Advertisement

High temperature: ಉರಿ ಬಿಸಿಲಿಗೆ ಹೈರಾಣ: ಮಳೆಗಾಗಿ ಕಾದ ಜನ!

04:19 PM Apr 14, 2024 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಜನರ ನೆತ್ತಿ ಸುಡುತ್ತಿರುವ ಉರಿ ಬಿಸಿಲಿಗೆ ಜಿಲ್ಲೆಯ ಜನ ಜೀವನ ಹೈರಾಣ ಆಗುತ್ತಿದ್ದು, ಕಾದ ಕೆಂಡದಂತೆ ಆಗಿರುವ ತಾಪಮಾನಕ್ಕೆ ತೀವ್ರ ಕಂಗಾಲಾಗಿರುವ ಜನ ಮಳೆರಾಯನ ಕೃಪೆಗಾಗಿ ಆಕಾಶದ ಕಡೆಗೆ ದಿಟ್ಟಿಸಿ ನೋಡುತ್ತಿದ್ದು, ತಕ್ಷಣ ಮಳೆ ಕೃಪೆ ತೋರದಿದ್ದರೆ ಜಿಲ್ಲೆ ಇನ್ನಷ್ಟು ಬಿಸಿಲಿನ ಸಂಕಷ್ಟಕ್ಕೆ ಒಳಗಾಗಲಿದೆ.

Advertisement

ಹೌದು, ಕಳೆದ ವರ್ಷ ಮುಂಗಾರು, ಹಿಂಗಾರು ಕೈ ಕೊಟ್ಟಿದ್ದರಿಂದ ರೈತರ ಬೆಳೆದ ಬೆಳೆಗಳು ಒಣಗಿ ಜಿಲ್ಲೆಯು ಸಂಪೂರ್ಣವಾಗಿ ಮಳೆಯ ಅವಕೃಪೆಗೆ ಒಳಗಾಗಿ ದ್ದರಿಂದ ಸರ್ಕಾರ ಜಿಲ್ಲೆಯನ್ನು ಸಂಪೂರ್ಣ ಬರಗಾಲ ಪೀಡಿತ ಜಿಲ್ಲೆಯೆಂದು ಘೋಷಿಸಿತು. ಸರಿ ಸುಮಾರು ವರ್ಷದಿಂದ ಜಿಲ್ಲೆಯಲ್ಲಿ ಹನಿ ಮಳೆ ಆಗಿಲ್ಲ. ಇದರ ಪರಿಣಾಮ ಬೇಸಿಗೆಯ ರಣ ಬಿಸಿಲು ಜನರನ್ನು ಇನ್ನಿಲ್ಲದಂತೆ ಕಾಡ ತೊಡಗಿದೆ.

ಆರೋಗ್ಯದಲ್ಲಿ ಏರುಪೇರು:  ಜಿಲ್ಲಾದ್ಯಂತ ತಾಪಮಾನ ಸುಮಾರು 38 ಡಿಗ್ರಿ ತಲುಪಿದ್ದು, ಸಾಮಾನ್ಯವಾಗಿ ಬೇಸಿಗೆಯಲ್ಲಿ ಜಿಲ್ಲೆಯ ತಾಪಮಾಣ ಕನಿಷ್ಠ 32 ರಿಂದ 35 ರೊಳಗೆ ಇರುತ್ತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ಏಪ್ರಿಲ್‌ ತಿಂಗಳ ಆರಂಭದಿಂದ ಬೇಸಿಗೆಯ ಬಿಸಿ ಜನರನ್ನು ಸಾಕಷ್ಟು ಸಂಕಷ್ಟಕ್ಕೀಡು ಮಾಡಿದ್ದು, ಜನ ಜೀವನ ಅಸ್ತವ್ಯಸ್ಥ ಮಾಡಿದೆ. ಬಿಸಿಲಿನ ಪರಿಣಾಮ ಜನರ ಆರೋಗ್ಯದಲ್ಲಿ ಸಾಕಷ್ಟು ಏರುಪೇರು ಕಂಡಿದ್ದು, ಬೇಸಿಗೆಯಲ್ಲಿ ಜನ ಕೆಮ್ಮು, ನೆಗಡಿ, ತೀವ್ರ ತಲೆನೋವು, ಜ್ವರದ ಬಿಸಿಗೆ ನಲುಗುವಂತಾಗಿದೆ. ಜೊತೆಗೆ ಮಕ್ಕಳು, ವಯೋ ವೃದ್ಧರು. ಮಹಿಳೆಯರು ಬೇಸಿಗೆಯ ಪ್ರಖರತೆಗೆ ಮನೆಯಿಂದ ಹೊರ ಬರಲು ಹಿಂದೇಟು ಹಾಕುವ ಸ್ಥಿತಿ ಇದ್ದು, ಮಹಿಳೆಯರು, ಮಕ್ಕಳು ಮನೆಯಿಂದ ಹೊರಗೆ ಬರಲು ಛತ್ರಿ ಬಳಸಿ ತಿರುಗಾಡುವ ಸ್ಥಿತಿಗೆ ಬಿಸಿಲು ತಂದೊಡ್ಡಿದೆ. ಮೊದಲೇ ಚಿಕ್ಕಬಳ್ಳಾಪುರ ಬಯಲು ಪ್ರದೇಶವಾಗಿದ್ದು ಹಲವು ವರ್ಷಗಳಿಂದ ಶಾಶ್ವತ ನೀರಾವರಿ ಇಲ್ಲದೇ ಮಳೆಯನ್ನೆ ಅಶ್ರಯಿಸಿಕೊಂಡು ಜಿಲ್ಲೆಯ ಜನತೆ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಈ ವರ್ಷ ಹಿಂಗಾರು ಮುಂಗಾರು ಎರಡು ರೈತರಿಗೆ ಕೈ ಕೊಟ್ಟಿದ್ದು ಬದುಕಿಗೆ ಆಸರೆ ಆಗಬೇಕಿದ್ದ ಬೆಳೆ ಕಳೆದುಕೊಂಡಿರುವ ರೈತರು ಮತ್ತೂಂದು ಕಡೆ ಮಳೆ ಕೊರತೆಯಿಂದ ಕಾಡುತ್ತಿರುವ ಬರಗಾಲಕ್ಕೆ ಬದುಕಿನ ಬಂಡಿ ಮುನ್ನೆಸುವುದು ಸವಾಲಾಗಿ ಪರಿಣಮಿಸಿದೆ.

ಮಳೆ ಬಿದ್ದರೆ ಅಷ್ಟೇ ಜಿಲ್ಲೆಯ ಜನರಿಗೆ ನೆಮ್ಮದಿ.. :

ಬರಡು ಜಿಲ್ಲೆಯಲ್ಲಿ ಸದ್ಯ ಬಿಸಿಲಿನ ಪರಿಣಾಮ ಭೂಮಿ ಕಾಲಿಡದಷ್ಟು ಕಾದ ಕೆಂಡವಾಗಿದೆ. ಬೇಸಿಗೆಯಿಂದ ಸಾಕಷ್ಟು ರೋಗ ರುಜನಗಳು ಆವರಿಸಿಕೊಂಡು ಜನ ಆಂತಕದಲ್ಲಿದ್ದಾರೆ. ನೀರಿನಲ್ಲದೇ ಕೃಷಿ ಚಟುವಟಿಕೆಗಳು ಸ್ತಬ್ದವಾಗಿ ತೊಡಗಿವೆ. ಕುಡಿಯುವ ನೀರಿಗೂ ಜನ ಪರದಾಡುವಂತಾಗಿದೆ. ಮಳೆ ಬಿದ್ದರೆ ಮಾತ್ರ ಜಿಲ್ಲೆಯ ಜನರಿಗೆ ನೆಮ್ಮದಿ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕೃಪೆ ತೋರಿದ್ದರೂ ಜಿಲ್ಲೆಯಲ್ಲಿ ಮಳೆಗಾಗಿ ಜನ ಚಾತಕಪಕ್ಷಿಗಳಂತೆ ಎದುರು ನೋಡುತ್ತಿದ್ದಾರೆ.

Advertisement

– ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next