Advertisement

ಪ್ರವಾಸಿ ಕೇಂದ್ರವಾಗಿ ರಾಮಸಮುದ್ರ ಅಭಿವೃದ್ಧಿ: ಸಚಿವ ಸುನಿಲ್‌

11:33 PM Jan 29, 2023 | Team Udayavani |

ಕಾರ್ಕಳ : ಜನಪ್ರತಿನಿಧಿಯಾಗಿ ಜನರ ನಿರೀಕ್ಷೆಯಂತೆ ಕಾರ್ಯ ಮಾಡಿದ ಸಾರ್ಥಕ ಭಾವ ಮೂಡಿದೆ. ಮುಂದಿನ ದಿನಗಳಲ್ಲಿ ಕಾರ್ಕಳದ ಗರಿಮೆ ಹೆಚ್ಚಿಸಲು ಇನ್ನಷ್ಟು ಶ್ರಮಿಸಲಾಗುವುದು ಎಂದು ಇಂಧನ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ಕಾರ್ಕಳದ ಬೈಲೂರು ಕಾಲೇಜು ಮೈದಾನದಲ್ಲಿ ರವಿವಾರ ನಡೆದ ಪರಶುರಾಮ ಲೋಕಾರ್ಪಣೆಯ ಸಮಾ ರೋಪ ಸಮಾರಂಭದಲ್ಲಿ ಗಜೆಟಿಯರ್‌ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಶಿಕ್ಷಣ, ನೀರಾವರಿ, ಅರೋಗ್ಯ, ತಾಂತ್ರಿಕ, ಕ್ರೀಡೆ, ಹೀಗೆ ಮೂಲ ಸೌಕರ್ಯ ಕ್ಷೇತ್ರಗಳಲ್ಲಿ ಅಭಿವೃದ್ಧಿ ಜತೆಗೆ ವ್ಯವಸ್ಥಿತ ರಸ್ತೆ, ಕಚೇರಿಗಳು ನವರೂಪ ಪಡೆದುಕೊಂಡಿವೆ. ಧಾರ್ಮಿಕ ಕ್ಷೇತ್ರವಾಗಿ ಮಾರಿಯಮ್ಮ ದೇಗುಲ ಅಭಿವೃದ್ಧಿ, ಜತೆಗೆ ಪ್ರವಾಸಿ ಕ್ಷೇತ್ರವಾಗಿ ಕೋಟಿಚೆನ್ನಯ ಪಾರ್ಕ್‌, ಪರಶುರಾಮ ಪ್ರತಿಮೆ ಸ್ಥಾಪಿಸಿ ನಾಡಿಗೆ ಪರಿಚಯಿಸಿದ್ದೇವೆ. ಮುಂದಿನ ದಿನಗಳಲ್ಲಿ ರಾಮಸಮುದ್ರವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಗೊಳಿಸಲಾಗುವುದು ಎಂದರು.

2 ಸಾವಿರ ಉದ್ಯೋಗ ಸೃಷ್ಟಿ
ನಿರುದ್ಯೋಗ ಸಮಸ್ಯೆಗೆ ಜವಳಿ ಉದ್ಯಮ ಸ್ಥಾಪಿಸಲು ಬಜೆಟ್‌ನಲ್ಲಿ ಘೋಷಿಸಲಾಗುವುದು. ಮಹಿಳೆಯರಿಗೆ ಆದ್ಯತೆ ನೀಡಿ 2 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದರು.

ಕಾರ್ಕಳದ ನವ ಶಿಲ್ಪಿ ಸುನಿಲ್‌

Advertisement

ಶಾಸಕ ಹರೀಶ್‌ ಪೂಂಜ ಮಾತನಾಡಿ ಕಾರ್ಕಳ ಕ್ಷೇತ್ರದ ಬಗ್ಗೆ ಯೋಚಿಸುವುದರ ಜತೆಗೆ ಇಡೀ ಜಿಲ್ಲೆಗೆ ಶಕ್ತಿಯಾಗಿ ಸುನಿಲ್‌ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಆಧುನಿಕ ಪರಶುರಾಮ. ಕಾರ್ಕಳದ ನವಶಿಲ್ಪಿ ಎಂದು ಶ್ಲಾಘಿಸಿದರು.

ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಕಲ್ಪನೆಗೂ ಮೀರಿ ಕಾರ್ಕಳದಲ್ಲಿ ಪ್ರತಿಮೆ ನಿರ್ಮಾಣವಾಗಿದೆ ಎಂದರು.

ಗಜೆಟಿಯರ್‌ ಸಂಪಾದಕಿ ರಾಜಮ್ಮ ಚೌಡ ರೆಡ್ಡಿ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಆಡಳಿತಾತ್ಮಕ ಚೌಕಟ್ಟಿನೊಳಗೆ ಸಾಂಸ್ಕೃತಿಕ, ಭೌಗೋಳಿಕವಾಗಿ ಯೋಜನೆಗಳನ್ನು ಬರಹ ರೂಪದಲ್ಲಿ ರೂಪಿಸುತ್ತಿದ್ದರು. ಅದು ಮುಂದೆ ಗಜೆಟಿಯರ್‌ ಆಗಿ ರೂಪು ಪಡೆದುಕೊಂಡಿದೆ ಎಂದರು.

ತುಳುವಲ್ಲಿ ಮಾತನಾಡಿದ ಡಿ.ಸಿ.
ಜಿಲ್ಲಾಧಿಕಾರಿ ಕೂರ್ಮರಾವ್‌ ಅವರು, “ಮಾಂತೆರುಗುಲ ಉಡಲ್‌ ದಿಂಜಿನ ಸೊಲ್ಮೆಲು’ ಎಂದು ತುಳುವಿನಲ್ಲಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಆರ್‌ಎಸ್‌ಎಸ್‌ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ ಭಟ್‌, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ, ಕುರ್ಲಾಡಿ ರಘುವೀರ್‌ ಶೆಟ್ಟಿ, ಸುಧೀರ್‌ಹೆಗ್ಡೆ, ಉದ್ಯಮಿ ಉದಯಕುಮಾರ್‌ ಮುನಿಯಾಲು, ಗಿರೀಶ್‌ ಶೆಟ್ಟಿ ತೆಳ್ಳಾರು, ಉಡುಪಿ ಎಸ್‌ಪಿ ಹಾಕೆ ಅಕ್ಷಯ್‌ ಮಚ್ಚೀಂದ್ರ ಮೊದಲಾದವರು ಉಪಸ್ಥಿತರಿದ್ದರು. ನವೀನ್‌ ನಾಯಕ್‌ ಸ್ವಾಗತಿಸಿದರು. ಸಂಗೀತಾ ಕುಲಾಲ್‌ ನಿರೂಪಿಸಿದರು. ಸದಾನಂದ ಸಾಲ್ಯಾನ್‌ ವಂದಿಸಿದರು.

ದಿನವೊಂದಕ್ಕೆ 1ರಿಂದ 2 ಲಕ್ಷ ಮಂದಿ ಭೇಟಿ
ಪರಶುರಾಮ ಪ್ರತಿಮೆ ವೀಕ್ಷಣೆಗೆ ಲಕ್ಷಾಂತರ ಮಂದಿ ಉಮಿಕ್ಕಳ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದು ಉದ್ಘಾಟನೆಯ ದಿನ ಹಗಲು ಸುಮಾರು 2.5 ಲಕ್ಷ ಮಂದಿ, ಮರುದಿನ 3 ಲಕ್ಷ ಮಂದಿ ಭೇಟಿ ನೀಡಿದ್ದು ಕೊನೆಯ ದಿನವಾದ ರವಿವಾರ 3.5 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿರುವ ಬಗ್ಗೆ ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ. ಜ.30ರಂದು ಸ್ವರಾಜ್‌ ಮೈದಾನದಲ್ಲಿ ಮೈಸೂರು ದಸರಾ ಮಾದರಿಯಲ್ಲಿ ಪೊಲೀಸ್‌ ಕವಾಯತು ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next