Advertisement

ನಮ್ಮೂರಿನ ಸೂಪರ್‌ ಅಜ್ಜಿ

02:17 PM Jan 10, 2018 | Team Udayavani |

ಬಳ್ಳಾರಿಯ ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದಲ್ಲಿ ಒಬ್ಬರು ಅಜ್ಜಿ ತಿನಿಸುಗಳನ್ನು ಮಾರಲು ಕೂತಿರುತ್ತಾರೆ, ಅವರ ಹೆಸರು ನಾರಾಯಣಮ್ಮ. ಅವರನ್ನು ನೋಡಿ ನಾವೆಲ್ಲ ಕಲಿಯಬೇಕಾದ್ದು ಏನನ್ನು ಗೊತ್ತೇ?

Advertisement

ಯಾಕೋ ಎಂಟು ದಿನಗಳಿಂದ ಅಜ್ಜಿ ಕಾಣಿಸ್ತಾ ಇಲ್ಲ, ಏನಾಗಿರಬಹುದು? ಹುಷಾರಿಲ್ವ ಅಥವಾ ಏನಾದರೂ ತೊಂದರೆನಾ?- ಹೀಗೆ ಮನಸ್ಸಿನಲ್ಲಿ ಒಂಥರಾ ಗೊಂದಲ. ಇದೇ ಆಲೋಚನೆಯಲ್ಲೇ 3 ಗಂಟೆ ಪ್ರಯಾಣಿಸಿದ್ದೇ ಗೊತ್ತಾಗ್ತಿರಲಿಲ್ಲ. ಪ್ರತಿದಿನ ಕಂಟೋನ್ಮೆಂಟ್‌ಗೆ ಬಂದು ಇಳಿದಾಗ ನನ್ನ ಕಣ್ಣುಗಳು ಹುಡುಕುತ್ತಿದ್ದುದ್ದೇ ಅಜ್ಜಿಯನ್ನು. ನಿರಂತರ ಎರಡು ತಾಸು ಪಾಠ ಮಾಡಿ, ರೈಲು ತಪ್ಪಿ$ಹೋಗುತ್ತದೆಂದು ನೀರನ್ನೂ ಕುಡಿಯದೇ, ಎದೊ ಬಿದೊ ಅಂತ ಕಂಟೋನ್ಮೆಂಟ್‌ ಬಳಿ ಬಂದಾಗ ಅಜ್ಜಿ ಇದ್ರೆ ಸ್ವಲ್ಪ ಸಮಾಧಾನ, ಬಿಸ್ಕತ್ತು ಅಥವಾ ಶೇಂಗಾನೋ, ಹೀಗೆ ಏನಾದ್ರೂ ತಿನಿಸು ತಿಂದು ಸ್ವಲ್ಪ ಹಸಿವು ನೀಗಿಸಿಕೊಡು ಮತ್ತೆ ರೈಲಿಗೆ ಕಾಯುತ್ತಿದ್ದೆ. ಅಜ್ಜಿ ಕಾಣಿಸಲಿಲ್ಲ ಅಂದ್ರೆ, ಮತ್ತೆ 3 ಗಂಟೆ ಉಪವಾಸ. ಮನೆ ತಲುಪಿದ ನಂತರವೇ ಊಟ.

ಬಳ್ಳಾರಿಯ ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದಲ್ಲಿ ಒಬ್ಬರು ಅಜ್ಜಿ ತಿನಿಸುಗಳನ್ನು ಮಾರಲು ಕೂತಿರುತ್ತಾರೆ, ಅವರ ಹೆಸರು ನಾರಾಯಣಮ್ಮ. ಬಿಸ್ಕತ್ತು, ಶೇಂಗಾ, ಕಡಲೆ, ಬಟಾಣಿ, ಹುರಿದ ಶೇಂಗಾ ಬೀಜ- ಹೀಗೆ ಚಿಕ್ಕ ಪುಟ್ಟ ತಿನಿಸುಗಳನ್ನು ಮಾರಿ ಜೀವನ ಸಾಗಿಸುತ್ತಾರೆ. 80ರ ಈ ಇಳಿ ವಯಸ್ಸಿನಲ್ಲೂ ಇವರು ಸ್ವಾಭಿಮಾನಿ. ಮೂಲತಃ ಆಂಧ್ರಪ್ರದೇಶದವರಾದ ನಾರಾಯಣಮ್ಮ, ಮದುವೆ ನಂತರ ಬಳ್ಳಾರಿಯಲ್ಲಿ ಬಂದು ನೆಲೆಸಿದ್ದಾರೆ. ಚಿಕ್ಕವಯಸ್ಸಿನಲ್ಲಿ ಗಂಡನನ್ನು ಕಳಕೊಂಡು ಸಂಸಾರದ ಜಂಜಾಟದಲ್ಲಿ ಬಳಲಿ ಹೋಗಿದ್ದ ಇವರು, ಹೇಗಾದರೂ ದುಡಿದು ಬದುಕಬೇಕು ಎಂದುಕೊಂಡು ಎರಡು ಗಂಡು ಮಕ್ಕಳ ಜವಾಬ್ದಾರಿಯನ್ನೂ ಹೊತ್ತು ಎಂಥ ಸಂದಿಗ್ಧ ಪರಿಸ್ಥಿಯಲ್ಲೂ ಎದೆಗುಂದದೆ ಜೀವನ ಸಾಗಿಸಿದ ದಿಟ್ಟಮಹಿಳೆ. ಗಂಡನ ಜಗಳ ಬಿಡಿಸಲು ಹೋಗಿ ತಮ್ಮ ಬಲಗೈ ಬೆರೆಳುಗಳನ್ನೂ ಕಳಕೊಂಡಿದ್ದಾರೆ. ಒಬ್ಬ ಮಗ ಮಾನಸಿಕ ಅಸ್ವಸ್ಥನಾದರೆ, ಇನ್ನೊಬ್ಬ ಬದುಕಿದ್ದರೂ ಇವರ ನೆರವಿಗಿಲ್ಲ. ಮಗ ಮದುವೆ ನಂತರ ಇವರನ್ನು ಬಿಟ್ಟು ಬೇರೆಡೆ ಬದುಕುತ್ತಿದ್ದಾನೆ. ಮಾನಸಿಕ ಅಸ್ವಸ್ಥನಾಗಿರುವ ಇನ್ನೊಬ್ಬ ಮಗ, ಮನೆ ಬಿಟ್ಟು ಹೋಗಿದ್ದಾನೆ. ಆತನನ್ನು ಹುಡುಕುವಷ್ಟೂ ಶಕ್ತಿ ಇವರಿಗಿಲ್ಲ. ಕಷ್ಟದ ಬೆಟ್ಟವೇ ಮೈಮೇಲೆ ಬಿದ್ದರೂ, ಇವರಿಗೆ ಬದುಕಿನ ಮೇಲೆ ಎಳ್ಳಷ್ಟು ಪ್ರೀತಿ ಕುಂದಿಲ್ಲ.

ನಡುವಯಸ್ಸಿನಲ್ಲಿ ಕಬ್ಬು, ಹಣ್ಣು, ತರಕಾರಿಯನ್ನು ಮಾರುತ್ತಿದ್ದ ಇವರು, ವಯಸ್ಸಾದ ಬಳಿಕ ಸಣ್ಣಪುಟ್ಟ ತಿನಿಸುಗಳನ್ನು ಹೊತ್ತುತಂದು ಮಾರಿ ಬಂದ ಆದಾಯದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಮಕ್ಕಳಿದ್ದರೂ ಅನಾಥೆಯಾಗಿ ಬದುಕುತ್ತಿರುವ ನಾರಾಯಣಮ್ಮನಿಗೆ ಅವಶ್ಯವಿದ್ದಾಗ ಅಕ್ಕಪಕ್ಕದವರು ನೆರವಾಗುತ್ತಾರೆ, ತಾವೇ ಸ್ವತಃ ಆಟೋ ತೆಗೆದುಕೊಂಡು ಮಾರ್ಕೆಟ್‌ಗೆ ತೆರಳಿ ಸಾಮಾನುಗಳನ್ನು ತರುತ್ತಾರೆ. ಇರುವ ಒಂದೇ ಕೈಯಲ್ಲೇ ಸರಾಗವಾಗಿ, ಎಲ್ಲ ಕೆಲಸಗಳನ್ನೂ ಮಾಡಿಕೊಂಡು ಜೀವಿಸುತ್ತಿರುವ ಇವರನ್ನು ನೋಡುತ್ತಿದ್ದರೆ, ಎಂಥ ಕಷ್ಟವೂ ಇವರನ್ನು ಮಣಿಸಲಾರದು ಎನಿಸುತ್ತದೆ. 10 ವರ್ಷಗಳಿಂದ ಕಂಟೋನ್ಮೆಂಟ್‌ ರೈಲು ನಿಲ್ದಾಣವೇ ಇವರ ವ್ಯಾಪಾರ ತಾಣ.

ಬದುಕನ್ನು ಪ್ರೀತಿಸಲು ನೂರಾರು ದಾರಿಗಳಿದ್ದರೂ, ಬದುಕೇ ಬೇಡವೆಂದು ನಿರ್ಧಾರ ತೆಗೆದುಕೊಳ್ಳುವ ಎಷ್ಟೋ ಜನರನ್ನು ಪ್ರತಿದಿನ ಬ್ರೇಕಿಂಗ್‌ ನ್ಯೂಸ್‌ನಲ್ಲಿ ನೋಡುತ್ತೇವೆ. ಎಲ್ಲಾ ಸರಿಯಿದ್ದರೂ ಭಿಕ್ಷೆ ಬೇಡುವವರನ್ನು ನೋಡುತ್ತೇವೆ, ಪ್ರೀತಿ ಸಿಗಲಿಲ್ಲವೆಂದು, ಕೆಲಸ ಸಿಗಲಿಲ್ಲವೆಂದು, ಅವಮಾನವಾಯಿತೆಂದು, ಪಾಲಕರು ಬೈದರೆಂದು- ಹೀಗೆ ಸಣ್ಣಪುಟ್ಟ ಕಾರಣಗಳಿಗೆ ತಲೆಮೇಲೆ ಕೈಹೊತ್ತು ಕೂರುವವರನ್ನೂ ನೋಡುತ್ತಿದ್ದೇವೆ. ಇಂಥವರೆಲ್ಲರಿಗೂ ನಾರಾಯಣಮ್ಮನ ಜೀವನ ಮಾದರಿಯೇ ಸರಿ.

Advertisement

ಮಂಜುಳಾ ಬಡಿಗೇರ್‌, ಕೊಪ್ಪಳ

Advertisement

Udayavani is now on Telegram. Click here to join our channel and stay updated with the latest news.

Next