ಕಡಬ: ಐತ್ತೂರು ಗ್ರಾ.ಪಂ. ವ್ಯಾಪ್ತಿಯ ಸುಂಕದಕಟ್ಟೆಯಿಂದ ಮುಜೂರುಕಟ್ಟ ಪ್ರದೇಶವನ್ನು ಸಂಪರ್ಕಿಸುವ ಗ್ರಾ.ಪಂ. ರಸ್ತೆಯು ಹದಗೆಟ್ಟಿದ್ದು, ಫಲಾನುಭವಿಗಳು ಹಲವು ವರ್ಷಗಳಿಂದ ಅಭಿವೃದ್ಧಿಪಡಿಸುವಂತೆ ಮಾಡಿದ ಮನವಿಗಳಿಗೆ ಬೆಲೆಯೇ ಇಲ್ಲದಂತಾಗಿದೆ.
ಮಳೆಗಾಲದಲ್ಲಿ ಈ ರಸ್ತೆಯು ಸಂಪೂರ್ಣ ಕೆಸರಿನಿಂದ ಕೂಡಿದ್ದಿ, ವಾಹನ ಬಿಡಿ ಜನರು ಕೂಡ ನಡೆದುಕೊಂಡು ಹೋಗಲಾರದ ಪರಿಸ್ಥಿತಿ ನಿರ್ಮಾಣ ವಾಗುತ್ತದೆ. ಕೆಲವು ವರ್ಷಗಳ ಹಿಂದೆ ಈ ರಸ್ತೆಗೆ ಕೇವಲ ಅರ್ಧ ಕಿ.ಮೀ.ನಷ್ಟು ಕಾಂಕ್ರೀಟ್ ಹಾಕಲಾಗಿದ್ದು, ಉಳಿದ ಭಾಗ ವನ್ನು ಅಭಿವೃದ್ಧಿಪಡಿಸಿಲ್ಲ. ಸ್ಥಳೀಯರು ಪ್ರತೀ ಬಾರಿ ಗ್ರಾಮಸಭೆಗಳಲ್ಲಿ ರಸ್ತೆ ಅಭಿವೃದ್ಧಿ ಪಡಿಸುವಂತೆ ಮನವಿ ಮಾಡುತ್ತಲೇ ಬಂದಿದ್ದಾರೆ.
ಭರವಸೆ ಮಾತ್ರ
ಚುನಾವಣೆಯ ವೇಳೆ ಮತ ಯಾಚನೆಗೆ ಬರುವ ರಾಜಕೀಯ ವ್ಯಕ್ತಿಗಳು ರಸ್ತೆಯನ್ನು ಅಭಿವೃದ್ಧಿಪಡಿಸುವ ಭರವಸೆ ನೀಡಿ ಹೋದರೆ ಮತ್ತೆ ಬರುವುದು ಇನ್ನೊಂದು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಎನ್ನುವುದು ಇಲ್ಲಿನ ಜನರ ದೂರು. ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಎಸ್.ಅಂಗಾರ ಅವರನ್ನು ರಸ್ತೆಯ ಫಲಾನುಭವಿಗಳ ಭೇಟಿಯಾಗಿ ಮನವಿ ಸಲ್ಲಿಸಿದ್ದರೂ ಪ್ರಯೋಜನ ಮಾತ್ರ ಶೂನ್ಯ ಎಂದಿದ್ದಾರೆ. ಈ ರಸ್ತೆಯನ್ನು ಇನ್ನಾದರೂ ಅಭಿವೃದ್ದಿ ಪಡಿಸಿ ಎಂಬುದು ಇಲ್ಲಿನವರ ಬೇಡಿಕೆ.
ಇದ್ದವರಿಗೆಲ್ಲ ಮನವಿ ಕೊಟ್ಟು ಸುಸ್ತಾಗಿದ್ದೇವೆ. ಶೀಘ್ರ ಈ ರಸ್ತೆ ಯನ್ನು ಅಭಿವೃದ್ಧಿಪಡಿಸಲು ಕ್ರಮ ಕೈ ಗೊಳ್ಳಬೇಕಿದೆ ಎಂದು ಸ್ಥಳೀಯ ಮುಂದಾಳು ಬಾಲಕೃಷ್ಣ ಭಟ್ ಮೂಜೂರುಕಟ್ಟ ಹೇಳಿದ್ದಾರೆ.