Advertisement

Chandrayaan- 3: ಚಂದ್ರನಲ್ಲಿ ಸೂರ್ಯಾಸ್ತ; ಸುಷುಪ್ತ ಸ್ಥಿತಿಗೆ ಪ್ರಜ್ಞಾನ್‌ ರೋವರ್‌

08:14 PM Sep 03, 2023 | Team Udayavani |

ನವದೆಹಲಿ: ಚಂದಿರನ ಮೇಲ್ಮೈನಲ್ಲಿ ತನಗೆ ವಹಿಸಲಾಗಿದ್ದ ಕೆಲಸವನ್ನು ಪೂರ್ಣಗೊಳಿಸಿರುವ ಪ್ರಜ್ಞಾನ್‌ ರೋವರ್‌ ಭಾನುವಾರ ಸುಷುಪ್ತ ಸ್ಥಿತಿಗೆ ಜಾರಿದೆ. ಶಶಾಂಕನಲ್ಲಿ ಸೂರ್ಯಾಸ್ತವಾಗುತ್ತಿದ್ದಂತೆ ರೋವರ್‌ ಅನ್ನು “ಸ್ಲೀಪ್‌ಮೋಡ್‌”ಗೆ ಹಾಕಲಾಗಿದ್ದು, 14 ದಿನಗಳ ಬಳಿಕ ಅದು ಮತ್ತೆ ಸಚೇತನಗೊಳ್ಳುವ ನಿರೀಕ್ಷೆಯನ್ನು ಇಸ್ರೋ ಇಟ್ಟುಕೊಂಡಿದೆ.

Advertisement

ಪ್ರಜ್ಞಾನ್‌ ರೋವರ್‌ನಲ್ಲಿ ಆಲ್ಫಾ ಪಾರ್ಟಿಕಲ್‌ ಎಕ್ಸ್‌-ರೇ ಸ್ಪೆಕ್ಟ್ರೋಮೀಟರ್‌ ಮತ್ತು ಲೇಸರ್‌ ಇನ್‌ಡ್ಯೂಸ್ಡ್ ಬ್ರೇಕ್‌ಡೌನ್‌ ಸ್ಪೆಕ್ಟ್ರೋಸ್ಕೋಪ್‌ ಎಂಬ ಎರಡು ಪೇಲೋಡ್‌ಗಳಿದ್ದು, ಲ್ಯಾಂಡರ್‌ ಮೂಲಕ ಭೂಮಿಗೆ ದತ್ತಾಂಶಗಳನ್ನು ರವಾನಿಸುತ್ತಿದ್ದ ಈ ಎರಡೂ ಪೇಲೋಡ್‌ಗಳನ್ನು ಭಾನುವಾರ ಆಫ್ ಮಾಡಲಾಗಿದೆ ಎಂದು ಇಸ್ರೋ ತಿಳಿಸಿದೆ.

ಈ ಕುರಿತು ಎಕ್ಸ್‌ನಲ್ಲಿ (ಟ್ವಿಟರ್‌) ಮಾಹಿತಿ ನೀಡಿರುವ ಇಸ್ರೋ, “ರೋವರ್‌ ತನ್ನ ಕೆಲಸವನ್ನು ಪೂರ್ಣಗೊಳಿಸಿದೆ. ಈಗ ಅದನ್ನು ಸುರಕ್ಷಿತವಾಗಿ ನಿಲುಗಡೆ ಮಾಡಲಾಗಿದ್ದು, ಸುಷುಪ್ತಿಗೆ ತರಲಾಗಿದೆ. ಪೇಲೋಡ್‌ನ‌ಲ್ಲಿದ್ದ ದತ್ತಾಂಶಗಳನ್ನು ಲ್ಯಾಂಡರ್‌ ಮೂಲಕ ಭೂಮಿಗೆ ರವಾನಿಸಲಾಗಿದೆ’ ಎಂದು ಹೇಳಿದೆ.

“ಪ್ರಸ್ತುತ, ಅದರ ಬ್ಯಾಟರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್‌ ಆಗಿದೆ. ಸೆ.22ರಂದು ಚಂದ್ರನಲ್ಲಿ ಮುಂದಿನ ಸೂರ್ಯೋದಯವಾಗಲಿದೆ. ಅಂದು ಪ್ರಜ್ಞಾನ್‌ನಲ್ಲಿರುವ ಸೌರ ಫ‌ಲಕಗಳು ಸೂರ್ಯನ ಬೆಳಕನ್ನು ಸ್ವೀಕರಿಸಲಿವೆ. 14 ದಿನಗಳ ಬಳಿಕ ಪ್ರಜ್ಞಾನ್‌ ಎಚ್ಚರಗೊಂಡರೆ ಮತ್ತಷ್ಟು ಕಾರ್ಯಾಚರಣೆಗಳನ್ನು ನಡೆಸಲಿದೆ. ಎಚ್ಚರಗೊಳ್ಳುವಲ್ಲಿ ವಿಫ‌ಲವಾದರೆ, ಅದು “ಚಂದ್ರನಲ್ಲಿನ ಭಾರತದ ರಾಯಭಾರಿ’ಯಾಗಿ ಸದಾಕಾಲ ಶಶಾಂಕನ ಮಡಿಲಲ್ಲೇ ಉಳಿಯಲಿದೆ’ ಎಂದೂ ಇಸ್ರೋ ತಿಳಿಸಿದೆ.

ಸ್ಲೀಪ್‌ಮೋಡ್‌ಗೆ ಜಾರಿದ್ದೇಕೆ?
ವಿಕ್ರಮ್‌ ಮತ್ತು ಪ್ರಜ್ಞಾನ್‌ ಎರಡೂ ಸೌರಶಕ್ತಿಯಿಂದಲೇ ಕಾರ್ಯನಿರ್ವಹಿಸುತ್ತಿದ್ದು, ಸೂರ್ಯನ ಬೆಳಕು ಇರುವವರೆಗೆ ಮಾತ್ರ ಅವು ಕೆಲಸ ಮಾಡಬಲ್ಲವು. ಚಂದ್ರನ ಒಂದು ದಿನ ಭೂಮಿಯಲ್ಲಿ 14 ದಿನಗಳಿಗೆ ಸಮಾನ. ಭಾನುವಾರ ಚಂದ್ರನಲ್ಲಿ ಒಂದು ದಿನ ಮುಗಿದು, ಸೂರ್ಯ ಮುಳುಗಿದ್ದಾನೆ. ಹೀಗಾಗಿ, ಲ್ಯಾಂಡರ್‌ ಮತ್ತು ರೋವರ್‌ ಕಾರ್ಯಾಚರಣೆ ಸ್ಥಗಿತಗೊಂಡಿದೆ.

Advertisement

ಆದಿತ್ಯ ಎಲ್‌1 ಕಕ್ಷೆ ಎತ್ತರಿಸುವ ಮೊದಲ ಹಂತದ ಪ್ರಕ್ರಿಯೆ ಯಶಸ್ವಿ
– ನಾಳೆ ನಡೆಯಲಿದೆ ಎರಡನೇ ಹಂತದ ಪ್ರಕ್ರಿಯೆ

ಭಾರತದ ಚೊಚ್ಚಲ ಸೌರಯಾನವಾದ ಆದಿತ್ಯ ಎಲ್‌1ರ ಕಕ್ಷೆ ಎತ್ತರಿಸುವ ಮೊದಲ ಹಂತದ ಪ್ರಕ್ರಿಯೆಯನ್ನು ಭಾನುವಾರ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಉಪಗ್ರಹವು ಸುಸ್ಥಿತಿಯಲಿದ್ದು, ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಸೆ.5ರಂದು ಅಂದರೆ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಐಎಸ್‌ಟಿಆರ್‌ಎಸಿ(ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್‌ ಆ್ಯಂಡ್‌ ಕಮಾಂಡ್‌ ನೆಟ್‌ವರ್ಕ್‌)ಯಿಂದ 2ನೇ ಹಂತದ ಕಕ್ಷೆ ಎತ್ತರಿಸುವ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ ಎಂದೂ ಎಕ್ಸ್‌ನಲ್ಲಿ(ಟ್ವಿಟರ್‌) ಇಸ್ರೋ ಬರೆದುಕೊಂಡಿದೆ. ಶನಿವಾರವಷ್ಟೇ ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಆದಿತ್ಯ ಎಲ್‌1 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಸೂರ್ಯ ಮತ್ತು ಭೂಮಿಯ ನಡುವಿನ ಲಾಗ್ರೇಂಜ್‌ 1 ಬಿಂದುವಿನಲ್ಲಿ ದೇಶದ ಮೊದಲ ಅಂತರಿಕ್ಷ ವೀಕ್ಷಣಾಲಯವನ್ನು ನಿಲ್ಲಿಸಿ, ಸೂರ್ಯನ ಹೊರ ವಾತಾವರಣವನ್ನು ಅಧ್ಯಯನ ಮಾಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಆದಿತ್ಯ ಎಲ್‌1 ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ. ದೂರದಲ್ಲಿ ಸೂರ್ಯನಿಗೆ ಮುಖ ಮಾಡಿಕೊಂಡು ಕಾರ್ಯಾಚರಿಸಲಿದೆ ಎಂದು ಇಸ್ರೋ ಹೇಳಿದೆ.

 

Advertisement

Udayavani is now on Telegram. Click here to join our channel and stay updated with the latest news.

Next