Advertisement

ಸಾಧನೆಯ ಹಿಂದೆ ಸೂಪರ್‌ ಬ್ರೇನ್‌

10:34 AM Nov 17, 2019 | Suhan S |

ಹುಬ್ಬಳ್ಳಿ: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಕೇಟಿಂಗ್‌ ಮಾಡಿ ಗಿನ್ನಿಸ್‌ ದಾಖಲೆ ಮಾಡಿದ ಹುಬ್ಬಳ್ಳಿಯ ಹುಡುಗಿ ಓಜಲ್‌ ನಲವಡೆ ಸಾಧನೆಯಲ್ಲಿ ಸ್ಕೇಟಿಂಗ್‌ ತರಬೇತುದಾರರಂತೆ  ಬ್ಲೈಂಡ್  ಫೋಲ್ಡ್‌ (ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಸಾಧನೆ) ತರಬೇತುದಾರರ ಪಾತ್ರ ಕೂಡ ಮುಖ್ಯವಾಗಿದೆ.

Advertisement

ಓಜಲ್‌ ಗಿನ್ನಿಸ್‌ ದಾಖಲೆ ನಂತರ ಇಂಟರ್‌ನೆಟ್‌ ನಲ್ಲಿ ಸಹಸ್ರಾರು ಜನರು ಓಜಲ್‌ ಬಗ್ಗೆ ಮಾಹಿತಿ ಪಡೆಯುವುದರೊಂದಿಗೆ  ಬ್ಲೈಂಡ್ ಫೋಲ್ಡ್‌ ತರಬೇತಿ ನೀಡಿದವರ ಬಗ್ಗೆ ಕೂಡ ಸರ್ಚ್‌ ಮಾಡಿದ್ದಾರೆ. ಕೆಲವರು ತರಬೇತಿ ನೀಡಿದವರ ಬಗ್ಗೆ ಕೂಡ ಮಾಹಿತಿ ಪಡೆಯಲೆತ್ನಿಸಿದ್ದಾರೆ.

ಸ್ಕೇಟಿಂಗ್‌ ತರಬೇತಿದಾರರು ಸ್ಕೇಟಿಂಗ್‌ ಕೌಶಲಗಳು, ವೇಗದ ತರಬೇತಿ ನೀಡಿದರೆ ಇದನ್ನೆಲ್ಲ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸಾಧನೆ ಮಾಡಲು ಬ್ಲೈಂಡ್ ಫೋಲ್ಡ್‌ ಕೌಶಲ್ಯ ಕೂಡ ಅವಶ್ಯಕವಾಗಿದೆ. ಹುಬ್ಬಳ್ಳಿಯ ಹುಡುಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹೇಗೆ ಸ್ಕೇಟಿಂಗ್‌ ಮಾಡಿದಳು ಎಂದು ಜನರು ಅಚ್ಚರಿ ಪಟ್ಟದ್ದುಂಟು. ಇದಕ್ಕೆ ಕಾರಣ ಬ್ಲೈಂಡ್ ಫೋಲ್ಡ್‌ ಕೌಶಲ್ಯ. ಇಂಥ ಬ್ಲೈಂಡ್ ಫೋಲ್ಡ್‌ ತರಬೇತಿ ನೀಡಿದ್ದು ಹುಬ್ಬಳ್ಳಿ ಯುವತಿ ಅನುಷಾ ಕೊರವಿ. ಸೂಪರ್‌ ಬ್ರೇನ್‌ ಎಂಬ ಸಂಸ್ಥೆಯನ್ನು ಆರಂಭಿಸಿ ಹೊಸೂರು ಸಮೀಪದ ವಿಕಾಸನಗರದಲ್ಲಿ ಮಕ್ಕಳಿಗೆ ತರಬೇತಿ ನೀಡಿ ಮೆದುಳಿನ ಸಾಮರ್ಥ್ಯವನ್ನು ತಿಳಿಸಿಕೊಡುವ ಕಾರ್ಯ ಮಾಡುತ್ತಿದ್ದಾರೆ.

ಇದೇ ಸಂಸ್ಥೆಯಲ್ಲಿ ತರಬೇತಿ ಪಡೆದ 7ನೇ ತರಗತಿ ವಿದ್ಯಾರ್ಥಿನಿ ಓಜಲ್‌ ನಲವಡೆ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಕೇಟಿಂಗ್‌ ಮಾಡಿ ಹಲವು ಸಾಧನೆಗಳನ್ನು ಮಾಡಿದ್ದಾಳೆ. ಮೊಬೈಲ್‌, ಟಿವಿ ಗೀಳಿಗೆ ಬಲಿಯಾಗಿರುವ ಮಕ್ಕಳಿಗೆ ಧ್ಯಾನ, ಸಂಗೀತ, ನೃತ್ಯ, ವ್ಯಾಯಾಮ, ವಿವಿಧ ಆಟಗಳ ಮೂಲಕ 4ರಿಂದ 16 ವರ್ಷ ವಯೋಮಿತಿ ಮಕ್ಕಳ ಮೆದುಳನ್ನು ಕ್ರಿಯಾಶೀಲಗೊಳಿಸುವ ಕಾರ್ಯವನ್ನು ಸೂಪರ್‌ ಬ್ರೇನ್‌ ಸಂಸ್ಥೆ ಮಾಡುತ್ತಿದೆ.

ಮೆದುಳನ್ನು ಕ್ರಿಯಾಶೀಲಗೊಳಿಸುವುದರಿಂದ ಮಕ್ಕಳ ಏಕಾಗ್ರತೆ ಹೆಚ್ಚಾಗುತ್ತದೆ. ಜ್ಞಾಪಕ ಶಕ್ತಿ ವಿಸ್ತರಿಸುತ್ತದೆ. ಕಲಿಕೆಯಲ್ಲಿ ಆಸಕ್ತಿ ಮೂಡುತ್ತದೆ. ತ್ವರಿತಗತಿಯಲ್ಲಿ ಕಲಿಯಲು ಸಾಧ್ಯವಾಗುತ್ತದೆ. ಇದರೊಂದಿಗೆ ಕೈಬರಹ ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ. ಐ ಬಾಲ್‌ ಥೆರಪಿ, ಎರಡೂ ಕೈಗಳ ಬಳಕೆ, ಸಂಗೀತ ಆಲಿಸುವಿಕೆ, ದೃಶ್ಯಗಳ ವೀಕ್ಷಣೆ ಇವು ಮೆದುಳನ್ನು ಚುರುಕಾಗಿಸುವಲ್ಲಿ ಸಹಾಯಕವಾಗಿವೆ. ಅಂಗ ಚಟುವಟಿಕೆಗಳ ಮೂಲಕ ಎಡ ಹಾಗೂ ಬಲ ಭಾಗದ ಮೆದುಳನ್ನು ಕ್ರಿಯಾಶೀಲಗೊಳಿಸಿ ಮೆದುಳಿನ ಕ್ಷಮತೆ ಹೆಚ್ಚಿಸಲಾಗುತ್ತದೆ.

Advertisement

ಈಗಾಗಲೇ ನೂರಾರು ಮಕ್ಕಳು “ಸೂಪರ್‌ ಬ್ರೇನ್‌’ ತರಬೇತಿ ಪಡೆದುಕೊಂಡು ಪಠ್ಯದಲ್ಲಿ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಓದುವುದು, ಬರೆಯುವುದು, ಬಣ್ಣ ಗುರುತಿಸುವುದು, ಚಿತ್ರ ರಚನೆ, ಬಣ್ಣ ತುಂಬುವುದು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ. ಸ್ಪರ್ಶ, ವಾಸನೆ ಗ್ರಹಿಸುವ ಸಾಮರ್ಥ್ಯ ವಿಸ್ತರಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಏನಿದು ಬ್ಲೈಂಡ್ ಫೋಲ್ಡ್‌?:   ಕೆಲ ವರ್ಷಗಳ ಹಿಂದೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ದ್ವಿಚಕ್ರವಾಹನ ಓಡಿಸುವುದು ಜಾದೂಗಾರರಿಗೆ ಮಾತ್ರ ಸಾಧ್ಯ ಎಂದೇ ನಂಬಲಾಗಿತ್ತು. ಆದರೆ ಇದು ಪ್ರತಿಯೊಬ್ಬರಿಗೂ ಸಾಧ್ಯ ಎಂಬುದನ್ನು ನಿರೂಪಿಸುತ್ತಿದೆ ಸೂಪರ್‌ಬ್ರೇನ್‌ ಸಂಸ್ಥೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಡೆಯುವುದು, ಸೈಕಲ್‌ ಚಾಲನೆ ಮಾಡುವುದು, ಸ್ಕೇಟಿಂಗ್‌ ಮಾಡುವುದು, ಓಡುವುದು, ಬರೆಯುವುದು, ಓದುವುದು, ಚಿತ್ರ ಬಿಡಿಸುವ ಕಲೆಯೇ ಬ್ಲೈಂಡ್  ಫೋಲ್ಡ್‌. ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡಿದ್ದರೂ ನಮ್ಮ ಅಂತಃಚಕ್ಷುವಿನ ಮೂಲಕ ಗುರುತಿಸುವುದು ಬ್ಲೈಂಡ್ ಫೋಲ್ಡ್‌ ವಿಶೇಷತೆ.

ಮಕ್ಕಳಿಗೆ ಅವರ ಮೆದುಳಿನ ಶಕ್ತಿಯನ್ನು ಮನವರಿಕೆ ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ. ನಮ್ಮಲ್ಲಿ ತರಬೇತಿ ಪಡೆದ ಹಲವು ಮಕ್ಕಳು ಉತ್ತಮ ಅಂಕ ಸಾಧನೆ ಮಾಡುತ್ತಿದ್ದಾರೆ. ಮಕ್ಕಳು ಆಸಕ್ತಿಯಿಂದ ಕಲಿಯುವಲ್ಲಿ ತರಬೇತಿ ಪೂರಕವಾಗಿದೆ. ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವ ಮೂಲಕ ಅವರನ್ನು ಸಾಧನೆಗೆ ಪ್ರೇರೇಪಿಸಲಾಗುತ್ತದೆ. ಅನುಷಾ ಕೊರವಿ, ಸೂಪರ್‌ ಬ್ರೇನ್‌ ಸಂಸ್ಥೆ ಮುಖ್ಯಸ್ಥೆ

 

-ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next