Advertisement
ಬಂಧಿತ ಕಟ್ಟಡ ಸಾಮಗ್ರಿಗಳ ವ್ಯಾಪಾರಿ ಭರತ ಅವರು ಮಗ ಅಖೀಲ ಮಹಾಜನಶೇಠ (26)ನ ದುಶ್ಚಟ ಹಾಗೂ ತೀವ್ರ ಕಿರುಕುಳದಿಂದ ಬೇಸತ್ತಿದ್ದರು. ಹೇಗಾದರೂ ಆತನನ್ನು ಇನ್ನಿಲ್ಲವಾಗಿಸಬೇಕೆಂದು ಪರಿಚಿತನ ಮುಖಾಂತರ ಸುಪಾರಿ ಕೊಟ್ಟು ಕೊಲೆ ಮಾಡಿಸಿ ಅದನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದರು. ಆದರೆ ಪೊಲೀಸ್ ತನಿಖಾಧಿಕಾರಿಗಳ ಚಾಣಾಕ್ಷ ನಡೆಯಿಂದ ಈ ಪ್ರಕರಣ ಬಯಲಿಗೆ ಬಂದಿದೆ.
Related Articles
Advertisement
ಹಂತಕರು ಅಖೀಲನ ಕೊಲೆ ಮಾಡಿದ ನಂತರ ಪ್ರಕರಣ ಮುಚ್ಚಿ ಹಾಕಲು ಶವವನ್ನು ಹೂತು ಹಾಕಿದ್ದರು. ಆದರೆ ಭರತಗೆ ತನ್ನ ಮಗನನ್ನು ಹಂತಕರು ಕೊಲೆ ಮಾಡಿದ ನಂತರ ಅದನ್ನು ಎಲ್ಲಿ ಸಾಗಿಸಿದ್ದಾರೆ ಎಂಬುದು ಗೊತ್ತಿರಲಿಲ್ಲವೆಂದು ಮೂಲಗಳು ತಿಳಿಸಿವೆ.
ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ: ಬಂಧಿತರ ಹೇಳಿಕೆ ಆಧರಿಸಿ ಪೊಲೀಸ್ ಆಯುಕ್ತರು ಅಖೀಲನ ಶವ ಪತ್ತೆಗಾಗಿ ಪ್ರಕರಣದ ತನಿಖೆಗಾಗಿ ಐದು ತನಿಖಾಧಿಕಾರಿಗಳ ತಂಡ ರಚಿಸಿದ್ದರು. ತನಿಖಾಧಿಕಾರಿಗಳು ಬಂಧಿತರ ಮಾಹಿತಿ ಆಧರಿಸಿ ಮಂಗಳವಾರ ರೆಹಮಾನನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಆತ ಕೊಲೆ ಮಾಡಿದ ಕಲಘಟಗಿ ತಾಲೂಕು ದೇವಿಕೊಪ್ಪ ಗ್ರಾಮದ ಅರಣ್ಯ ಪ್ರದೇಶದಲ್ಲಿನ ಸ್ಥಳ ಹಾಗೂ ಹೂತಲಾದ ಜಾಗ ತೋರಿಸಿದ್ದ. ತನಿಖಾಧಿಕಾರಿಗಳು ಬುಧವಾರ ಬೆಳಗ್ಗೆ ಉಪ ವಿಭಾಗಾಧಿಕಾರಿಗಳ ಸಮಕ್ಷಮದಲ್ಲಿ ಹೂತಲಾಗಿದ್ದ ಅಖೀಲನ ಶವ ಹೊರ ತೆಗೆದು, ಮರಣೋತ್ತರ ಪರೀಕ್ಷೆಗೊಳಪಡಿಸಿ ಅವರ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಏಳು ಜನರನ್ನು ಇದುವರೆಗೆ ಬಂಧಿಸಿದ್ದು, ಇದರಲ್ಲಿ ಇನ್ನು ಯಾರ್ಯಾರು ಭಾಗಿಯಾಗಿದ್ದಾರೆಂದು ಪತ್ತೆ ಮಾಡುತ್ತಿದ್ದಾರೆ. ತನಿಖೆ ಮುಂದುವರಿಸಿದ್ದಾರೆ.
ದೃಶ್ಯಂ ಮಾದರಿಯಲ್ಲಿ ಕೊಲೆ?
ಹಂತಕರು ಅಖೀಲನನ್ನು ದೇವಿಕೊಪ್ಪದ ಅರಣ್ಯ ಪ್ರದೇಶಕ್ಕೆ ಕರೆದೊಯ್ದ ನಂತರ ಆತನನ್ನು ಹೇಗೆ ಕೊಲೆ ಮಾಡಬೇಕು ಹಾಗೂ ಸಾಕ್ಷಿ ಸಿಗದಂತೆ ಶವವನ್ನು ಹೂಳಬೇಕೆಂದು ಓರ್ವನು ಹಂತಕರಿಗೆ ದೃಶ್ಯಂ ಮಾದರಿಯ ಚಿತ್ರದಂತೆ ಮಾರ್ಗದರ್ಶನ ಮಾಡಿದ್ದಾನಂತೆ. ಅದರಂತೆ ಹಂತಕರು ಅವನನ್ನು ಕೊಲೆ ಮಾಡಿ ಹೂತಿದ್ದಾರೆಂದು ತಿಳಿದು ಬಂದಿದೆ. ಹಂತಕರು ಅಖೀಲನ ಮುಖಕ್ಕೆ ತಲೆದಿಂಬು ಇಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಅದೇ ಸ್ಥಳದಲ್ಲೇ ಹೂತು ಹಾಕಿದ್ದರು. ನಂತರ ಹಂತಕರು ಶವವನ್ನು ನಾಯಿ, ನರಿ ಸೇರಿದಂತೆ ಕಾಡು ಪ್ರಾಣಿಗಳು ಎಳೆದುಕೊಂಡು ಹೋಗಬಾರದೆಂದು ಶವದ ಮೇಲೆ ಉಪ್ಪು ಸುರಿದಿದ್ದರು ಹಾಗೂ ವಾಸನೆ ಬರಬಾರದೆಂದು ಸುತ್ತಲೂ ಕರ್ಪೂರ ಹಾಕಿದ್ದರೆಂದು ತಿಳಿದು ಬಂದಿದೆ. ಅಖೀಲನನ್ನು ಕೊಲೆ ಮಾಡುವ ದಿನ ಸ್ಥಳಕ್ಕೆ ಗೋವಾ ಮೂಲದ ಇನ್ನೊಬ್ಬನು ಅಲ್ಲಿಗೆ ಬಂದಿದ್ದ. ಇದರಲ್ಲಿ ಆತನ ಪಾತ್ರವೇನು ಎಂಬುದು ಇನ್ನೂ ತಿಳಿದು ಬಂದಿಲ್ಲವೆಂದು ಹೇಳಲಾಗುತ್ತಿದೆ.
60 ಲಕ್ಷ ಸುಪಾರಿ?
ಅಖೀಲನನ್ನು ಕೊಲೆ ಮಾಡಲು ಆತನ ತಂದೆ ಭರತರು ಹಂತಕರು ಮತ್ತು ಮಧ್ಯವರ್ತಿಗಳಿಗೆ ಸುಮಾರು 60ಲಕ್ಷ ರೂ. ಸುಪಾರಿ ಕೊಟ್ಟಿದ್ದರು ಎನ್ನಲಾಗುತ್ತಿದೆ.ಮೂಲಗಳ ಪ್ರಕಾರ ಮಗನ ಕಿರುಕುಳದಿಂದ ಬೇಸತ್ತು ಭರತ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದರು ಎನ್ನಲಾಗಿದೆ. ಆದರೆ ಈ ಕೊಲೆಗೆ ಇನ್ನು ಬೇರೆ ಕಾರಣವಿರಬಹುದೇ ಅಥವಾ ಮಗನ ದುಶ್ಚಟ ಹಾಗೂ ಕಿರುಕುಳವಷ್ಟೇ ಕಾರಣ ಇರಬಹುದೇ ಎಂದು ತಿಳಿದು ಬಂದಿಲ್ಲ. ತನಿಖೆ ನಂತರವೇ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎನ್ನುತ್ತವೆ ಪೊಲೀಸ್ ಮೂಲಗಳು.