ಹೊಸದಿಲ್ಲಿ : ನಾಲ್ಕನೇ ಅವಧಿಗೆ ಗೆಲವಿನತ್ತ ಮುಖಮಾಡಿರುವ ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಅವರು 004 ಸಂಖ್ಯೆಯಿಂದ ಕೊನೆಗೊಳ್ಳುವ ನಂಬರ್ ಪ್ಲೇಟ್ ಹೊಂದಿರುವ 19 ಮಿತ್ಸುಬಿಷಿ ಪ್ಯಾಜೆರೊ ಎಸ್‌ಯುವಿ ಕಾರುಗಳನ್ನು ಈಚೆಗೆ ಖರೀದಿಸಿದ್ದಾರೆ.
ಮಾವೋ ಉಗ್ರರಿಂದ ಬಾಧಿತವಾಗಿರುವ ಹಲವಾರು ಸೂಕ್ಷ್ಮ, ದುರ್ಗಮ ಮತ್ತು ರಸ್ತೆಗಳೇ ಇಲ್ಲದ ಪ್ರದೇಶಗಳಲ್ಲಿ ಅನಾಯಾಸವಾಗಿ ಓಡುವ ಭೀಮ ಬಲದ ಎಸ್‌ಯುವಿ ವಾಹನಗಳನ್ನು ಖರೀದಿಸಲು ಸಿಎಂ ನಿರ್ಧರಿಸಿದ್ದಾರೆ ಎಂದು ಕೆಲವರು ಹೇಳುತ್ತಾರೆ; ಇನ್ನು ಕೆಲವರು ಪ್ರಕಾರ 19 ಸಂಖ್ಯೆಯು ವಿಜಯದ ಸಂಕೇತವಾಗಿದೆ.
ಅದೇನಿದ್ದರೂ 19 ಕಾರುಗಳನ್ನು, 004 ಅಂಕೆಗಳೊಂದಿಗೆ ಕೊನೆಗೊಳ್ಳುವ ನಂಬರ್ ಪ್ಲೇಟ್ ಇರುವಂಥವುಗಳನ್ನು ಸಿಎಂ ಖರೀದಿಸಿರುವುದನ್ನು ಕಂಡರೆ ಅವರ ‘ಮೂಢನಂಬಿಕೆ ಟಾಪ್ ಗೇರ್’ ನಲ್ಲಿದೆ ಎಂದು ಹಲವರು ಹೇಳುತ್ತಾರೆ.
ಆದರೆ ರಮಣ್ ಸಿಂಗ್ ಅವರು ಖುದ್ದು ಈ ಎಲ್ಲ ಊಹಾಪೋಹಗಳನ್ನು ಬಲವಾಗಿ ತಳ್ಳಿ ಹಾಕಿದ್ದಾರೆ. “ನಂಬರ್ ಪ್ಲೇಟ್ ನಿರ್ಧಾರ ಮಾಡುವುದು ನಾವಲ್ಲ, ಆರ್‌ಟಿಓ; ಯಾವುದೇ ನಂಬರ್ ಪ್ಲೇಟ್ ಸಿಕ್ಕರೂ ಅದು ನಮಗೆ ಲಕ್ಕೀ ನಂಬರ್ ಆಗಿಯೇ ಇರುತ್ತದೆ. ನಾನು ಯಾವುದೇ ಬಗೆಯ ಮಾಟ ಮಂತ್ರ, ಯಂತ್ರ – ತಂತ್ರಗಳಲ್ಲಿ, ಯಾವುದೇ ಮೂಢನಂಬಿಕೆಗಳಲ್ಲಿ ವಿಶ್ವಾಸ ಇರಿಸಿದವನಲ್ಲ’ ಎಂದು ಮಾಧ್ಯಮದವರಿಗೆ ಹೇಳಿದ್ದಾರೆ.
2003ರಲ್ಲಿ ಕಾಂಗ್ರೆಸ್‌ನ ಅಜಿತ್ ಜೋಗಿಯಿಂದ ಅಧಿಕಾರ ಪಡೆದಂದಿನಿಂದಲೂ ನಿರಂತರ ಮೂರು ಅವಧಿಗೆ ರಮಣ್ ಸಿಂಗ್ ಸಿಎಂ ಆಗಿ ಅಧಿಕಾರ ನಡೆಸಿದ್ದಾರೆ. ಈಗಿನ್ನು 4ನೇ ಅವಧಿಯ ಮೇಲೆ ಕಣ್ಣಿಟ್ಟಿರುವ ಕಾರಣದಿಂದಲೇ ಅವರು ತಮ್ಮಲ್ಲಿನ ಬಲವಾದ ಮೂಢ ನಂಬಿಕೆಯ ಫಲವಾಗಿಯೇ 19 ಎಸ್‌ಯುವಿ ಗಳನ್ನು 004 ಸಂಖ್ಯೆಯೊಂದಿಗೆ ಅಂತ್ಯಗೊಳ್ಳುವ ನಂಬರ್ ಪ್ಲೇಟ್ ಸಹಿತವಾಗಿ ಖರೀದಿಸಿದ್ದಾರೆ ಎಂಬುದು ಹಲವರ ಅಂಬೋಣ.