Advertisement

Uv Fusion: ಮೂಢನಂಬಿಕೆ

03:05 PM Oct 13, 2023 | Team Udayavani |

ಮಾನವನು ಸಂಘ ಜೀವಿ. ಅವನು ಸಮಾಜದಲ್ಲಿ ಬದುಕುತ್ತಾ ಕೆಲವು ಅಪ ನಂಬಿಕೆಗಳನ್ನು ಬೆಳೆಸಿಕೊಳ್ಳುತ್ತಾನೆ ಮತ್ತು ಅದನ್ನು ತನಗರಿವಿಲ್ಲದೆ ಅನುಸರಿಸುತ್ತಾನೆ. ಇದು ಒಂದು ನಂಬಿಕೆಯಾಗಿದ್ದು ಪ್ರಕೃತಿ ನಿಯಮಗಳಿಗೆ  ಅಥವಾ ವಿಜ್ಞಾನದ ತಿಳಿವಳಿಕೆಗೆ ವಿರುದ್ಧವಾಗಿರುತ್ತದೆ.

Advertisement

ನಂಬಿಕೆ ಮಾತ್ರದಿಂದಲೇ ಅನುಸರಿಸುವ ಕೆಲವು ಆಚರಣೆಗಳಿಗೆ ಮೂಢನಂಬಿಕೆ ಎನ್ನಬಹುದು. ಮೂಢ ನಂಬಿಕೆಗಳು ಮನುಷ್ಯನ ಹುಟ್ಟಿನಷ್ಟೇ ಹಳೆಯದಾಗಿದೆ. ಇವು ಶತಮಾನಗಳಿಂದ ಮಾನವನ ಜೀವನದೊಂದಿಗೆ ಹಾಸುಹೊಕ್ಕಾಗಿ ಬೆಳೆದು ಬಂದಿದೆ. ಅಂಜಿಕೆ, ಅಜ್ಞಾನಗಳೇ  ಇವುಗಳ ಮೂಲ. ನಿಸರ್ಗದ ಭೀತಿಗಳಿಂದ ರಕ್ಷಣೆ ಪಡೆಯುವ ಆಸೆಯಿಂದ ಮನುಷ್ಯನು ತನ್ನದೇ ಅದ ಕೆಲವು ನಂಬಿಕೆಗಳನ್ನು ಬೆಳಿಸಿಕೊಂಡನು. ಇವೇ ಮುಂದೆ ಮೂಢನಂಬಿಕೆಗಳಾಗಿ ಬೆಳೆದವು.

ಸಾಮಾನ್ಯವಾಗಿ ಜನರು ಇತರ ದೇಶಗಳಿಗಿಂತ  ಭಾರತದಲ್ಲಿ ಹೆಚ್ಚು ಮೂಢನಂಬಿಕೆಗಳಿವೆ ಎಂದು ಭಾವಿಸುತ್ತಾರೆ, ಆದರೆ ಇವು ತಪ್ಪು ದಾರಿಗೆಳೆಯುವ  ಕಲ್ಪನೆಯಾಗಿದೆ. ಮೂಢನಂಬಿಕೆಯನ್ನು ಪ್ರತಿಯೊಂದು ಸಮಾಜದ, ದೇಶದ ಎಲ್ಲ ಜನಾಂಗಗಳಲ್ಲೂ ಕಾಣಬಹುದು.

ಮನೆಯಲ್ಲಿ ರೋಗಿ ಇರುವಾಗ ರಾತ್ರಿ ನಾಯಿ ಊಳಿಟ್ಟರೆ, ಕಾಗೆ ಕೂಗಿದರೆ  ರೋಗಿಯು ಸಾಯುವನೆಂಬ ನಂಬಿಕೆ ಇದೆ. ಯಾವುದಾದರೂ ಮಹತ್ವದ ಕೆಲಸಕ್ಕೆ ಹೋರಾಟಾಗ ಬೆಕ್ಕು ಅಡ್ಡ ಬಂದರೆ ಆ ಕಾರ್ಯ ಆಗುವುದಿಲ್ಲ, ಎದುರಿಗೆ ಕಟ್ಟಿಗೆ ಹೊರೆ ಬಂದರೂ ಅಪಶಕುನವೆಂಬ ನಂಬಿಕೆಯಿದೆ. ಮಂಗಳ ಕಾರ್ಯಕ್ಕೆ ಕುಳಿತಾಗ ಬೊಕ್ಕ ತಲೆಯಿಂದ ಇರಬಾರದಂದು ಹೇಳುವರು. ಇವುಗಳಿಗೆ ಕೆಲವು ಮನಃಶಾಸ್ತ್ರದ ಹಿನ್ನಲೆಯೂ ಇರಬಹುದೇನೋ.

ನಾಯಿಯ ಊಳು, ಕಾಗೆಯ ಕೆಟ್ಟ ಧ್ವನಿ ಇವುಗಳು ರೋಗಿಯ ಸೂಕ್ಷ್ಮ ಮನಸಿನ ಶಾಂತಿಯನ್ನು ಕದಡಬಹುದು. ಆತನು ಅತಿ ಮೃದು ಮನದವನಾಗಿದ್ದೆ  ಇದೇ  ಕಾರಣದಿಂದಲೇ ಮನಸ್ಸು ಕ್ರಿಯೆಯನ್ನು ನಿಲ್ಲಿಸಬಹುದಲ್ಲವೇ? ಕಟ್ಟಿಗೆ ಹೊರೆಯು ಶ್ಮಶಾನದ ನೆನಪನ್ನು, ಬೊಕ್ಕತಲೆ ಅಂತ್ಯಯಾತ್ರೆಯ ನೆನಪನ್ನು ತರಬಹುದಲ್ಲವೇ?  ಹೀಗೆ ಅಮಂಗಲದ ನೆನಪು ಮನಸಿನ ದೃಢತೆಯನ್ನು ಕುಗ್ಗಿಸಬಹುದು ಎಂಬ ಅಂಶಗಳಿಂದ ಇಂತಹ ಮೂಢನಂಬಿಕೆಗಳು ಬೆಳೆದು ಬಂದಿರಬಹುದು.

Advertisement

ಶಕುನಗಳು ಸಹ ಮೂಢನಂಬಿಕೆಯ ಸಾಲಿನಲ್ಲಿಯೇ ಬರುವವು.   ಹಲ್ಲಿಯು ಲೊಚಗುಟ್ಟಾಗ ದೇವರನ್ನು ನೆನಪಿಸಿಕೊಳ್ಳಬೇಕಂತೆ. ಹಲ್ಲಿಗಳು ಮೈಮೇಲೆ ಬಿದ್ದರೆ ವಿವಿಧ ಫ‌ಲಾಫ‌ಲಗಳನ್ನು ಹೇಳುವ ಹಲ್ಲಿ ಶಕುನದ ಶಾಸ್ತ್ರವೇ ಇದೆ. ಪ್ರಗತಿಪರ  ರಾಷ್ಟ್ರಗಳಲ್ಲೂ ಒಂದಲ್ಲೊಂದು ರೀತಿಯ ಅಪಶಕುನ ಹಾಗೂ ನಂಬಿಕೆಗಳಿವೆ. ಕಾಗೆಯ ಶಕುನಕಂಜದ ಸಿಸಿರೋ ಎಂಬ ರಾಜನೊಬ್ಬ ಹಿಂದಿರುಗಿ ಶತ್ರುಗಳ ಕೆಯ್ಗೆ ಸಿಕ್ಕಿ ಸತ್ತನು ಎಂದು ಹೇಳಲಾಗುವ ಪರದೇಸಿ ಕಥೆಗಳಿವೆ.

ಇಂದಿನ ನಮ್ಮ ರಾಜಕೀಯ ಮುಖಂಡರ ಸುತ್ತ ಭವಿಷ್ಯ ನುಡಿಯುವ ತಂಡವೇ ಇರುವುದನ್ನು ನಾವು ನೋಡಬಹುದು. ಹಾಗೆಯೇ ಪರದೇಶಗಳಲ್ಲಿ 13 ಅಂಕಿ ಅಪಶಕುನ, ಅಶುಭ ಎಂದು ತಿಳಿಯುವರು ಅದಕ್ಕಾಗಿ ಅಲ್ಲಿಯ ಹೊಟೇಲ್‌ಗ‌ಳಲ್ಲಿ 13 ನಂಬರಿ ನ ಬದಲಿಗೆ ಅದನ್ನು 12 ಅ  ಎಂದು ಸೂಚಿಸಿರುವುದನ್ನು ಕಾಣಬಹುದು.  ಇಂತಹ ಮೂಢನಂಬಿಕೆಗಳನ್ನು ಬೇಗ ಕಿತ್ತು ಹಾಕಬೇಕು. ಇಲ್ಲವಾದರೆ ಇವು ಸಮಾಜದಲ್ಲಿ ಅಜ್ಞಾನ ಮತ್ತು ಭಯಾನಕ ವಾತಾವರಣವನ್ನು ಇನ್ನಷ್ಟು ಬೆಳೆಸಬಹುದು.

ಮನುಷ್ಯನ ಜೀವನದಲ್ಲಿ ರಕ್ತಗತವಾಗುವವು. ಎಲ್ಲ ನಂಬಿಕೆಗಳು ಮೂಢನಂಬಿಕೆಗಳು ಎಂದಲ್ಲ. ಕೆಲವು ನಂಬಿಕೆಗಳಲ್ಲಿ ಹುರುಳಿದ್ದರೂ ಕೆಲವು ನಂಬಿಕೆಗಳು ವಿನಾಕಾರಣ ಬೆಳೆಯಹುದು. ಈ ಮೂಢನಂಬಿಕೆಗಳು ಒಂದು ದೇಶದ ಬೆಳವಣಿಗೆಯನ್ನು ಕುಂಠಿತ ಗೊಳಿಸಲೂ ಬಹುದು. ಆದ್ದರಿಂದ ಯಾವುದೇ ನಂಬಿಕೆಗಳನ್ನು ಅದರ ಹಿನ್ನೆಲೆ ಅರಿಯದೆ ನಾವು ನಂಬಬಾರದು.

-ವಾಣಿ ದಾಸ್‌,

ಎಂ. ಎಂ. ಮಹಾವಿದ್ಯಾಲಯ ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next