೂಲ್ ನಿಂದ ದೆಹಲಿಗೆ ಬಂದಿಳಿದ 129 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮಾತನಾಡಿ, ರೈತಬಂಧು ಅಭಿಯಾನದ ಮೂಲಕ ಎರೆಹುಳ ಗೊಬ್ಬರ ಘಟಕ ಸ್ಥಾಪನೆಗೆ 27 ಸಾವಿರ ರೂ. ನೀಡಲಾಗುತ್ತಿದ್ದು, ಈಗಾಗಲೇ ಮಾದರಿಗಳನ್ನು ನೀಡಲಾಗಿದೆ. ಪಿಡಿಒಗಳ ಸಭೆ ನಡೆಸಿ ನಿರ್ದೇಶನ ನೀಡಲಾಗಿದೆ ಎಂದರು.
ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಬಂಟ್ವಾಳ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಪ್ರದೀಪ್ ಡಿ’ಸೋಜಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಕೇಶವಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ., ತಾಂತ್ರಿಕ ಅಧಿಕಾರಿ ನಂದನ್ ಶೆಣೈ, ತಾ.ಪಂ. ಸಹಾಯಕ ನಿರ್ದೇಶಕ ದಿನೇಶ್, ವ್ಯವಸ್ಥಾಪಕಿ ಶಾಂಭವಿ ರಾವ್, ತಾಂತ್ರಿಕ ಸಂಯೋಜಕರು, ಪ್ರಮುಖರಾದ ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ ವಾಮದಪದವು, ಯಶೋಧರ ಕರ್ಬೆಟ್ಟು ಉಪಸ್ಥಿತರಿದ್ದರು.