ಬೆಂಗಳೂರು: ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೂರನೇ ಟಿ20 ಪಂದ್ಯವು ರೋಚಕತೆಗೆ ಸಾಕ್ಷಿಯಾಯಿತು. ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದ ಪರಿಣಾಮ ಪಂದ್ಯವು ಟೈ ಆಗಿತ್ತು. ಭಾರತ ಗಳಿಸಿದ 212 ರನ್ ಗಳಿಗೆ ಪ್ರತಿಯಾಗಿ ಅಫ್ಘಾನಿಸ್ತಾನ ತಂಡವೂ ಅಷ್ಟೇ ರನ್ ಗಳನ್ನು ಪೇರಿಸಿತ್ತು. ಬಳಿಕ ನಡೆದ ಸೂಪರ್ ಓವರ್ ಕೂಡಾ ಟೈ ಆದ ಕಾರಣ ಮತ್ತೊಂದು ಸೂಪರ್ ಓವರ್ ಆಡಿಸಲಾಯಿತು.
ಇದು ಟಿ20 ಇತಿಹಾಸದ ಅತಿ ಸುದೀರ್ಘ ಪಂದ್ಯವಾಗಿದೆ. ಮೊದಲ ಸೂಪರ್ ಓವರ್ ಓವರ್ ನಲ್ಲಿ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ಎರಡನೇ ಸೂಪರ್ ಓವರ್ ನಲ್ಲಿಯೂ ಬ್ಯಾಟಿಂಗ್ ಗೆ ಬಂದಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಮೊದಲ ಸೂಪರ್ ಓವರ್‌ನಲ್ಲಿ ಭಾರತ ಚೇಸ್ ಪ್ರಾರಂಭವಾದಾಗ, ರೋಹಿತ್ ಮೊದಲ ಎಸೆತವನ್ನು ಎದುರಿಸಿದ ಬ್ಯಾಟರ್ ಆದರು. ಮೊದಲ ಎರಡು ಎಸೆತಗಳನ್ನು ಸಿಕ್ಸರ್ ಗಳಿಗೆ ಹೊಡೆದರು. ಮುಂದಿನ ಮೂರು ಎಸೆತಗಳಲ್ಲಿ ಮೂರು ಸಿಂಗಲ್ ಗಳು ಬಂದವು, ಕೊನೆಯ ಎಸೆತದಲ್ಲಿ ಎರಡು ರನ್ ಅಗತ್ಯವಿದ್ದಾಗ, ರೋಹಿತ್ ಅವರು ಆಗಿ ಡಗೌಟ್ ಗೆ ಹಿಂತಿರುಗಿದರು. ಅವರ ಬದಲಿಗೆ ರಿಂಕು ಆಡಲು ಬಂದರು.
ತಂಡಗಳು ಸೂಪರ್ ಓವರ್ ನಲ್ಲಿ ಅಗತ್ಯವಿದ್ದರೆ ಬ್ಯಾಟರ್ ಅನ್ನು ‘ನಿವೃತ್ತಿ’ ಮಾಡಬಹುದು ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಹೆಚ್ಚು ಸೂಕ್ತವಾದ ಬ್ಯಾಟರ್ ಅವರನ್ನು ಬದಲಾಯಿಸಬಹುದು. ಬೆಂಗಳೂರು ಪಂದ್ಯದಲ್ಲಿ ರೋಹಿತ್ ರಿಟೈರ್ಡ್ ಔಟ್ ಅಥವಾ ‘ರಿಟೈರ್ಡ್ ಹರ್ಟ್’ ಆಗಿದ್ದಾರೆಯೇ ಎಂದು ತಿಳಿದಿಲ್ಲ. ಆದರೆ ರೋಹಿತ್ ಮತ್ತೆ ಬ್ಯಾಟಿಂಗ್ ಗೆ ಬಂದಾಗ ಈ ವಿವಾದ ಎದ್ದಿತು.
ಪುರುಷರ ಟಿ20 ಪಂದ್ಯಗಳಿಗೆ ಐಸಿಸಿಯ ಆಟದ ನಿಯಮಗಳ ಪ್ರಕಾರ, “ ಹಿಂದಿನ ಸೂಪರ್ ಓವರ್ ನಲ್ಲಿ ಔಟಾದ ಯಾವುದೇ ಬ್ಯಾಟ್ಸಮನ್ ನಂತರದ ಯಾವುದೇ ಸೂಪರ್ ಓವರ್ ನಲ್ಲಿ ಬ್ಯಾಟಿಂಗ್ ಮಾಡಲು ಅನರ್ಹರಾಗಿರುತ್ತಾರೆ.”
ನಿನ್ನೆಯ ಪರಿಸ್ಥಿತಿಯಲ್ಲಿ ರೋಹಿತ್ ‘ರಿಟೈರ್ಡ್ ಔಟ್’ ಎಂದರೆ ಅವರು ಔಟಾಗಿದ್ದಾರೆ ಎಂದರ್ಥ. ‘ರಿಟೈರಿಂಗ್ ಔಟ್’ ಎಂದರೆ ಬ್ಯಾಟರ್ ಸ್ವತಃ ಮೈದಾನದಲ್ಲಿ ಮತ್ತೊಬ್ಬ ಬ್ಯಾಟರ್ ನನ್ನು ತರಲು ತನ್ನನ್ನು ತಾನು ಔಟ್ ಮಾಡಲು ನಿರ್ಧರಿಸುತ್ತಾನೆ ಎಂದರ್ಥ. ರೋಹಿತ್ ‘ರಿಟೈರ್ ಔಟ್’ ಆಗಿದ್ದರೆ, 2ನೇ ಸೂಪರ್ ಓವರ್‌ನಲ್ಲಿ ಮತ್ತೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಬಾರದಿತ್ತು. ಆದರೆ ಅವರು ‘ರಿಟೈರ್ಡ್ ಹರ್ಟ್’ ಆಗಿದ್ದರೆ ಅವರು ಬ್ಯಾಟಿಂಗ್ ಗೆ ಅವಕಾಶವಿದೆ.
ಪಂದ್ಯದ ನಂತರ, ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ರೋಹಿತ್ ಅವರು ಮರಳಿ ಬಂದಿರುವುದು ತಂತ್ರದ ಕ್ರಮ ಎಂದು ಸುಳಿವು ನೀಡಿದರು.
ಅದು ನಿಜವಾಗಿದ್ದರೆ, ರೋಹಿತ್ ಗೆ 2ನೇ ಸೂಪರ್ ಓವರ್ ನಲ್ಲಿ ಮತ್ತೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿರುವುದು ತಪ್ಪು.
ಪಂದ್ಯದ ನಂತರದ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ರೋಹಿತ್, ಪಂದ್ಯದಲ್ಲಿ ಮೂರು ಬಾರಿ ಬ್ಯಾಟಿಂಗ್ ಗೆ ಬಂದಿರುವ ಬಗ್ಗೆ ಮಾತನಾಡಿದರು.