Advertisement

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

11:20 AM Apr 28, 2024 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ದಿನಕಳೆದಂತೆ ಬಿಸಿಲ ಝಳ ಹೆಚ್ಚಿದ್ದು, ಕಾದ ಕೆಂಡವಾಗಿದೆ. ಇದು ಜನಸಾಮಾನ್ಯರು, ಬೀದಿ ಬದಿ ವ್ಯಾಪಾರಿಗಳ ಮೇಲಷ್ಟೇ ಅಲ್ಲ, ಹೋಟೆಲ್‌ ಉದ್ಯಮದ ಮೇಲೂ ಪರಿಣಾಮ ಬೀರಿದೆ.

Advertisement

ಮಧ್ಯಾಹ್ನ ಆಗುತ್ತಿದ್ದಂತೆ ವಾತಾವರಣದಲ್ಲಿ ಬಿಸಿಗಾಳಿ ಅಧಿಕವಾಗಲಿದೆ. ಜನರು ಈ ಸಮಯದಲ್ಲಿ ಮನೆ ಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ಹೊರಗಿನ ಏನೇ ಕೆಲಸವಿದ್ದರೂ 11 ಗಂಟೆ ಒಳಗೆ ಮುಗಿಸುತ್ತಿದ್ದಾರೆ. ಮಧ್ಯಾಹ್ನದ ವೇಳೆ ಕುಟುಂಬ ಸಮೇತರಾಗಿ ಹೋಟೆಲ್‌ಗೆ ಬಂದು ಊಟ ಸವಿಯುತ್ತಿದ್ದ ಗ್ರಾಹಕರು, ಸುಡು ಬಿಲಿಸಿನ ಅಲೆಯ ಹೊಡೆತದಿಂದ ಸಂರಕ್ಷಿಸಿಕೊಳ್ಳಲು ಈಗ ಮನೆಯಿಂದ ಹೊರಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ 2 ತಿಂಗಳುಗಳಿಂದ ಹೋಟೆಲ್‌ಗ‌ಳ ವ್ಯಾಪಾರ ವಹಿವಾಟು ಇಳಿಮುಖವಾಗಿದೆ.

ಬಿಸಿಲ ಧಗೆ ಕೇವಲ ಬೀದಿಬದಿ ವ್ಯಾಪಾರಿಗಳ ಬದುಕನ್ನಷ್ಟೇ ಸುಟ್ಟಿಲ್ಲ, ಹೋಟೆಲ್‌ ವ್ಯಾಪಾರದ ಮೇಲೂ ಪ್ರಭಾವ ಬೀರಿದೆ. ಕಳೆದ ಒಂದೆರಡು ತಿಂಗಳಿಂದ ವಾತಾವರಣದಲ್ಲಿ ಬಿಸಿಲ ಪ್ರಭಾವ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸಣ್ಣಮಕ್ಕಳ ಸಮೇತ ಕುಟುಂಬದವರ ಜತೆಗೆ ಹೋಟೆಲ್‌ಗ‌ಳಿಗೆ ಬಂದು ಊಟ ಮಾಡುತ್ತಿದ್ದ ಗ್ರಾಹಕರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಇದರಿಂದಾ ಗಿಯೇ ಶೇ.30 ರಿಂದ 40ರಷ್ಟು ಹೋಟೆಲ್‌ ವ್ಯಾಪಾರದ ಮೇಲೆ ಹೊಡೆತ ಬಿದ್ದಿದೆ ಎಂದು ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘದ ಗೌರವ ಕಾರ್ಯದರ್ಶಿ ವೀರೇಂದ್ರ ಕಾಮತ್‌ ಹೇಳುತ್ತಾರೆ.

ಈಗಾಗಲೇ ಹವಾಮಾನ ಇಲಾಖೆ ಉಷ್ಣ ಅಲೆಯ ಎಚ್ಚರಿಕೆ ನೀಡಿದೆ. ಮಧ್ಯಾಹ್ನ 12 ರಿಂದ 3ರ ವರೆಗೆ ಬಿಲಿಸಿನಲ್ಲಿ ಹೋಗುವುದನ್ನು ತಪ್ಪಿಸಿ ಎಂದು ಮನವಿ ಮಾಡಿದೆ. ಇದನ್ನು ಜನರು ಪಾಲಿಸುತ್ತಿದ್ದಾರೆ. ಈ ಹಿನ್ನೆ ಲೆಯಲ್ಲಿ ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಜನರು ಹೊರಗೆ ಬರುತ್ತಿಲ್ಲ. ಹೋಟೆಲ್‌ ಉದ್ಯಮ ಮಧ್ಯಾಹ್ನದ ವ್ಯಾಪಾರ ವಹಿವಾಟು ಈ ಹಿಂದಿನಷ್ಟಿಲ್ಲ ಎನ್ನುತ್ತಾರೆ.

ಟೀ, ಕಾಫಿಯಿಂದ ದೂರ: ವಿಪರೀತ ಬಿಸಿಲಿನ ಧಗೆ ಇರುವ ಹಿನ್ನೆಲೆಯಲ್ಲಿ ಮಧ್ಯಾಹ್ನದ ವೇಳೆ ಜನರು ಟೀ, ಕಾಫಿ ಸೇವಿಸುತ್ತಿಲ್ಲ. ಹೀಗಾಗಿ ಟೀ, ಕಾಫಿ ವಹಿವಾಟು ನಡೆಯುತ್ತಿಲ್ಲ. ವಿಪರೀತ ಶೆಖೆಯಿರುವ ಹಿನ್ನೆಲೆಯಲ್ಲಿ ಗ್ರಾಹಕರು ತಂಪು ಪಾನೀಯಗಳಿಗೆ ಮೊರೆ ಹೋಗು ತ್ತಿದ್ದಾರೆ. ಈ ಕಾರಣಕ್ಕಾಗಿ ತಂಪು ಪಾನೀಯಗಳಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆಯಿದೆ ಎಂದು ಹೋಟೆಲ್‌ ವ್ಯಾಪಾರಿಗಳು ಹೇಳುತ್ತಾರೆ.

Advertisement

ನಿಂಬೆ ಜ್ಯೂಸ್‌, ಮ್ಯಾಂಗೋ ಜ್ಯೂಸ್‌, ಕಲ್ಲಂಗಡಿ ಹಣ್ಣಿನ ಜ್ಯೂಸ್‌, ಲಸ್ಸಿ ಸೇರಿ ಇನ್ನಿತರ ತಂಪು ಪಾನೀಯ ಗಳು ಹೆಚ್ಚಿನ ರೀತಿಯಲ್ಲಿ ಮಾರಾಟವಾಗುತ್ತಿವೆ. ಬಿಸಿಲಿನ ಹಿನ್ನೆಲೆಯಲ್ಲಿ ನೀರಡಿಕೆ ಆಗುವುದರಿಂದ ಗ್ರಾಹಕರು ರವಾ ಇಡ್ಲಿ ಸೇರಿದಂತೆ ಲೈಟ್‌ ವೈಟ್‌ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಆರ್ಡರ್‌ ಮಾಡು ತ್ತಾರೆ ಎಂದು ಹೋಟೆಲ್‌ ವ್ಯಾಪಾರಿಗಳು ಹೇಳುತ್ತಾರೆ.

ದರ್ಶಿನಿಗಳಿಗೆ ಭಾರೀ ಹೊಡೆತ

 ಬಿಸಿಲಿನಿಂದ ಬಸವಳಿದಿರುವ ಜನರು, ಹೋಟೆಲ್‌ಗೆ ಹೋಗುವ ಸಮಯವನ್ನೂ ಬದಲಾವಣೆ ಮಾಡಿಕೊಂಡಿದ್ದಾರೆ. 12 ಗಂಟೆ ಆಗುತ್ತಿದ್ದಂತೆ ಮನೆ ಅಥವಾ ಕಚೇರಿ ಸೇರಿಕೊಳ್ಳುತ್ತಾರೆ. ಕೆಲ ಹೋಟೆಲ್‌ಗ‌ಳಿಗೆ ಮಧ್ಯಾಹ್ನ ಬಾರದೇ ಇರುವವರು ರಾತ್ರಿ ಕುಟುಂಬ ಸಮೇತರಾಗಿ ಹೋಟೆಲ್‌ಗ‌ಳ ಬರುತ್ತಿದ್ದಾರೆ. ಬಿಸಿಲಿನ ಧಗೆ ಹೋಟೆಲ್‌ ವ್ಯಾಪಾರ ವಹಿವಾಟಿನ ಮೇಲೆ ಸ್ವಲ್ಪ ಮಟ್ಟಿನ ಹೊಡೆತ ನೀಡಿದೆ ಎಂದು ರಾಜ್ಯ ಹೋಟೆಲ್‌ಗ‌ಳ ಸಂಘದ ಅಧ್ಯಕ್ಷ ಚಂದ್ರ ಶೇಖರ್‌ ಹೆಬ್ಟಾರ್‌ ಹೇಳುತ್ತಾರೆ. ಹವಾನಿಯಂತ್ರಿತ ಕೊಠಡಿಗಳಲ್ಲಿ ಮಾತ್ರ ಬಿಸಿ ಪದಾರ್ಥ ಸೇವನೆ ಸಾಧ್ಯ. ಆದರೆ, ಕೆಲವು ದರ್ಶಿನಿ ಸೇರಿದಂತೆ ಇನ್ನಿತರ ಹೋಟೆಲ್‌ಗ‌ಳಲ್ಲಿ ಏರ್‌ಕಂಡೀಷನ್‌ ರೋಮ್‌ಗಳು ಇಲ್ಲ. ಹೀಗಾಗಿ, ಗ್ರಾಹಕರ ಸಂಖ್ಯೆ ಮಧ್ಯಾಹ್ನ ವೇಳೆ ಕಡಿಮೆಯಿರುತ್ತದೆ ಎನ್ನುತ್ತಾರೆ.

ರಾಜಧಾನಿಯಲ್ಲಿ ಬಿಲಿನ ಧಗೆ ದಿನಕಳೆದಂತೆ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನದ ವೇಳೆ ಗ್ರಾಹಕರು ಹೋಟೆಲ್‌ಗ‌ಳತ್ತ ಮುಖ ಮಾಡುತ್ತಿಲ್ಲ. ಬಿಸಿಲಿನ ಧಗೆ ಶೇ.30 ರಿಂದ 40ರಷ್ಟು ಹೋಟೆಲ್‌ ವ್ಯಾಪಾರಕ್ಕೆ ಹೊಡೆತ ನೀಡಿದೆ.- ವೀರೇಂದ್ರ ಕಾಮತ್‌, ಗೌರವ ಕಾರ್ಯದರ್ಶಿ, ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘ

Advertisement

Udayavani is now on Telegram. Click here to join our channel and stay updated with the latest news.

Next