“ಅಕ್ಕಾ, ಪ್ಲಾಸ್ಟಿಕ್ ಕೊಡ್ರಿ, ಅಣ್ಣಾ, ಪ್ಲಾಸ್ಟಿಕ್ ಕೊಡ್ರಿ’ ಅಂತ ಮನೆ ಮನೆ ಸುತ್ತುವ ಈ ಹುಡುಗಿ, ಗುಜರಿ ಆಯುವವಳಲ್ಲ. ಇವಳು, ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿರುವ ಪೋರಿ. ಪ್ಲಾಸ್ಟಿಕ್ ಬಳಸಬೇಡ್ರೀ, ಪ್ಲಾಸ್ಟಿಕ್ ಬಾಟಲ್‌ನಾಗ ನೀರು ಕುಡಿಯಬ್ಯಾಡ್ರಿ, ಪರಿಸರ ಹಾಳು ಮಾಡಬೇಡ್ರೀ… ಎನ್ನುತ್ತಲೇ, ಮನೆ ಮನೆಗಳಿಂದ ಪ್ಲಾಸ್ಟಿಕ್ ಸಂಗ್ರಹಿಸುವ ಈ ಹುಡುಗಿಯ ಹೆಸರು ಸಾನ್ವಿ ಕುಲಕರ್ಣಿ. ವಿಜಯಪುರದ ರಾಘವೇಂದ್ರ ಕಾಲೊನಿಯ ನಿವಾಸಿ.
4ನೇ ತರಗತಿ ಓದುತ್ತಿರುವ ಸಾನ್ವಿ, ಪ್ಲಾಸ್ಟಿಕ್ ಮುಕ್ತ ಭಾರತ ಸೃಷ್ಟಿಸುವ ಪಣ ತೊಟ್ಟಿದ್ದಾಳೆ. ಶಾಲೆಯ ಆವರಣದಲ್ಲಿ, ರಸ್ತೆ ಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ನಿರ್ಮೂಲನೆಯಷ್ಟೇ ಅಲ್ಲ, ಮನೆಮನೆಗೆ ಹೋಗಿ ಪ್ಲಾಸ್ಟಿಕ್‌ನಿಂದ ಆಗುವ ದುಷ್ಪರಿಣಾಮದ ಕುರಿತು ಜಾಗೃತಿಯನ್ನೂ ಮೂಡಿಸುತ್ತಿದ್ದಾಳೆ. ಮೂರು ವರ್ಷಗಳಿಂದ, ಪ್ಲಾಸ್ಟಿಕ್ ನಿಷೇಧಿಸಿ ಅಂತ ಮನೆ ಮನೆ ಸುತ್ತುತ್ತಿರುವ ಸಾನ್ವಿಗೆ, ಈ ಕುರಿತು ಮೊದಲು ಜಾಗೃತಿ ಮೂಡಿಸಿದ್ದು, ಈಕೆಯ ಹೆತ್ತವರು.
ಈಕೆ ಚಿಕ್ಕವಳಿದಾಗ, “ಪ್ಲಾಸ್ಟಿಕ್ ಬಳಸುವುದು ಹಾನಿಕರ’ ಅಂತ ಅವರು ಹೇಳಿದ ಮಾತನ್ನು ಗಂಭೀರವಾಗಿ ಪರಿಗಣಿಸಿರುವ ಹುಡುಗಿ, ಮನೆಯಲ್ಲಿ ಪ್ಲಾಸ್ಟಿಕ್ ಬಳಸಲು ಬಿಡುವುದೇ ಇಲ್ಲವಂತೆ. ಮೊದಮೊದಲು ಮನೆಯಲ್ಲಿ ಪ್ಲಾಸ್ಟಿಕ್ ಬಾಟಲಿ, ಕವರ್ ಕಂಡಾಗ ಅದನ್ನು ಎಸೆಯುತ್ತಿದ್ದವಳು ಈಗ ಇಡೀ ವಾರ್ಡ್ ಅನ್ನೇ ಪ್ಲಾಸ್ಟಿಕ್ ಮುಕ್ತ ಮಾಡಲು ನಿರ್ಧರಿಸಿದ್ದಾಳೆ. ಪ್ರಾರಂಭದಲ್ಲಿ, ಜನ ಸಾನ್ವಿಯ ಕೆಲಸವನ್ನು ನೋಡಿ “ಮಕ್ಕಳಾಟ’ ಎಂದು ಭಾವಿಸಿದರೂ, ದಿನಗಳೆದಂತೆ ಆಕೆಯ ಹಠಕ್ಕೆ ಮಣಿಯಲೇಬೇಕಾಯ್ತು.
ಪ್ರತಿದಿನ ಚೀಲ ಹಿಡಿದು, ಕಾಲೊನಿಯಲ್ಲಿ ತಿರುಗಾಡಿ ಪ್ಲಾಸ್ಟಿಕ್ ಸಂಗ್ರಹಿಸುವ ಆಕೆಯನ್ನು ನೋಡಿದ ಜನರು ತಮ್ಮ ಮನೆಯ ಹಾಗೂ ಸುತ್ತ ಮುತ್ತಲಿನ ಆವರಣದಲ್ಲಿ ಪ್ಲಾಸ್ಟಿಕ್ ಅಲ್ಲ, ಕಸ ಹಾಕುವುದನ್ನೂ ನಿಲ್ಲಿಸಿದ್ದಾರೆ. ಕಾಲೊನಿಯಲ್ಲಷ್ಟೇ ಅಲ್ಲ, ಶಾಲೆಯಲ್ಲಿ ಶಿಕ್ಷಕರಿಗೂ ಪ್ಲಾಸ್ಟಿಕ್ ನಿಷೇಧದ ಪಾಠ ಮಾಡಿದ್ದಾಳೆ. ಗೆಳೆಯರಿಗೆ ತಿಳಿ ಹೇಳುತ್ತಾಾಳೆ. ಮಾರುಕಟ್ಟೆೆಗೆ ಹೋಗುವಾಗ ಮನೆಯಿಂದ ಚೀಲಗಳನ್ನು ತೆಗೆದುಕೊಂಡು ಹೋಗಲು ಅಪ್ಪನಿಗೆ ನೆನಪಿಸುತ್ತಾಳೆ.
ಪ್ಲಾಸ್ಟಿಕ್ ಕವರ್‌ನಲ್ಲಿ ಹಣ್ಣು-ತರಕಾರಿ ಹಾಕಿಕೊಟ್ಟರೆ, ಬೇಡ ಅನ್ನುತ್ತಾಳೆ. ಸಾನ್ವಿಯಂಥ ಮಕ್ಕಳಿಗೆ ಬದುಕಲು ಸುಂದರ, ಸ್ವಚ್ಛ ಪರಿಸರವನ್ನು ಉಳಿಸುವುದು ನಮ್ಮ ಕರ್ತವ್ಯ. ನಾವೇ ಕರ್ತವ್ಯಭ್ರಷ್ಟರಾದರೆ ಹೇಗೆ? ಮಕ್ಕಳೇ ಬೀದಿಗಿಳಿದಿರುವಾಗ, ದೊಡ್ಡವರಾದ ನಾವು ಎಚ್ಚೆತ್ತುಕೊಳ್ಳದಿದ್ದರೆ ಅದು ನಮಗೇ ಶೋಭೆ ತರುವುದಿಲ್ಲ. ಏನಂತೀರಾ?
“ಅವಳು ಚಿಕ್ಕವಳಿದ್ದಾಗ, ನಾವು ಅವಳಿಗೆ “ಪ್ಲಾಸ್ಟಿಕ್ ಬಳಸಬೇಡ. ಅದರಿಂದ ರೋಗಗಳು ಬರುತ್ತವೆ’ ಅಂತ ಹೇಳಿದ್ದೆವು. ಆದ್ರೆ, ಆ ಮಾತನ್ನು ಅವಳು ಇಷ್ಟು ಮನಸ್ಸಿಗೆ ತೆಗೆದುಕೊಂಡು, ಇಷ್ಟೆಲ್ಲಾ ಕೆಲಸ ಮಾಡಲು ಮುಂದಾಗುತ್ತಾಾಳೆ ಅಂತ ನಮಗೂ ಗೊತ್ತಿರಲಿಲ್ಲ. ನಾವು ಅವಳಿಗೆ ಬಾಯಿ ಮಾತಿನಲ್ಲಿ ಹೇಳಿದ್ದೆವಷ್ಟೆ. ಆದ್ರೆ, ನಮ್ಮನ್ನು ಪ್ಲಾಸ್ಟಿಕ್ ಬಳಸದಂತೆ ತಡೆದಿದ್ದು ಅವಳೇ’.
-ಉಮೇಶ್, ಸಾನ್ವಿಯ ತಂದೆ
ಪ್ಲಾಸ್ಟಿಕ್ ನಿಷೇಧದ ಕುರಿತಾದ ಎಷ್ಟೇ ಕಾನೂನು ಕಟ್ಟಳೆಗಳು ಬಂದರೂ, ನಾವು ಅವುಗಳನ್ನು ಗಾಳಿಗೆ ತೂರುತ್ತಿದ್ದೇವೆ. ಈ ಸಣ್ಣ ಹುಡುಗಿಯ ನಡೆ, ನಮ್ಮನ್ನೂ ಚಿಂತನೆಗೆ ನೂಕಿದೆ.
-ರವೀಂದ್ರ ಕುಲಕರ್ಣಿ, ಸ್ಥಳೀಯ
* ವಿದ್ಯಾಶ್ರೀ ಗಾಣಿಗೇರ