Advertisement

SuperStars; ನವನಿರ್ದೇಶಕರ ಕೈಯಲ್ಲಿ ಸೂಪರ್‌ಸ್ಟಾರ್: ಹಳೆ ಬೇರು ಹೊಸ ಚಿಗುರು

04:46 PM Aug 17, 2023 | Team Udayavani |

ಜನರೇಶನ್‌ ಬದಲಾಗುತ್ತಿದ್ದಂತೆ ಟ್ರೆಂಡ್‌ ಕೂಡಾ ಬದಲಾಗುತ್ತದೆ. ಬದಲಾದ ಟ್ರೆಂಡ್‌ ಅನ್ನು ಅಪ್ಪಿಕೊಂಡು, ಒಪ್ಪಿಕೊಂಡವನೇ ಜಾಣ. ಅದರಲ್ಲೂ ಸಿನಿಮಾ ರಂಗ ನಿಂತಿರೋದೇ ಟ್ರೆಂಡ್‌ ಮೇಲೆ ಎಂದರೆ ತಪ್ಪಲ್ಲ. ಒಂದೊಳ್ಳೆಯ ಕಂಟೆಂಟ್‌ ಅನ್ನು ಇವತ್ತಿನ ಟ್ರೆಂಡ್‌ಗೆ ತಕ್ಕಂತೆ ಕೊಟ್ಟು ಬಿಟ್ಟರೆ ಆ ಚಿತ್ರ ಅರ್ಧ ಗೆದ್ದಂತೆ. ಇದನ್ನು ಚೆನ್ನಾಗಿ ಅರ್ಥಮಾಡಿಕೊಂಡು ಸದ್ಯ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿದ್ದಾರೆ ಮೂವರು ಸೂಪರ್‌ ಸ್ಟಾರ್‌ಗಳು. ಅವರೇ ರಜನಿಕಾಂತ್‌, ಕಮಲ್‌ ಹಾಸನ್‌ ಹಾಗೂ ಚಿರಂಜೀವಿ.

Advertisement

ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್‌ಗಳ ಬಗ್ಗೆ ಮಾತನಾಡಲು ಹೊರಟರೆ ಇವರನ್ನು ಬಿಟ್ಟು ಮಾತು ಮುಂದೆ ಹೋಗುವುದೇ ಇಲ್ಲ. 1975ರಿಂದ ರಜನಿ ಕಾಂತ್‌, 1978ರಿಂದ ಚಿರಂಜೀವಿ ಹಾಗೂ 1973ರಿಂದ ಕಮಲ್‌ಹಾಸನ್‌ ತಮ್ಮ ಪ್ರೇಕ್ಷಕರನ್ನು ರಂಜಿಸುತ್ತಲೇ ಬಂದಿದ್ದಾರೆ. ಈ ಹಂತದಲ್ಲಿ ಸೂಪರ್‌ ಹಿಟ್‌ ಸಿನಿಮಾಗಳ ಜೊತೆಗೆ ಇನ್ನಿಲ್ಲದಂತೆ ಫ್ಲಾಫ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಆದರೆ, ಈ ನಟರ ಒಂದು ವೈಶಿಷ್ಟéವೆಂದರೆ ಕಾಲಕ್ಕೆ ತಕ್ಕಂತೆ ಅಪ್‌ಡೇಟ್‌ ಆಗುತ್ತಾ, ಹೊಸ ನಿರ್ದೇಶಕರಿಗೆ ಪ್ರೋತ್ಸಾಹ ನೀಡುತ್ತಾ ಬಂದ ಪರಿಣಾಮ ಈಗ ಈ ಮೂವರು ದೊಡ್ಡ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ.

ನೀವು ಸೂಕ್ಷ್ಮವಾಗಿ ಗಮನಿಸಿದರೆ ಇತ್ತೀಚಿನ ವರ್ಷಗಳಲ್ಲಿ ರಜನಿಕಾಂತ್‌ ಅವರಿಗೆ ಯಾವ ಸಿನಿಮಾವೂ ದೊಡ್ಡ ಮಟ್ಟದಲ್ಲಿ ಕೈ ಹಿಡಿಯಲಿಲ್ಲ. ಬಿಡುಗಡೆ ಪೂರ್ವದಲ್ಲಿದ್ದ ಅವರ ಸಿನಿಮಾಗಳ ಕ್ರೇಜ್‌, ಬಿಡುಗಡೆ ಬಳಿಕ ಮುಂದುವರೆಯಲೇ ಇಲ್ಲ. ಇದೇ ಮಾತು ಕಮಲ್‌ ಹಾಸನ್‌ ಹಾಗೂ ಚಿರಂಜೀವಿ ಅವರಿಗೂ ಅನ್ವಯವಾಗುತ್ತದೆ. ಆದರೆ, ಈಗ ಈ ಮೂವರು ಸೂಪರ್‌ಸ್ಟಾರ್‌ಗಳಿಗೂ ಒಂದೊಂದು ಯಶಸ್ಸು ಸಿಕ್ಕಿದೆ. ಈ ಯಶಸ್ಸನ್ನು ತಂದುಕೊಟ್ಟವರು ನವ ನಿರ್ದೇಶಕರು ಎಂಬುದು ವಿಶೇಷ.

ಹೌದು, ರಜನಿಕಾಂತ್‌ “ಜೈಲರ್‌’ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ. ಈ ಚಿತ್ರವನ್ನು ನಿರ್ದೇಶಿಸಿರುವ ನೆಲ್ಸನ್‌ಗೆ “ಜೈಲರ್‌’ ಐದನೇ ಚಿತ್ರ. ಸೂಪರ್‌ಸ್ಟಾರ್‌ ರಜನಿಕಾಂತ್‌ ಈ ನವನಿರ್ದೇಶಕನ ಮೇಲೆ ನಂಬಿಕೆ ಇಟ್ಟು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ಪರಿಣಾಮ ಈಗ “ಜೈಲರ್‌’ ಸೂಪರ್‌ ಹಿಟ್‌ ಆಗಿ ಮುಂದುವರೆಯುತ್ತಿದೆ.

ಇನ್ನು ಮೆಗಾಸ್ಟಾರ್‌ ಚಿರಂಜೀವಿ ಅವರಿಗೆ ಈ ವರ್ಷಾರಂಭದಲ್ಲೇ ಗೆಲುವು ತಂದುಕೊಟ್ಟಿದ್ದು ಕೂಡಾ ನವನಿರ್ದೇಶಕ ಎಂಬುದು ಗಮನಾರ್ಹ. “ವಾಲ್ಟರ್‌ ವೀರಯ್ಯ’ ಸಿನಿಮಾ ನಿರ್ದೇಶಿಸಿರುವ ಬಾಬಿ (ಕೆ.ಎಸ್‌.ರವೀಂದ್ರ) ಅವರಿಗೆ “ವಾಲ್ಟರ್‌ ವೀರಯ್ಯ’ ಐದನೇ ಚಿತ್ರ. ಈ ಚಿತ್ರ ಭರ್ಜರಿ ಹಿಟ್‌ ಆಗುವ ಮೂಲಕ ಚಿರಂಜೀವಿ ಅವರ ಕೆರಿಯರ್‌ಗೆ ಬೂಸ್ಟ್‌ ನೀಡಿದ್ದು ಸುಳ್ಳಲ್ಲ. ಹೀಗೆ ಹಳೆ ಬೇರು ಹೊಸ ಚಿಗುರು ಚಿತ್ರರಂಗದಲ್ಲಿ ಫ‌ಲ ನೀಡುತ್ತಿರುವುದು ಸುಳ್ಳಲ್ಲ. ಗೆಲುವಿಗೆ ಬೇಕಾಗಿರುವುದು ಸ್ಟಾರ್‌ಗಿರಿಯಲ್ಲ, ಹೊಸತನದ ತುಡಿತ ಎಂಬುದು ಮತ್ತೆ ಸಾಬೀತಾಗುತ್ತಿದೆ.

Advertisement

ಕಮಲ್‌ ಕೈಹಿಡಿದ ವಿಕ್ರಮ್‌: ಕಮಲ್‌ ಹಾಸನ್‌ ಅವರ ವಿಚಾರಕ್ಕೆ ಬರುವುದಾದರೆ ಕಳೆದ ವರ್ಷ ಜೂನ್‌ನಲ್ಲಿ ಬಿಡುಗಡೆಯಾದ “ವಿಕ್ರಮ್‌’ ಚಿತ್ರ ದೊಡ್ಡ ಯಶಸ್ಸು ತಂದುಕೊಟ್ಟಿತು. ಈ ಚಿತ್ರವನ್ನು ನಿರ್ದೇಶಿಸಿರುವ ಲೋಕೇಶ್‌ ಕನಕರಾಜ್‌ ಅವರಿಗೆ “ವಿಕ್ರಮ್‌’ ಆರನೇ ಸಿನಿಮಾ. ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಕಮಲ್‌ ಕೂಡಾ ಹಳೆ ಬೇರು ಹೊಸ ಚಿಗುರು ಎಂಬಂತೆ ನವನಿರ್ದೇಶಕನ ಕನಸಿಗೆ ಸಾಥ್‌ ಕೊಟ್ಟ ಪರಿಣಾಮ “ವಿಕ್ರಮ್‌’ ಅವರ ಕೆರಿಯರ್‌ನ ಸೂಪರ್‌ ಹಿಟ್‌ ಸಿನಿಮಾವಾಗಿ ನಿಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next