Advertisement

Super-8; ಭಾರತದ ಭೀತಿಯಲ್ಲಿ ಬಾಂಗ್ಲಾ ಟೈಗರ್

12:27 AM Jun 22, 2024 | Team Udayavani |

ನಾರ್ತ್‌ ಸೌಂಡ್‌ (ಆ್ಯಂಟಿಗುವಾ): ಸೂಪರ್‌-8 ಸುತ್ತಿನಲ್ಲಿ ಅಫ್ಘಾನಿಸ್ಥಾನವನ್ನು 47 ರನ್ನುಗಳಿಂದ ಮಣಿಸಿ ಶುಭಾರಂಭ ಮಾಡಿರುವ ಭಾರತ, ಶನಿವಾರ ರಾತ್ರಿ ನಾರ್ತ್‌ ಸೌಂಡ್‌ನ‌ಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಈ ಪಂದ್ಯವನ್ನೂ ಗೆದ್ದು ಸೆಮಿಫೈನಲ್‌ಗೆ ಮೊದಲ ಹೆಜ್ಜೆ ಇಡುವುದು ರೋಹಿತ್‌ ಪಡೆಯ ಗುರಿ.

Advertisement

ಬಾಂಗ್ಲಾದೇಶಕ್ಕೆ ಇದು ಮಾಡು-ಮಡಿ ಪಂದ್ಯ. ಮೊದಲ ಮುಖಾಮುಖೀಯಲ್ಲಿ ಆಸ್ಟ್ರೇಲಿಯಕ್ಕೆ ಶರಣಾದ ಕಾರಣ ತಂಡದ ಮೇಲೆ ಗೆಲ್ಲಲೇಬೇಕಾದ ಒತ್ತಡ ಬಿದ್ದಿದೆ. ಸೋತರೆ ಮುಂದಿನ ಹಾದಿ ಬಹುತೇಕ ಕೊನೆಗೊಳ್ಳಲಿದೆ. ಇಲ್ಲೇ ನಡೆದ ಆಸ್ಟ್ರೇಲಿಯ-ಬಾಂಗ್ಲಾದೇಶ ಪಂದ್ಯಕ್ಕೆ ಮಳೆಯಿಂದ ಅಡ್ಡಿಯಾಗಿತ್ತು. ಶನಿವಾರವೂ ಮಳೆ ಸುರಿಯುವ ಲಕ್ಷಣವಿದೆ.

ಅಫ್ಘಾನಿಸ್ಥಾನ ವಿರುದ್ಧ ಭಾರತ ಎಲ್ಲ ವಿಭಾಗಗಳಲ್ಲೂ ಮಿಂಚಿ ಅಧಿಕಾರಯುತ ಗೆಲುವನ್ನು ಕಂಡಿದೆ. ಆದರೂ ಕೆಲವು ಸಮಸ್ಯೆಗಳು ಉಳಿದುಕೊಂಡಿವೆ. ಮುಖ್ಯವಾದುದು ಓಪನಿಂಗ್‌. ತಂಡ ಪವರ್‌ ಪ್ಲೇಯಲ್ಲಿ ನಿರೀಕ್ಷಿತ ಆರಂಭ ಪಡೆಯಲು ವಿಫ‌ಲವಾಗುತ್ತಿದೆ.
ವಿಶ್ವಕಪ್‌ಗೆ ಬಂದ ಬಳಿಕ ಕೊಹ್ಲಿ ಮೊದಲ ಸಲ ಇಪ್ಪತ್ತರ ಗಡಿಯನ್ನೇನೋ ದಾಟಿದರು, ಆದರೆ ರೋಹಿತ್‌ ಶರ್ಮ ಆಟ ಎಂಟೇ ರನ್ನಿಗೆ ಮುಗಿಯಿತು.

ಹೊರೆಯಾಗುತ್ತಿರುವ ದುಬೆ
ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ ಹೊರೆಯಾಗುತ್ತಿದ್ದಾರೆ. ಐಪಿಎಲ್‌ ಫಾರ್ಮ್ ನೋಡಿ ಇವರನ್ನು ವಿಶ್ವಕ್‌ಗೆ ಆಯ್ಕೆ ಮಾಡಲಾಗಿತ್ತು. ಆದರೆ ಈ ಅವಕಾಶವನ್ನು ದುಬೆ ಬಳಸಿಕೊಳ್ಳಲಿಲ್ಲ. ಇವರ ಬದಲು ಇನ್ನದರೂ ಯಶಸ್ವಿ ಜೈಸ್ವಾಲ್‌ ಅಥವಾ ಸಂಜು ಸ್ಯಾಮ್ಸನ್‌ ಅವರನ್ನು ಆಡಿಸಲು ಮುಂದಾಗಬೇಕು. ಕೊಹ್ಲಿ ಇನ್ನಿಂಗ್ಸ್‌ ಆರಂಭಿಸುವ ಕಾರಣ, ಭಡ್ತಿ ಪಡೆದ ರಿಷಭ್‌ ಪಂತ್‌ 3ನೇ ಕ್ರಮಾಂಕದಲ್ಲಿ ಬರುವುದರಿಂದ ಜೈಸ್ವಾಲ್‌ ಅವರನ್ನು ಎಲ್ಲಿ ಆಡಿಸುವುದೆಂಬುದೇ ದೊಡ್ಡ ಪ್ರಶ್ನೆ. ಸ್ಪೆಷಲಿಸ್ಟ್‌ ಓಪನರ್‌, ಹೊಡಿಬಡಿ ಆಟಗಾರ ಜೈಸ್ವಾಲ್‌ಗೆ ಅನ್ಯಾಯ ಆಗುತ್ತಿರುವುದು ಮಾತ್ರ ಸುಳ್ಳಲ್ಲ.

ಸೂರ್ಯಕುಮಾರ್‌ ಯಾದವ್‌ ಮತ್ತು ಹಾರ್ದಿಕ್‌ ಪಾಂಡ್ಯ ಅವರ ಸೊಗಸಾದ ಬ್ಯಾಟಿಂಗ್‌ ಭಾರತದ ಹೈಲೈಟ್‌ ಆಗಿತ್ತು. ಇಬ್ಬರೂ ಸ್ಫೋಟಕ ಆಟದ ಮೂಲಕ ತಂಡದ ದೊಡ್ಡ ಮೊತ್ತಕ್ಕೆ ಕಾರಣರಾಗಿದ್ದರು.

Advertisement

ಭಾರತದ ಬೌಲಿಂಗ್‌ ವಿಭಾಗದಲ್ಲಿ ಪರಿವರ್ತನೆ ಕಂಡುಬರುವ ಸಂಭವವಿಲ್ಲ. ಸಿರಾಜ್‌ ಬದಲು ಕುಲದೀಪ್‌ ಅವರನ್ನು ಆಡಿಸಿದ ಪ್ರಯೋಗ ಬಹುತೇಕ ಯಶಸ್ವಿಯಾಗಿದೆ. ಅಲ್ಲಿಗೆ ಭಾರತದ ಬೌಲಿಂಗ್‌ ಯೂನಿಟ್‌ ಮೂವರು ಸ್ಪಿನ್ನರ್, ಮೂವರು ವೇಗಿಗಳ ಕಾಂಬಿನೇಶನ್‌ ಹೊಂದಿದಂತಾಯಿತು. ಈ ಮೂವರೂ ಎಡಗೈ ಸ್ಪಿನ್ನರ್‌ಗಳೆಂಬುದು ವಿಶೇಷ. ವೆರೈಟಿ ಬೇಕಿದ್ದರೆ ಚಹಲ್‌ ಇದ್ದಾರೆ.

ಕೊನೆಯ ಪಂದ್ಯದಲ್ಲಿ ಟೀಮ್‌ ಇಂಡಿಯಾ ಬಲಿಷ್ಠ ಆಸ್ಟ್ರೇಲಿಯವನ್ನು ಎದುರಿಸಬೇಕಾದ್ದರಿಂದ ಬಾಂಗ್ಲಾ ವಿರುದ್ಧ ಬೊಂಬಾಟ್‌ ಗೆಲುವನ್ನು ಸಾಧಿಸಬೇಕಾದುದು ಅಗತ್ಯ.

ಬಾಂಗ್ಲಾ ಬ್ಯಾಟಿಂಗ್‌ ಬರಗಾಲ
“ಸ್ವಯಂಘೋಷಿತ ಟೈಗರ್’ ಬಾಂಗ್ಲಾ ದೇಶಕ್ಕೆ ಸಹಜವಾಗಿಯೇ ಭಾರತದ ಭೀತಿ ಎದುರಾಗಿದೆ. ನಜ್ಮುಲ್‌ ಪಡೆ ಕೂಟದುದ್ದಕ್ಕೂ ಬ್ಯಾಟಿಂಗ್‌ ಬರಗಾಲ ಅನುಭವಿಸುತ್ತ ಬಂದಿದೆ. ಲಿಟನ್‌ ದಾಸ್‌, ತಾಂಜಿದ್‌ ಖಾನ್‌ ಅವರ ವೈಫ‌ಲ್ಯ ಚಿಂತೆ ಹೆಚ್ಚಿಸಿದೆ.

“ಆಸ್ಟ್ರೇಲಿಯ ವಿರುದ್ಧ ನಮ್ಮ ಅಗ್ರ ಕ್ರಮಾಂಕ ಯಶಸ್ಸು ಕಂಡಿತ್ತು. ಇದು ಮುಂದುವರಿಯಬೇಕಿದೆ. ಬೌಲರ್ ತಮ್ಮ ಫಾರ್ಮ್ ಕಾಯ್ದುಕೊಂಡರೆ ಭಾರತದೆದುರಿನ ಪಂದ್ಯದಲ್ಲಿ ನಾವು ಖಂಡಿತ ಉತ್ತಮ ಪ್ರದರ್ಶನ ನೀಡಲಿದ್ದೇವೆ’ ಎಂಬುದು ನಾಯಕ ನಜ್ಮುಲ್‌ ಹುಸೇನ್‌ ಅವರ ವಿಶ್ವಾಸ.

Advertisement

Udayavani is now on Telegram. Click here to join our channel and stay updated with the latest news.

Next