ಬೆಂಗಳೂರು: ಸುಡು ಬಿಸಿಲಿನ ಝಳಕ್ಕೆ ಬಸವಳಿದಿದ್ದ ರಾಜ್ಯದ ಜನತೆಗೆ ಸೋಮವಾರದ ಮಳೆ ತಂಪೆರೆದಿದ್ದು, ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಿದೆ.
ಸೋಮವಾರ ಮಧ್ಯಾಹ್ನ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಿದ್ದು, ರಾತ್ರಿವರೆಗೆ ಸುರಿದ ಮಳೆಗೆ ಜನರು ಸಂತಸಗೊಂಡಿದ್ದಾರೆ. ರಾಜ್ಯದಲ್ಲಿ ಇನ್ನೂ ಎರಡು ದಿನ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೇಸಿಗೆಯ ಹಿನ್ನೆಲೆಯಲ್ಲಿ ವಾತಾವರಣದಲ್ಲಿ ಗಾಳಿಯ ಪ್ರಮಾಣ ಕಡಿಮೆಯಾಗಿದ್ದು, ಕೇರಳದಿಂದ ತೆಲಂಗಾಣದ ಕಡೆಗೆ ಚಲಿಸುತ್ತಿದ್ದ ತೇವಾಂಶಭರಿತ ಮೋಡಗಳು ರಾಜ್ಯದ ಕಡೆಗೆ ಚಲಿಸಿದ್ದರಿಂದ ಒಳನಾಡು ಹಾಗೂ ಮಲೆನಾಡು ಭಾಗಗಳಲ್ಲಿ ಮಳೆಯಾಗಿದೆ.
ಜತೆಗೆ ಚೆನ್ನೈ ಕಡೆಯಿಂದ ಬರುತ್ತಿರುವ ಮೋಡಗಳೂ ತೇವಾಂಶದಿಂದ ಕೂಡಿದ್ದು, ಮುಂದಿನ ಎರಡು ದಿನಗಳು ರಾಜ್ಯದ ಕೆಲವೆಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಮಾಹಿತಿ ನೀಡಿದರು.
ಸೋಮವಾರ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಬಳ್ಳಾರಿಯಲ್ಲಿ 41.60 ಮಿಲಿ ಮೀಟರ್ ಮಳೆಯಾಗಿದೆ. ಉಳಿದಂತೆ ಬೆಂಗಳೂರು ನಗರ 22, ಬೆಂ. ಗ್ರಾಮಾಂತರ 6, ರಾಮನಗರ 15.20, ಚಿಕ್ಕಬಳ್ಳಾಪುರ 2, ತುಮಕೂರು 7.60, ಮೈಸೂರು 7.50, ಚಿತ್ರದುರ್ಗ 26.50, ದಾವಣಗೆರೆ 10.20, ಚಾಮರಾಜನಗರ 3, ಬೆಳಗಾವಿ 18, ಗದಗ 3.50, ಹಾವೇರಿ 8.50, ಧಾರವಾಡ 6, ಶಿವಮೊಗ್ಗ 21.50, ಹಾಸನ 36.50, ಚಿಕ್ಕಮಗಳೂರು 33.50, ಕೊಡಗು 33.50, ದಕ್ಷಿಣ ಕನ್ನಡ 41.50, ಉಡುಪಿ 2.80, ಉತ್ತರ ಕನ್ನಡ 34 ಮಿ.ಮಿ. ಮಳೆಯಾಗಿದೆ.
ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದ್ದು, ಕರಾವಳಿಯಲ್ಲಿ ಒಣಹವೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತಂಪಾದ ಬೆಂಗಳೂರು: ಅವಧಿಗೆ ಮುನ್ನ ಆರಂಭವಾದ ಬೇಸಿಗೆಯಿಂದ ತತ್ತರಿಸಿದ್ದ ಬೆಂಗಳೂರಿನ ಜನತೆಗೆ ಸೋಮವಾರ ಸಂಜೆ ಸುರಿದ ಮಳೆ ತಂಪೆರೆಯಿತು. ಸಂಜೆ 4 ಗಂಟೆಗೆ ನಗರದ ಹೊರವಲಯಗಳಲ್ಲಿ ಆರಂಭವಾದ ಮಳೆ 6 ಗಂಟೆ ಸುಮಾರಿಗೆ ಕೇಂದ್ರ ಭಾಗದಲ್ಲಿ ಸುರಿಯಿತು. ಸುಮಾರು ಅರ್ಧ ಗಂಟೆ ಸುರಿದ ಮಳೆಗೆ ಕಾದು ಹೆಂಚಾಗಿದ್ದ ಬೆಂಗಳೂರು ರಸ್ತೆಗಳು ತಣ್ಣಗಾದರೆ, ಕೆಲವು ಬಡಾವಣೆಗಳಲ್ಲಿ ಮಕ್ಕಳು ಮಳೆಯಲ್ಲಿ ಮಿಂದು ಖುಷಿಪಟ್ಟರು.