Advertisement
ಈ ಯೋಜನೆಯಂತೆ ಸೂಪರ್ ಸ್ಪೆಷಾಲಿಟಿ ಶ್ರೇಣಿಯಲ್ಲಿರುವ ತಜ್ಞ ಹಾಗೂ ನುರಿತ ವೈದ್ಯರನ್ನು ರಾಜ್ಯದ ಎಲ್ಲ ಜಿಲ್ಲಾ ಮತ್ತು ಜನರಲ್ ಆಸ್ಪತ್ರೆಗಳಲ್ಲಿ ಶೀಘ್ರದಲ್ಲೇ ನೇಮಿಸುವ ಕ್ರಮಗಳು ನಡೆಯುತ್ತಿವೆ. ಅದಕ್ಕಿರುವ ಅಗತ್ಯದ ಕಟ್ಟಡ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಸದ್ಯದಲ್ಲೇ ಏರ್ಪಡಿಸಲಾಗುವುದು. ಉನ್ನತ ಮಟ್ಟದ ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ಒದಗಿಸುವ ಸೌಲಭ್ಯಗಳನ್ನು ಕೂಡ ಒದಗಿಸಲಾಗುವುದು ಎಂದು ಸಚಿವೆ ಕೆ.ಕೆ. ಶೈಲಜಾ ವಿವರಿಸಿದರು.
ವೈದ್ಯಕೀಯ ಕಾಲೇಜುಗಳಿಲ್ಲದ ಜಿಲ್ಲೆಗಳ ರೋಗಿಗಳು ಉನ್ನತ ಮಟ್ಟದ ಚಿಕಿತ್ಸೆಗಾಗಿ ಬೇರೆ ಜಿಲ್ಲೆಗಳ ವೈದ್ಯಕೀಯ ಆಸ್ಪತ್ರೆಗಳು ಅಥವಾ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಈಗಿದೆ. ಅಂತಹ ಚಿಕಿತ್ಸೆಗೆ ಭಾರೀ ಖರ್ಚು ತಗಲುತ್ತಿದೆ. ಬಡವರಿಗೆ ಇದು ಕೈಗೆಟುಕದ ವಿಷಯವಾಗಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ರಾಜ್ಯ ಸರಕಾರವು ಈ ಹೊಸ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ. ಕಾಸರಗೋಡು ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರಿಗೆ ಉನ್ನತ ಮಟ್ಟದ ಚಿಕಿತ್ಸೆಗಾಗಿಯೂ ಇದು ಸಹಕಾರಿಯಾಗಲಿದೆ. ಸರಕಾರದ ಈ ತೀರ್ಮಾನದಂತೆ ಕಾಸರಗೋಡು ಜನರಲ್ ಆಸ್ಪತ್ರೆ ಮತ್ತು ಕಾಂಞಂಗಾಡು ಚೆಮ್ಮಟಂವಯಲ್‌ನಲ್ಲಿರುವ ಕಾಸರಗೋಡು ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಶೀಘ್ರದಲ್ಲೇ ಸೂಪರ್ ಸ್ಪೆಷಾಲಿಟಿ ಚಿಕಿತ್ಸಾ ಸೌಕರ್ಯ ಲಭ್ಯವಾಗಲಿದೆ. ಈ ಮಧ್ಯೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಈ ಯೋಜನೆಯನ್ನು ವಿಸ್ತರಿಸುವ ಕ್ರಮಗಳೂ ನಡೆಯುತ್ತಿವೆ. ಜಿಲ್ಲೆ ಮತ್ತು ಜನರಲ್ ಆಸ್ಪತ್ರೆಗಳ ವಿಭಾಗಗಳಲ್ಲಿ ಸೂಪರ್ ಸ್ಪೆಷಾಲಿಟಿ ಅಗತ್ಯದ ವೈದ್ಯರನ್ನು ನೇಮಿಸಲು ರಾಜ್ಯ ಆರೋಗ್ಯ ಇಲಾಖೆಯಲ್ಲಿ ಸೂಪರ್ ಸ್ಪೆಷಾಲಿಟಿ ಅರ್ಹತೆ ಹೊಂದಿರುವ ವೈದ್ಯರನ್ನು ಒಳಪಡಿಸಿ ವಿಶೇಷ ಕೇಡರ್‌ಗಳಿಗೂ ಈಗಾಗಲೇ ರೂಪು ನೀಡಲಾಗಿದೆ. ಈ ಮೂಲಕ ಎಲ್ಲಾ ಜಿಲ್ಲೆಗಳ ಸೂಪರ್ ಸ್ಪೆಷಾಲಿಟಿ ವಿಭಾಗಗಳಿಗೆ ಅಗತ್ಯದ ವೈದ್ಯರನ್ನು ನೇಮಿಸಲು ಕೂಡ ನಿರ್ಧರಿಸಲಾಗಿದೆ.
Related Articles
ಕಾಸರಗೋಡು ಜಿಲ್ಲೆಯ ಜನರಲ್ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಗಳನ್ನು ಸೂಪರ್ ಸ್ಪೆಷಾಲಿಟಿಯಾಗಿ ಮೇಲ್ದರ್ಜೆಗೆ ಏರಿಸಿದ್ದಲ್ಲಿ ಜಿಲ್ಲೆಯ ರೋಗಿಗಳಿಗೆ ಹೆಚ್ಚು ಪ್ರಯೋಜನ ದೊರಕಲಿದೆ. ಇದೀಗ ಜಿಲ್ಲೆಯ ರೋಗಿಗಳು ಉನ್ನತ ಮಟ್ಟದ ಚಿಕಿತ್ಸೆಗೆ ಮಂಗಳೂರು, ಮಣಿಪಾಲ ಹಾಗೂ ಪರಿಯಾರಂ ವೈದ್ಯಕೀಯ ಆಸ್ಪತ್ರೆಗಳಿಗೆ ತೆರಳುತ್ತಿದ್ದು, ಕೇರಳ ಸರಕಾರದ ನೂತನ ಯೋಜನೆಯು ಜಾರಿಗೆ ಬಂದಲ್ಲಿ ಅತೀ ಹೆಚ್ಚು ಉಪಕಾರವಾಗಲಿದೆ. ಅಲ್ಲದೆ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಉತ್ತಮ ಚಿಕಿತ್ಸೆ ಕೂಡ ಲಭಿಸಲಿದೆ. ಈ ಮೂಲಕ ಕಾಸರಗೋಡು ಜಿಲ್ಲೆಯು ವೈದ್ಯಕೀಯ ರಂಗದಲ್ಲಿ ಅಭಿವೃದ್ಧಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
Advertisement