Advertisement

ತೆವಾತಿಯಾ: ದುರದೃಷ್ಟ , ಅದೃಷ್ಟ ಮತ್ತು ತಾರಾಪಟ್ಟ!

01:34 AM Sep 29, 2020 | mahesh |

ಶಾರ್ಜಾ: ಬದುಕಿನ ಯಾವ ಘಟ್ಟದಲ್ಲೂ ಏನು ಬೇಕಾದರೂ ಬದಲಾವಣೆ ಸಂಭವಿಸಬಹುದು. ಕೆಲವೇ ನಿಮಿಷಗಳಲ್ಲಿ ಒಬ್ಬ ಖಳ ನಾಯಕನೂ ಆಗಬಹುದು, ಜನ ನಾಯಕನೂ ಆಗಬಹುದು. ರವಿ ವಾರ ರಾತ್ರಿ ಅದಕ್ಕೊಂದು ಅತ್ಯದ್ಭುತ ನಿದರ್ಶನ ಲಭಿಸಿತು. ಹಿಂದಿನ 5 ಋತುಗಳಲ್ಲಿ ಐಪಿಎಲ್‌ ಆಡಿ ಅಪ ರಿಚಿತರಾಗಿಯೇ ಉಳಿದಿದ್ದ ರಾಹುಲ್‌ ತೆವಾತಿಯಾ, ರವಿವಾರ ರಾತ್ರೋರಾತ್ರಿ ಕ್ರಿಕೆಟ್‌ ವಲಯದಲ್ಲಿ ದೊಡ್ಡ ಹೆಸರಾಗಿ ಬದಲಾಗಿದ್ದಾರೆ. ಕಳೆದ ವರ್ಷ ಡೆಲ್ಲಿ ಪರವಾಗಿ ಆಡಿದ್ದ ಅವರು, ನನಗೂ ಗೌರವ ಕೊಡಿ ಎಂದು ಕೇಳಿಕೊಳ್ಳುವ ಪರಿಸ್ಥಿತಿಯಿತ್ತು. ಈ ವರ್ಷ ಗೌರವ ಅವರನ್ನು ಹುಡುಕಿ ಕೊಂಡು ಬಂದಿದೆ!

Advertisement

ಕಳೆದವರ್ಷ ಕೇಳಿದ್ದೇನು?
ಕಳೆದ ವರ್ಷ ಮುಂಬೈ ವಿರುದ್ಧದ ಪಂದ್ಯದಲ್ಲಿ ಅವರು 4 ಕ್ಯಾಚ್‌ ಪಡೆದಿದ್ದರು. ಪಂದ್ಯ ಗೆದ್ದ ಅನಂತರ ಬೌಲರ್‌ಗಳನ್ನು, ಬ್ಯಾಟ್ಸ್‌ ಮನ್‌ಗಳನ್ನು ತರಬೇತುದಾರ ರಿಕಿ ಪಾಂಟಿಂಗ್‌ ಹೊಗಳಿದ್ದರು. ಆಗ “ನಾನು 4 ಕ್ಯಾಚ್‌ ಹಿಡಿದಿದ್ದೇನೆ. ನನ್ನನ್ನೂ ಗೌರವಿಸಿ’ ಎಂದು ರಿಕಿ ಅವರನ್ನು ತಡೆದು ತೆವಾತಿಯಾ ಹೇಳಿದ್ದರು. ಅದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದ ರಿಕಿ, “ತೆವಾತಿಯಾ 4 ಕ್ಯಾಚ್‌ ಹಿಡಿದಿದ್ದಾರೆ. ಅದಕ್ಕವರು ಮೆಚ್ಚುಗೆ ಬಯಸುತ್ತಿ ದ್ದಾರೆ’ ಎಂದು ಹೇಳಿ ನಗುತ್ತ ತೆರಳಿ ದ್ದರು. ರವಿವಾರ ತೆವಾತಿಯಾ ಮಿಂಚಿದ ಅನಂತರ ಮೇಲಿನ ವೀಡಿಯೋಎಲ್ಲ ಕಡೆ ಹರಿದಾಡುತ್ತಿದೆ!

ಈ ವರ್ಷ ಆಗಿದ್ದೇನು?
ಈ ಬಾರಿ ತೆವಾತಿಯಾ ಡೆಲ್ಲಿ ತಂಡ ದಿಂದ ಕೈಬಿಡಲ್ಪಟ್ಟು, ರಾಜಸ್ಥಾನ್‌ ಸೇರಿಕೊಂಡರು. ರವಿವಾರ ಪಂಜಾಬ್‌ ವಿರುದ್ಧ 4ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದುಬಂದ ಅವರು, ಆರಂಭದಲ್ಲಿ 20 ಎಸೆತಗಳನ್ನು ಬಹುತೇಕ ವ್ಯರ್ಥ ಮಾಡಿದರು. ಅದು ಎಲ್ಲಿಯ ವರೆಗೆ ಹೋಯಿತೆಂದರೆ, ಮುಂದೆ ಸ್ಯಾಮ್ಸನ್‌ ಒಂಟಿ ರನ್‌ ಓಡಲು ನಿರಾಕರಿಸಿದರು!

ಇದೊಂದು ರೀತಿಯಲ್ಲಿ ರಾಹುಲ್‌ತೆವಾತಿಯಾ ಅವರನ್ನು ಬಡಿದೆಬ್ಬಿಸಿತು. 18ನೇ ಓವರ್‌ನಲ್ಲಿ 5 ಸಿಕ್ಸರ್‌ ಬಾರಿಸಿದರು. ಅಲ್ಲಿಗೆ ಇಡೀ ಪಂದ್ಯವೇ ಬದಲಾಯಿತು. ಅವರು ಎದುರಿಸಿದ ಕಡೆಯ 8 ಎಸೆತಗಳಲ್ಲಿ 6 ಸಿಕ್ಸರ್‌ಗಳನ್ನು ಚಚ್ಚಿದರು. ಈಗ ತೆವಾತಿಯಾ ಯಾರ ಗೌರವಕ್ಕೂ ಕಾಯುವ ಅಗತ್ಯವಿಲ್ಲ. ಬ್ಯಾಟಿಂಗ್‌, ಬೌಲಿಂಗ್‌ ಎರಡರಲ್ಲೂ ಅದ್ಭುತ ಎನಿಸಿರುವ ಅವರು, ಈ ಐಪಿಎಲ್‌ನಲ್ಲಿ ಹುಟ್ಟಿಕೊಂಡ ಹೊಸ ತಾರೆ!

ಹರ್ಯಾಣದ ಸವ್ಯಸಾಚಿ
27 ವರ್ಷದ ರಾಹುಲ್‌ ತೆವಾತಿಯಾ ಹರ್ಯಾಣದ ಆಲ್‌ರೌಂಡರ್‌. ಎಡಗೈ ಬ್ಯಾಟ್ಸ್‌ಮನ್‌ ಹಾಗೂ ಎಡಗೈ ಲೆಗ್‌ಬ್ರೇಕ್‌ ಬೌಲರ್‌. 2104ರಲ್ಲಿ ರಾಜಸ್ಥಾನ್‌ ಪರವೇ ಐಪಿಎಲ್‌ ಪದಾರ್ಪಣೆ. ಬಳಿಕ 2017ರಲ್ಲಿ ಪಂಜಾಬ್‌ ಪರ ಆಟ. 2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ವರ್ಗ. ಪುನಃ ಮೂಲಸ್ಥಾನಕ್ಕೆ ಆಗಮನ. ಮುಂದಿನ ಪಂದ್ಯಗಳಲ್ಲಿ ಇವರ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚುವುದರಲ್ಲಿ ಅನುಮಾನವಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next