ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ತನ್ನ ಸಿಬ್ಬಂದಿ ವರ್ಗದಲ್ಲಿ ಬದಲಾವಣೆ ಮಾಡಿಕೊಂಡಿದೆ. ಇದುವರೆಗೆ ಬ್ಯಾಟಿಂಗ್ ಕೋಚ್ ಆಗಿದ್ದ ವೆಸ್ಟ್ ಇಂಡೀಸ್ ಮಾಜಿ ಆಟಗಾರ ಬ್ರಿಯಾನ್ ಲಾರಾ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ.
ಹೈದರಾಬಾದ್ ತಂಡಕ್ಕೆ ಆಸ್ಟ್ರೇಲಿಯಾದ ಟಾಮ್ ಮೂಡಿ ಅವರು ಇದುವರೆಗೆ ಮುಖ್ಯ ಕೋಚ್ ಆಗಿದ್ದರು. ಆದರೆ ಇದೀಗ ಮೂಡಿ ಅವರು ಯುಎಇ ಲೀಗ್ ನ ಡೆಸರ್ಟ್ ವೆಸ್ಪಾ ತಂಡದ ಕೋಚ್ ಆಗಿ ನೇಮಕವಾಗಿದ್ದಾರೆ. ಹೀಗಾಗಿ ಹೈದರಾಬಾದ್ ತಂಡ ಮೂಡಿ ಅವರೊಂದಿಗಿನ ಒಪ್ಪಂದ ಕೊನೆಗೊಳಿಸಿದೆ ಎನ್ನಲಾಗಿದೆ.
ಟಾಮ್ ಮೂಡಿ ಅವರು 2013ರಿಂದ 2019ರವರೆಗೆ ಎಸ್ ಆರ್ ಎಚ್ ತಂಡದ ಮುಖ್ಯ ಕೋಚ್ ಆಗಿದ್ದರು. ಇವರ ಅವಧಿಯಲ್ಲೇ ತಂಡ 2016ರಲ್ಲಿ ಚಾಂಪಿಯನ್ ಆಗಿತ್ತು.
ಬ್ರಿಯಾನ್ ಲಾರಾ ಅವರು ಕಳೆದ ಸೀಸನ್ ನಲ್ಲಿ ಹೈದರಾಬಾದ್ ತಂಡದ ಕಾರ್ಯತಂತ್ರ ಸಲಹೆಗಾರ ಮತ್ತು ಬ್ಯಾಟಿಂಗ್ ಕೋಚ್ ಆಗಿದ್ದರು. ಇದೀಗ ಲಾರಾ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಲಾರಾ ಅವರು ಇದೇ ಮೊದಲ ಬಾರಿಗೆ ಟಿ20 ತಂಡದ ಕೋಚಿಂಗ್ ಮಾಡುತ್ತಿದ್ದಾರೆ.