Advertisement

ಮುಕ್ತಾಯದತ್ತ ಆರ್‌ಸಿಬಿ ಆಟ

06:15 AM May 07, 2018 | |

ಹೈದರಾಬಾದ್‌: ಐಪಿಎಲ್‌ನ ನಿರ್ಣಾ ಯಕ ಪಂದ್ಯವೊಂದಕ್ಕೆ ಹೈದರಾಬಾದ್‌ ಸಜ್ಜಾಗಿದೆ. ಸೋಮವಾರ ರಾತ್ರಿ ಇಲ್ಲಿ ಸನ್‌ರೈಸರ್ ಹೈದರಾಬಾದ್‌ ಮತ್ತು ರಾಯಲ್‌ ಚಾಲೆಂಜರ್ ತಂಡಗಳು ಮುಖಾಮುಖೀಯಾಗಲಿವೆ. ಇದು ಇತ್ತಂಡಗಳ ಪಾಲಿಗೆ ಪ್ರಥಮ ಸುತ್ತಿನ ಪಂದ್ಯವಾದರೂ ಇಬ್ಬರಿಗೂ ಮುಂದಿನ ಹಾದಿಯನ್ನು ಅಧಿಕೃತಗೊಳಿಸುವ ವೇದಿಕೆಯೂ ಆಗಿದೆ. ಆತಿಥೇಯ ಸನ್‌ರೈಸರ್ ಹೈದರಾಬಾದ್‌ 9 ಪಂದ್ಯಗಳಲ್ಲಿ ಏಳನ್ನು ಗೆದ್ದು ಈಗಾಗಲೇ ಮುಂದಿನ ಸುತ್ತಿನ ಪ್ರವೇಶವನ್ನು ಖಚಿತಪಡಿಸಿದೆ. ಸೋಮವಾರ ಕೊಹ್ಲಿ ಪಡೆಯನ್ನು ಮಗುಚಿದರೆ ಹೈದರಾಬಾದ್‌ ಪ್ಲೇ-ಆಫ್ ಪ್ರವೇಶಿಸಿದ ಪ್ರಥಮ ತಂಡವಾಗಿ ಹೊರಹೊಮ್ಮಲಿದೆ. 

Advertisement

ಆರ್‌ಸಿಬಿ ಗೆಲುವು ಕಷ್ಟ
ಆರ್‌ಸಿಬಿ ಸ್ಥಿತಿ ಇದಕ್ಕಿಂತ ಭಿನ್ನ. ಅದು ಈಗಾಗಲೇ 9 ಪಂದ್ಯಗಳಲ್ಲಿ ಆರರಲ್ಲಿ ಲಾಗ ಹಾಕಿದೆ. “ಕಪ್‌ ನಮೆªà’ ಎಂದು ಪ್ರೋತ್ಸಾಹಿಸಿದ ಅಭಿಮಾನಿಗಳನ್ನು ತೀವ್ರ ನಿರಾಸೆಯಲ್ಲಿ ಕೆಡವಿದೆ. ಸೋಮವಾರ ಹೈದರಾ ಬಾದ್‌ಗೆ ಶರಣಾದರೆ ಆರ್‌ಸಿಬಿ ಮುಂದಿನ ಸುತ್ತಿನ ಆಸೆಯನ್ನು ಸಂಪೂರ್ಣವಾಗಿ ಕೈಬಿಡಬೇಕಾಗುತ್ತದೆ. ಈಗಿನ ಸ್ಥಿತಿಯಲ್ಲಿ ರಾಯಲ್‌ ಚಾಲೆಂಜರ್ ಉಳಿದ ಐದೂ ಪಂದ್ಯಗಳನ್ನು ಗೆಲ್ಲುತ್ತದೆ ಎಂದು ಹೇಳಲು ಸ್ವತಃ ವಿರಾಟ್‌ ಕೊಹ್ಲಿಗೂ ಧೈರ್ಯ ಸಾಲದು!

ನಂಬಿಕೆ ಕಳಕೊಂಡ ಆರ್‌ಸಿಬಿ
“ಐಪಿಎಲ್‌ ಚೋಕರ್’ ಎನಿಸಿರುವ ಆರ್‌ಸಿಬಿಗೆ ಈ ಕಂಟಕ 2018ರಲ್ಲೂ ಬಿಟ್ಟುಹೋಗಿಲ್ಲ ಎಂಬುದೊಂದು ವಿಪರ್ಯಾಸ. ಮೇಲ್ನೋಟಕ್ಕೆ ಅತ್ಯಂತ ಬಲಿಷ್ಠವಾಗಿ ಗೋಚರಿಸುವ ಬೆಂಗಳೂರು ಪಡೆ ಕಣಕ್ಕಿಳಿದಾಗ ಅಷ್ಟೇ ಕಳಪೆ ಪ್ರದರ್ಶನ ನೀಡಿ ಅಭಿಮಾನಿಗಳಲ್ಲಿ ವೈರಾಗ್ಯ ಮೂಡಿಸಿದೆ. ಶನಿವಾರ ಸಂಜೆ ಪುಣೆಯಲ್ಲಿ ಚೆನ್ನೈ ವಿರುದ್ಧವಂತೂ ಕೊಹ್ಲಿ ಪಡೆಯ ಪ್ರದರ್ಶನ ಅತ್ಯಂತ ಕೆಟ್ಟದ್ದಾಗಿತ್ತು. ಕೇವಲ 127 ರನ್‌ ಗಳಿಸಿ ಶರಣಾಗತಿ ಸಾರಿತ್ತು. ಇಲ್ಲಿ ಒಮ್ಮಿಂದೊಮ್ಮೆಲೆ ಸುಧಾರಣೆ ಆಗುತ್ತದೆ, ಆರ್‌ಸಿಬಿ ಎದುರಾಳಿ ಬೌಲರ್‌ಗಳನ್ನು ಪುಡಿಪುಡಿ ಮಾಡುತ್ತದೆ ಎಂದು ನಂಬುವುದು ಕಷ್ಟ. 

ಡಿ ಕಾಕ್‌ ಸ್ಥಾನಕ್ಕೆ ಬಂದ ಪಾರ್ಥಿವ್‌ ಪಟೇಲ್‌ ಹೊರತುಪಡಿಸಿದರೆ ಉಳಿದ ಯಾವ ಬ್ಯಾಟ್ಸ್‌ ಮನ್‌ಗೂ ಚೆನ್ನೈ ದಾಳಿಯನ್ನು ಎದುರಿಸಿ ನಿಲ್ಲ ಲಾಗಲಿಲ್ಲ. ಮೆಕಲಮ್‌, ಕೊಹ್ಲಿ, ಎಬಿಡಿ, ಮನ್‌ದೀಪ್‌, ಗ್ರ್ಯಾಂಡ್‌ಹೋಮ್‌ ಎಲ್ಲರೂ ಬ್ಯಾಟಿಂಗ್‌ ಮರೆತಿದ್ದರು. ಕೊನೆಯಲ್ಲಿ ಬೌಲರ್‌ ಟಿಮ್‌ ಸೌಥಿ ಬ್ಯಾಟ್‌ ಬೀಸದೇ ಹೋಗಿದ್ದರೆ ಬೆಂಗಳೂರಿನ ಸ್ಕೋರ್‌ ನೂರರ ಗಡಿಯನ್ನೂ ದಾಟುವುದು ಅನುಮಾನ ವಿತ್ತು. ಅಷ್ಟೊಂದು ಮಂದಿ ಬಿಗ್‌ ಹಿಟ್ಟರ್‌ಗಳನ್ನು ಒಳಗೊಂಡ ತಂಡವೊಂದು ಇಷ್ಟೊಂದು ಕೆಟ್ಟ ಪ್ರದರ್ಶನ ನೀಡುವುದನ್ನು ಕಲ್ಪಿಸಲಾಗುತ್ತಿಲ್ಲ. ಬ್ಯಾಟಿಂಗೇ ಬೆಂಗಳೂರಿನ ಬಲವಾದ್ದರಿಂದ ಇಲ್ಲಿನ ವೈಫ‌ಲ್ಯ ಸಹಜವಾಗಿಯೇ ತಂಡದ ಹಾದಿಯನ್ನು ದುರ್ಗಮಗೊಳಿಸಿತು. ಸೌಥಿ, ಚಾಹಲ್‌, ಉಮೇಶ್‌ ಯಾದವ್‌, ಸಿರಾಜ್‌, ಗ್ರ್ಯಾಂಡ್‌ಹೋಮ್‌, ಎಂ. ಅಶ್ವಿ‌ನ್‌ ಮೊದಲಾದವರನ್ನು ಒಳಗೊಂಡ ಆರ್‌ಸಿಬಿ ಬೌಲಿಂಗ್‌ ಹೈದರಾಬಾದ್‌ ವಿರುದ್ಧ ಮ್ಯಾಜಿಕ್‌ ನಡೆಸೀತೇ ಎಂಬುದು ಕೊನೆಯ ಹಂತದ ಕುತೂಹಲ.

ಹೈದರಾಬಾದ್‌ ಫೇವರಿಟ್‌
ಈ ಬಾರಿ ಕೇನ್‌ ವಿಲಿಯಮ್ಸನ್‌ ಸಾರಥ್ಯದಲ್ಲಿ ಕಣಕ್ಕಿಳಿದಿರುವ ಹೈದರಾಬಾದ್‌ ತನ್ನ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡುತ್ತ ಸ್ಥಿರ ಪ್ರದರ್ಶನವನ್ನು ಕಾಯ್ದುಕೊಂಡು ಬಂದಿದೆ. ಅದರಲ್ಲೂ ತವರಿನ ಪಂದ್ಯಗಳಲ್ಲಿ ಯಾವತ್ತೂ ಒಂದು ಕೈ ಮೇಲು. ಇದಕ್ಕೆ ತಾಜಾ ಉದಾಹರಣೆ ಶನಿವಾರ ರಾತ್ರಿ ಗೋಚರಿಸಿದೆ. ಅಂತಿಮ 2 ಓವರ್‌ಗಳಲ್ಲಿ 28 ರನ್‌ ಸೂರೆಗೈದು ಡೆಲ್ಲಿಯನ್ನು ಮಣಿಸಿದ್ದು ವಿಲಿಯಮ್ಸನ್‌ ಪಡೆಯ ಅಸಾಮಾನ್ಯ ಸಾಹಸವೇ ಆಗಿದೆ. ಯೂಸುಫ್ ಪಠಾಣ್‌ ಅವರ ಸ್ಫೋಟಕ ಬ್ಯಾಟಿಂಗ್‌ ತಂಡಕ್ಕೆ ವರದಾನವಾಗಿತ್ತು. 

Advertisement

ಅಲೆಕ್ಸ್‌ ಹೇಲ್ಸ್‌, ಶಿಖರ್‌ ಧವನ್‌, ಮನೀಷ್‌ ಪಾಂಡೆ ಅವರೆಲ್ಲ ತಂಡದ ಬ್ಯಾಟಿಂಗ್‌ ಸರದಿಗೆ ಬಲ ತುಂಬಬಲ್ಲರು. ಆದರೆ ಬ್ಯಾಟಿಂಗಿಗಿಂತ ಹೈದರಾಬಾದ್‌ ತಂಡದ ಬೌಲಿಂಗ್‌ ಐಪಿಎಲ್‌ನಲ್ಲೇ ಹೆಚ್ಚು ಬಲಿಷ್ಠ ಹಾಗೂ ಅಪಾಯಕಾರಿ ಎನಿಸಿದೆ. ಭುವನೇಶ್ವರ್‌ ಕುಮಾರ್‌, ಸಂದೀಪ್‌ ಶರ್ಮ, ಸಿದ್ಧಾರ್ಥ್ ಕೌಲ್‌, ರಶೀದ್‌ ಖಾನ್‌, ಕ್ರಿಸ್‌ ಜೋರ್ಡನ್‌ ಜತೆಗೆ ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಅವರನ್ನೊಳಗೊಂಡ ಬೌಲಿಂಗ್‌ ಹೆಚ್ಚು ವೈವಿಧ್ಯಮಯ. ಅಲ್ಲದೇ ಬೌಲರ್‌ಗಳಿಗೆ ಹೆಚ್ಚು ಸಹಕರಿಸುವ ಹೈದರಾಬಾದ್‌ ಟ್ರ್ಯಾಕ್‌ನಲ್ಲಿ ಇವರೆಲ್ಲರೂ ಎದುರಾಳಿಯನ್ನು ಕಂಗೆಡಿಸಬಲ್ಲರು. ಹೀಗಾಗಿ ಎಲ್ಲ ಇದ್ದೂ ಏನನ್ನೂ ಸಾಧಿಸದ ಆರ್‌ಸಿಬಿ ಬ್ಯಾಟಿಂಗ್‌ ಸರದಿ ಮತ್ತೂಂದು ಅಗ್ನಿಪರೀಕ್ಷೆಯನ್ನು ಎದುರಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next