ಕುಣಿಗಲ್: ಪಟ್ಟಣದಲ್ಲಿ ಬಿಸಿಲ ಧಗೆ ಹೆಚ್ಚಾಗಿದ್ದು 30 ಡಿಗ್ರಿ ಇದ್ದ ತಾಪಮಾನ ಈಗ 36 ಡಿಗ್ರಿಗೂ ಅಧಿಕವಾಗಿದೆ. ಇದರಿಂದಾಗಿ ಪಟ್ಟಣದ ಜನತೆ ತಂಪುಪಾನೀಯಾ, ಹಣ್ಣುಗಳ ಮೊರೆ ಹೋಗಿದ್ದಾರೆ.
ಎಲ್ಲೆಲ್ಲೂ ಬಿಸಿಲ ಝಳ: ಬಿಸಿಲ ಧಗೆಯಿಂದ ದೇಹವನ್ನು ತಂಪು ಮಾಡಿಕೊಳ್ಳಲು ಜನತೆ ವಿಶೇಷವಾಗಿ ಕಲ್ಲಂಗಡಿ, ಕರ್ಬೂಜಾ, ಕಿತ್ತಳೆ ಮತ್ತಿತರ ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಈ ಹಣ್ಣುಗಳ ಬೆಲೆಯೂ ದುಪ್ಪಟ್ಟಾಗಿದೆ.
ಪಟ್ಟಣದಲ್ಲಿ ಕಲ್ಲಂಗಡಿ ಮತ್ತು ಕರ್ಬೂಜಾ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ. ಆಂಧ್ರಪ್ರದೇಶದ ಅತ್ಯಂತ ಹೆಚ್ಚು ಇಳುವರಿ ಬರುವ, ರುಚಿ ಹಾಗೂ ಅಪಾರ ಬೇಡಿಕೆ ಇರುವ ಕಿರಣ್ ತಳಿಯ ಕಲ್ಲಂಗಡಿ ಮತ್ತು ತಮಿಳುನಾಡಿನಿಂದ ಬರುವ ನಾಮಧಾರಿ ತಳಿಯ ಕಲ್ಲಂಗಡಿ ಹಾಗೂ ಆಂಧ್ರದ ಕಡಪ ಜಿಲ್ಲೆಯಿಂದ ತಂದಿರುವ ಖರ್ಬೂಜಾ ದಿನಕ್ಕೆ ಒಂದೂವರೆ ಟನ್ ಖಾಲಿಯಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳಾದ ಧನಂಜಯ, ರಾಜು, ಲಾಲು ಮತ್ತು ಫಾಜಿಲ್.
ಪಟ್ಟಣದ ಸ್ಟಡ್ ಫಾರ್ಮ್, ಹುಚ್ಚಮಾಸ್ತಿಗೌಡ ವೃತ್ತ, ತಾಲೂಕು ಕಚೇರಿ, ಮಹಾತ್ಮಗಾಂಧಿ ಕಾಲೇಜು ಮುಂಭಾಗದಲ್ಲಿ ಕಲ್ಲಂಗಡಿ ಮತ್ತು ಖರ್ಬೂಜಾ ಹಣ್ಣು ಮಾರಾಟಕ್ಕಿಟ್ಟಿದ್ದು ಗ್ರಾಹಕರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಆಂಧ್ರದ ಕಿರಣ್ ತಳಿಯ ಕಲ್ಲಂಗಡಿ ತಿನ್ನಲು ಬಲು ರುಚಿ. ಒಂದು ಎಕರೆ ಪ್ರದೇಶದಲ್ಲಿ ಕನಿಷ್ಟ 20-25 ಟನ್ ಇಳುವರಿ ಬರುತ್ತದೆ. ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚು.
ಆದರೆ, ತಮಿಳುನಾಡಿನ ನಾಮಧಾರಿ ತಳಿಯ ಕಲ್ಲಂಗಡಿ ಹಣ್ಣು ಒಂದು ಎಕರೆಗೆ 7-8ಟನ್ ಮಾತ್ರ ಬರುತ್ತದೆ. ಅಲ್ಲಿಂದ ಕೆಜಿಗೆ ಸಾಗಣೆ ವೆಚ್ಚ ಸೇರಿ 14 ರೂ.,ಗೆ ಖರೀದಿಸಿ 20 ರೂ.ಗೆ ಮಾರಾಟ ಮಾಡುತ್ತೇವೆ. ಖಾಲಿಯಾದ ತಕ್ಷಣ ವಾರಕ್ಕೊಮ್ಮೆ 10-12 ಟನ್ ಕಲ್ಲಂಗಡಿ ಹಣ್ಣನ್ನು ತರುತ್ತೇವೆ ಎನ್ನುತ್ತಾರೆ ವ್ಯಾಪಾರಿಗಳು.
ಕಳೆದ ಫೆಬ್ರವರಿಯಿಂದ ಇಲ್ಲಿಯವರೆಗೂ 200ಟನ್ ಕಲ್ಲಂಗಡಿ ಮಾರಾಟವಾಗಿದೆ. ಹೆಚ್ಚು ಅಂದರೆ ಕಲ್ಲಂಗಡಿ ಹಣ್ಣು ಏಪ್ರಿಲ್ ಕೊನೆವರೆಗೂ ಮಾರುಕಟ್ಟೆಯಲ್ಲಿ ಸಿಗಲಿದೆ. ಆ ನಂತರ ಸಿಗುವುದಿಲ್ಲ. ಇನ್ನು ಖರ್ಬೂಜಾ ಹಣ್ಣು ದಿನಕ್ಕೆ 100-150 ಕೆಜಿ ಮಾರಾಟವಾಗುತ್ತಿದೆ.
ಶ್ರೀರಾಮನವಮಿಯಂದು ಜಾಸ್ತಿ ಮಾರಾಟವಾಗಲಿದೆ. ಕಲ್ಲಂಗಡಿ ಹಣ್ಣನ್ನು ನಾವು ಕತ್ತರಿಸಿ ಚಿಲ್ಲರೆಯಾಗಿ ಮಾರುವುದರಿಂದ ಹೆಚ್ಚಿನ ಲಾಭ ಸಿಗಲಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಪಟ್ಟಣದ ಹೊರವಲಯದ ಹೊಂಗೆಮರದ ನೆರಳು, ಕೆರೆ ತೀರ, ನೆರಳು ಇರುವ ತಂಗುದಾಣಗಳ ಮೊರೆ ಹೋಗುತ್ತಿದ್ದಾರೆ ಜನತೆ.
* ಕೆ.ಎನ್.ಲೋಕೇಶ್