Advertisement
ಶನಿವಾರದ ಸೂಪರ್-8 ಸುತ್ತಿನ ಪಂದ್ಯದಲ್ಲಿ ಪ್ರಬಲ ಹಾಗೂ ನೆಚ್ಚಿನ ಆಸ್ಟ್ರೇಲಿಯವನ್ನು ದಿಂಡುರುಳಿಸುವ ಮೂಲಕ ಅಫ್ಘಾನಿಸ್ಥಾನಕ್ಕೆ ಪ್ರಪ್ರಥಮ ವಿಶ್ವಕಪ್ ಸೆಮಿಫೈನಲ್ ಹಾದಿಯೊಂದು ತೆರೆದುಕೊಂಡಿತ್ತು. ಆಸ್ಟ್ರೇಲಿಯವನ್ನು ಮಣಿಸಿದ ಅಂಗಳದಲ್ಲೇ ಅಫ್ಘಾನ್ ಪಡೆ ಬಾಂಗ್ಲಾವನ್ನು ಎದುರಿಸಲಿದೆ. ಇದು ನಿಧಾನ ಗತಿಯ ಬೌಲರ್‌ಗಳಿಗೆ ನೆರವು ನೀಡುವ ಟ್ರ್ಯಾಕ್. ಕಾಂಗರೂಗಳನ್ನು ಉರುಳಿಸುವಲ್ಲಿ ಗುಲ್ಬದಿನ್ ನೈಬ್, ನವೀನ್ ಉಲ್ ಹಕ್ ಪಾತ್ರ ಮಹತ್ವದ್ದಾಗಿತ್ತು. ಜತೆಗೆ ವಿಶ್ವ ದರ್ಜೆಯ ಸ್ಪಿನ್ನರ್ ರಶೀದ್, ಮೊಹಮ್ಮದ್ ನಬಿ, ಫಜಲ್ ಹಕ್ ಫಾರೂಖಿ ಕೂಡ ಅಪಾಯಕಾರಿಗಳು.ರೆಹಮಾನುಲ್ಲ ಗುರ್ಬಜ್, ಇಬ್ರಾಹಿಂ ಜದ್ರಾನ್, ಅಜ್ಮತುಲ್ಲ ಒಮರ್‌ಜಾಯ್, ಕರೀಂ ಜನ್ನತ್ ಅವರನ್ನೊಳಗೊಂಡ ಬ್ಯಾಟಿಂಗ್ ಪಡೆ ಕೂಡ ಬಲಿಷ್ಠ.
ಆಸಕ್ತಿದಾಯಕ ಅರ್ಹತಾ ಸನ್ನಿವೇಶ ನಿರ್ಮಾಣವಾಗಿದ್ದು ಬಾಂಗ್ಲಾದೇಶ 61 ಕ್ಕಿಂತ ಹೆಚ್ಚು ರನ್‌ಗಳಿಂದ ಗೆದ್ದರೆ ಅಥವಾ 13 ಓವರ್‌ಗಳಲ್ಲಿ ಚೇಸ್ ಮಾಡಿದರೆ ಸೆಮಿ ಅರ್ಹತೆ ಪಡೆಯುತ್ತದೆ.ಬಾಂಗ್ಲಾದೇಶ 61 ರನ್‌ಗಳಿಗಿಂತ ಕಡಿಮೆ ಅಂತರದಲ್ಲಿ ಗೆದ್ದರೆ ಆಸ್ಟ್ರೇಲಿಯ ಸೆಮಿ ಫೈನಲ್ ಪ್ರವೇಶಿಸುತ್ತದೆ. ಬಾಂಗ್ಲಾದೇಶವನ್ನು ಸೋಲಿಸಿದರೆ ಅಫ್ಘಾನಿಸ್ಥಾನ ಅರ್ಹತೆ ಪಡೆಯುತ್ತದೆ. ಆಸೀಸ್ ಮತ್ತು ಅಫ್ಘಾನ್ ತಲಾ ಒಂದು ಪಂದ್ಯವನ್ನು ಮಾತ್ರ ಗೆದ್ದಿದ್ದು ಬಾಂಗ್ಲಾ ಅದ್ಭುತ ಸಾಹಸ ಮಾಡಿದರೆ ಅದಕ್ಕೂ ಒಂದು ಅವಕಾಶವಿದೆ.