ಭುವನೇಶ್ವರ: ಸುನೀಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್ಸಿ ಫುಟ್‌ಬಾಲ್ ತಂಡ ಮತ್ತೂಂದು ಇತಿಹಾಸ ಸೃಷ್ಟಿಸಿದೆ. ಸೂಪರ್ ಕಪ್ ಫೈನಲ್ ಹಣಾಹಣಿಯಲ್ಲಿ 4-1ಗೋಲುಗಳ ಅಂತರದಿಂದ ಈಸ್ಟ್ ಬೆಂಗಾಲ್ ತಂಡವನ್ನು ಮಣಿಸಿದೆ.
ಭುವನೇಶ್ವರ ಕಳಿಂಗ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪ್ರಶಸ್ತಿ ಸೆಣಸಾಟದ ಪಂದ್ಯದಲ್ಲಿ ಬೆಂಗಳೂರು ತಂಡ ಆರಂಭದಲ್ಲಿ ಹಿನ್ನಡೆ ಅನುಭವಿಸಿತು. ಅಂಸುಮಾನ್ ಕ್ರೊಮ್ 28ನೇ ನಿಮಿಷದಲ್ಲಿ ಗೋಲು ಸಿಡಿಸಿದರು. ಈಸ್ಟ್ ಬೆಂಗಾಲ್ ತಂಡಕ್ಕೆ 1-0 ಗೋಲುಗಳ ಅಂತರದ ಮುನ್ನಡೆ ತಂದುಕೊಟ್ಟರು. ಇದಾದ ಬಳಿಕ ಬೆಂಗಳೂರು ತಂಡ ಬಿರುಸಿನ ಆಟಕ್ಕೆ ಮುಂದಾಯಿತು. ಪಂದ್ಯದ 39ನೇ ನಿಮಿಷದಲ್ಲಿ ಬೆಂಗಳೂರು ತಂಡದ ಪರ ರಾಹುಲ್ ಬೆಹೆ ಗೋಲು ದಾಖಲಿಸಿದರು. 1-1 ಗೋಲುಗಳ ಅಂತರದಿಂದ ಸಮಸಾಧಿಸಿಕೊಟ್ಟರು. ಇನ್ನು 69ನೇ ನಿಮಿಷದಲ್ಲಿ ಸುನೀಲ್ ಚೆಟ್ರಿ ಗೋಲು ಸಿಡಿಸಿದರು. ಬೆಂಗಳೂರು ತಂಡ ಗೋಲಿನಗಳಿಕೆಯನ್ನು 2-1 ಗೋಲುಗಳಿಗೆ ಹೆಚ್ಚಿಸಿಕೊಂಡಿತು. 71ನೇ ನಿಮಿಷದಲ್ಲಿ ಮಿಕು ಬೆಂಗಳೂರು ಪರ 3ನೇ ಗೋಲು ದಾಖಲಿಸಿದರು. ಇನ್ನು 90ನೇ ನಿಮಿಷದ ಪೆನಾಲ್ಟಿ ಅವಕಾಶದಲ್ಲಿ ಸುನೀಲ್ ಚೆಟ್ರಿ ಗೋಲು ಸಿಡಿಸಿದರು. ತಂಡಕ್ಕೆ 4-1 ಗೋಲುಗಳ ಅಂತರದ ಬೃಹತ್ ಗೆಲುವು ತಂದುಕೊಟ್ಟರು.