Advertisement

Super Specialty Hospital: ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸೇವೆ ಸದ್ಯಕ್ಕಿಲ್ಲ!

03:51 PM Aug 19, 2023 | Team Udayavani |

ಹಾಸನ: ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್‌) ಗೆ ಸೇರಿದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ 55 ಕೋಟಿ ರೂ. ವೆಚ್ಚದ ಕಟ್ಟಡವೇನೋ ನಿರ್ಮಾಣವಾಗಿದೆ. ಆದರೆ, ಅದರ ಸೇವೆ ಹಾಸನ ಮತ್ತು ಸುತ್ತಮುತ್ತಲಿನ ನಾಗರಿಕರಿಗೆ ಸದ್ಯಕ್ಕೆ ಲಭ್ಯ ವಾಗುವ ಸಾಧ್ಯತೆ ಕಾಣುತ್ತಿಲ್ಲ.

Advertisement

ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್‌.ಡಿ.ರೇವಣ್ಣ ಅವರ  ಮಹತ್ವಾಕಾಂಕ್ಷೆಯ 200 ಕೋಟಿ ರೂ. ಅಂದಾಜಿನ 10 ಸೂಪರ್‌ ಸ್ಪೆಷಾಲಿಟಿ ಚಿಕಿತ್ಸಾ ಸೌಲಭ್ಯಗಳ ಆಸ್ಪತ್ರೆ ಹಾಸನಕ್ಕೆ ಮಂಜೂರಾಗಿತ್ತು.

ಹಾಸನದ ಆರ್‌.ಸಿ.ರಸ್ತೆಯ ಗಂಧದ ಕೋಠಿ ಆವರಣದಲ್ಲಿ 5 ಅಂತಸ್ತಿನ ಸುಸಜ್ಜಿತ ಕಟ್ಟಡದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾರ್ಯ 2019-20ನೇ ಸಾಲಿನಲ್ಲಿ ಆರಂಭವಾಗಿತ್ತು. ಮೊದಲ ಹಂತದ 55 ಕೋಟಿ ರೂ. ಅಂದಾಜಿನಲ್ಲಿ ನೆಲ ಅಂತಸ್ತು ಮತ್ತು ಮೊದಲ ಅಂತಸ್ತಿನಲ್ಲಿ 4 ಸೂಪರ್‌ ಸ್ಪೆಷಾಲಟಿ ಚಿಕಿತ್ಸಾ ಸೌಲಭ್ಯ ಕಲ್ಪಿಸಬಹುದಾದ ಕಟ್ಟಡ ನಿರ್ಮಾಣದ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ.

ನೆಲ ಅಂತಸ್ತು ಸೇರಿ 5 ಅಂತಸ್ತಿನ ಕಟ್ಟಡ: ಮೊದಲ ಹಂತದಲ್ಲಿ ನಿಗದಿಯಾಗಿದ್ದಂತೆ ಈಗ ನೆಲ ಅಂತಸ್ತು ಮತ್ತು ಮೊದಲ ಅಂತಸ್ತಿನ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ. ಆ ಕಟ್ಟಡದಲ್ಲಿಯೇ ಇನ್ನೂ ಮೂರು ಅಂತಸ್ತಿನ ಕಟ್ಟಡ ನಿರ್ಮಾಣವಾಗಬೇಕಾಗಿದೆ. ಮೊದಲ ಯೋಜನೆಯಂತೆ ನೆಲ ಅಂತಸ್ತು ಸೇರಿ ಒಟ್ಟು  5 ಅಂತಸ್ತಿನ  ಬೃಹತ್‌ ಕಟ್ಟಡದಲ್ಲಿ 10 ಸೂಪರ್‌ ಸ್ಪೆಷಾಲಿಟಿ ಚಿಕಿತ್ಸಾ ಸೌಲಭ್ಯಗಳು ಆಸ್ಪತ್ರೆಯಲ್ಲಿ ಲಭ್ಯವಾಗಬೇಕು.

ಮೊದಲ ಹಂತದಲ್ಲಿ  ನ್ಯೂರಾಲಜಿ ( ನರ ರೋಗ ಚಿಕಿತ್ಸೆ ), ನ್ಯೂರೋ ಸರ್ಜರಿ ( ನರ ರೋಗ ಶಸ್ತ್ರ ಚಿಕಿತ್ಸೆ),  ಕಾರ್ಡಿಯಾಲಜಿ (ಹೃದ್ರೋಗ) ಮತ್ತು ಕಾರ್ಡಿಯಾಕ್‌ ಸರ್ಜರಿ (ಹೃದ್ರೋಗ ಶಸ್ತ್ರ ಚಿಕಿತ್ಸೆ) ಸೇರಿ 4 ಸೂಪರ್‌ ಸ್ಪೆಷಾಲಿಟಿ ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಯೋಜಿಸಲಾಗಿದೆ.

Advertisement

ಈಗ ನಿರ್ಮಾಣವಾಗಿರುವ ಕಟ್ಟಡದಲ್ಲಿ 4 ಸೂಪರ್‌ ಸ್ಪೆಷಾಲಿಟಿ ಚಿಕಿತ್ಸಾ ಸೌಲಭ್ಯಕಲ್ಪಿಸಬಹುದು. ಅಂದರೆ ನೆಲ ಅಂತಸ್ತಿನ ಕಟ್ಟಡದಲ್ಲಿ ನರರೋಗ ಮತ್ತು ನರ ರೋಗ ಶಸ್ತ್ರಚಿಕಿತ್ಸೆ ಅಂದರೆ ಸರಳವಾಗಿ ಹೇಳುವುದಾದರೆ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಸಿಗಬಹುದಾದ ಎಲ್ಲ ಚಿಕಿತ್ಸೆಗಳು ಲಭ್ಯವಾಗಬೇಕು.

ತಜ್ಞ ವೈದ್ಯರ ನೇಮಕಾತಿ ಅನುಮಾನ?: ಮೊದಲ ಅಂತಸ್ತಿನಲ್ಲಿ ಕಾರ್ಡಿಯಾಲಜಿ ( ಹೃದ್ರೋಗ) ಮತ್ತು ಕಾರ್ಡಿಯಾಕ್‌ ಸರ್ಜರಿ ( ಹೃದ್ರೋಗ ಶಸ್ತ್ರ ಚಿಕಿತ್ಸೆ)  ಅಂದರೆ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಲಭ್ಯವಾಗುತ್ತಿರುವ ಎಲ್ಲ ಚಿಕಿತ್ಸೆಗಳನ್ನು ಕಲ್ಪಿಸಬಹುದಾದ ಭೌತಿಕ ಸೌಲಭ್ಯಗಳು ಈಗ ಲಭ್ಯವಿವೆ.  ಆದರೆ, ತಾಂತ್ರಿಕ ಉಪಕರಣ, ತಜ್ಞ ವೈದ್ಯರು ಮತ್ತು ಸಿಬ್ಬಂದಿ ನೇಮಕವಾಗಬೇಕಾಗಿದೆ. ಆದರೆ, ಸದ್ಯದ ರಾಜಕೀಯ ಮತ್ತು ಆಡಳಿತ ಪರಿಸ್ಥಿತಿಯನ್ನು ಗಮನಿಸಿದರೆ ಹಾಸನದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ತಜ್ಞ ವೈದ್ಯರ ನೇಮಕಾತಿ ಹಾಗೂ  ಮೂಲ ಸೌಕರ್ಯ ಗಳು ಲಭ್ಯವಾಗುವ ಲಕ್ಷಣಗಳು ಕಾಣುತ್ತಿಲ್ಲ.

ಪರಿಪೂರ್ಣ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕನಸು:

ಹಾಸನದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ 200 ಕೋಟಿ ರೂ. ಯೋಜನೆಗೆ ಇದುವರೆಗೆ 55 ಕೋಟಿ ರೂ. ವೆಚ್ಚವಾಗಿದೆ. ಹಿಂದಿನ ಅಂದಾಜಿನ ಪ್ರಕಾರ ಇನ್ನೂ 145 ಕೋಟಿ ರೂ. ಅನುದಾನದ ಅಗತ್ಯವಿದೆ. ಆದರೆ, ಹಿಂದೆ ಇದ್ದ ಬಿಜೆಪಿ ಸರ್ಕಾರ 2ನೇ ಹಂತದ ಹಾಸನ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ 2ನೇ ಹಂತದ ಬಗ್ಗೆ ಗಮನ ಹರಿಸಲಿಲ್ಲ. ಈಗಿನ ಕಾಂಗ್ರೆಸ್‌ ಸರ್ಕಾರವೂ ಅನುದಾನ ಕೊಡುವ ಸ್ಥಿತಿಯಲ್ಲಿಲ್ಲ.  ಹಾಗಾಗಿ ಮೂಲ ಯೋಜನೆ ಯಂತೆ ನರ ರೋಗ ಚಿಕಿತ್ಸೆ, ನರ ರೋಗ ಶಸ್ತ್ರ ಚಿಕಿತ್ಸೆ ,  ಹೃದ್ರೋಗ  ಮತ್ತು  ಹೃದ್ರೋಗ ಶಸ್ತ್ರ ಚಿಕಿತ್ಸೆ ಸೇರಿ 4 ಸೂಪರ್‌ ಸ್ಪೆಷಾಲಿಟಿ ಚಿಕಿತ್ಸಾ ಸೌಲಭ್ಯ ಈಗ ನಿರ್ಮಾಣವಾಗಿರುವ ಮೊದಲ ಹಂತದ ಕಟ್ಟಡದಲ್ಲಿ ಕಲ್ಪಿಸ ಬ ಹುದು. ಆದರೆ, ಇನ್ನುಳಿದ  ಯೂರಾಲಜಿ (ಮೂತ್ರರೋಗ ಚಿಕಿತ್ಸೆ), ಪ್ಲಾಸ್ಟಿಕ್‌ ಸರ್ಜರಿ, ನೆಪ್ರಾಲಜಿ, ಪೀಡಿ ಯಾಟ್ರಿಕ್ಸ್‌, ಸರ್ಜಿಕಲ್‌ ಅಂಡ್‌ ಗ್ಯಾಸ್ಟ್ರೋ ಎಂಟರಾಲಜಿ ಸೇರಿ 6 ಸೂಪರ್‌ ಸ್ಪೆಷಾಲಿಟಿ ಚಿಕಿತ್ಸಾ ಸೌಲಭ್ಯಗಳೂ ಸೇರಿ ಹಾಸನದ ಪರಿಪೂರ್ಣ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣ ಗಗನ ಕುಸುಮವೇ ಸರಿ.

ಯೋಜನಾ ವೆಚ್ಚ 300 ಕೋಟಿ ರೂ. ದಾಟಬಹುದು :

ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 10 ಚಿಕಿತ್ಸಾ ಸೌಲಭ್ಯ ಗಳು ಲಭ್ಯವಾದರೆ ಬೆಂಗಳೂರು, ಮಂಗ ‌ ಳೂರು, ಮೈಸೂರಿಗೆ ಯಾವುದೇ ಚಿಕಿತ್ಸೆಗೆ ಹೋಗುವ ಅಗತ್ಯ ವಿಲ್ಲ. ಆ ದೂರ ದೃಷ್ಟಿಯಿಂದಲೇ 200 ಕೋಟಿ ರೂ.ವೆಚ್ಚದಲ್ಲಿ ಹಾಸನಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಿತ್ತು. ಆದರೆ, ಯೋಜನೆ ಪೂರ್ಣ ಗೊಳ್ಳ ಬೇಕಾದರೆ ನಿರ್ಮಾಣ ವೆಚ್ಚ ಏರಿಕೆ ಮತ್ತಿತರ ಕಾರಣ ಗಳಿಂದ ಈಗ ಯೋಜನಾ ವೆಚ್ಚ 300 ಕೋಟಿ ರೂ. ದಾಟಬಹುದು. ರಾಜಕೀಯ ಪ್ರಭಾವ ಮತ್ತು ಇಚ್ಛಾ ಶಕ್ತಿ ಇದ್ದರೆ ಈ ಮೊತ್ತ ತರುವುದು ಕಷ್ಟವೇನೂ ಅಲ್ಲ. ಆದರೆ, ಬದಲಾದ ರಾಜಕೀಯ ಪರಿಸ್ಥಿತಿ ಹಾಗೂ ಆಡ ಳಿತ ವ್ಯವಸ್ಥೆಯಲ್ಲಿ ಇಷ್ಟು ಮೊತ್ತ ಮಂಜೂರು ಮಾಡಿಸಿ ಕೊಂಡು ಯೋಜನೆ ಪೂರ್ಣ ಗೊಳಿಸಬ ಹುದಾದ ರಾಜಕೀಯ ನಾಯಕತ್ವ  ಕಾಣುತ್ತಿಲ್ಲ ಎಂಬುದು ವಿಷಾದನೀಯ  ಸಂಗತಿ.

ಅವಕಾಶ ಸಿಕ್ಕಾಗ ಮಾಡಿದ್ದೇನೆ :

ನನಗೆ ಅಧಿಕಾರ ಇದ್ದಾಗ ಹಿಮ್ಸ್‌ಗೆ ಹೊಸ ಆಸ್ಪತ್ರೆ ಕಟ್ಟಡ (ಬೋಧಕ ಆಸ್ಪತ್ರೆ), ತಾಯಿ ಮತ್ತು ಮಕ್ಕಳ ಆಸ್ಪತ್ರೆ (ಎಂಸಿಎಚ್‌) ಕಟ್ಟಡ, ವಿದ್ಯಾರ್ಥಿ ನಿಲಯಗಳು, ಸಿಬ್ಬಂದಿ ವಸತಿ ಗೃಹಗಳು ಸೇರಿದಂತೆ  ಎಲ್ಲ ವ್ಯವಸ್ಥೆಯನ್ನೂ ಮಾಡಿದ್ದೇನೆ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮೊದಲ ಹಂತದ ಕಟ್ಟಡಕ್ಕೂ  ಒಂದೇ ಬಾರಿಗೆ  55 ಕೋಟಿ ರೂ. ಮಂಜೂರಾತಿ ಪಡೆದುಕೊಂಡಿದ್ದೆ. ಈಗ 2ನೇ ಹಂತದ ಯೋಜನೆಗೆ ಅನುದಾನ ತರುವ ರಾಜಕೀಯ ಶಕ್ತಿ ನನಗಿಲ್ಲ. ಈಗ ಅಧಿಕಾರದಲ್ಲಿರುವವರು ಏನು ಮಾಡ್ತಾರೋ ನೋಡೋಣ. ಅವರಿಗಾಗದಿದ್ದರೆ ನಮಗೆ ಅಧಿಕಾರ ಸಿಕ್ಕಾಗ ನಾವೇ  ಮಾಡ್ತೇವೆ. -ಎಚ್‌.ಡಿ.ರೇವಣ್ಣ, ಹಾಲಿ ಶಾಸಕರು, ಮಾಜಿ ಸಚಿವರು 

ಹೊಸದಾಗಿ ನೇಮಕಾತಿ ಆಗಲೇಬೇಕು :

ಹಿಮ್ಸ್‌ನಲ್ಲಿ ಈಗಿರುವ ವೈದ್ಯರು, ಸಿಬ್ಬಂದಿಯಿಂದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ವಹಿಸಲು ಸಾಧ್ಯವಿಲ್ಲ. ತಜ್ಞ ವೈದ್ಯರು ಹಾಗೂ  ಸಿಬ್ಬಂದಿ ನೇಮಕಾತಿ ಆಗಲೇಬೇಕು. ಈಗ ಮೊದಲ ಹಂತದ ಕಟ್ಟಡವೇನೋ ನಿರ್ಮಾಣವಾಗಿದೆ. ಅದಕ್ಕೆ ಇನ್ನೂ ಅಗತ್ಯ ಮೂಲ ಸೌಕರ್ಯಗಳು ಬೇಕಾಗಿವೆ.  ಅದನ್ನು ಹೇಗೆ  ವ್ಯವಸ್ಥೆ ಮಾಡಬೇಕು ಎಂಬುದನ್ನು ಜಿಲ್ಲಾಡಳಿತ ನಿರ್ಧರಿಸಬೇಕಾಗಿದೆ.  -ಡಾ.ಬಿ.ಸಿ.ರವಿಕುಮಾರ್‌, ಹಿಮ್ಸ್‌ ನಿರ್ದೇಶಕರು  

-ಎನ್‌.ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next