Advertisement

ಮತ್ತೆ ಬಂದ “ಸುನೀಲ್‌ರಾವ್‌’

11:10 AM Feb 27, 2020 | Lakshmi GovindaRaj |

ಎಕ್ಸ್‌ಕ್ಯೂಸ್‌ಮಿ’ ಖ್ಯಾತಿಯ ಸುನೀಲ್‌ರಾವ್‌ ಮತ್ತೆ ಬಂದಿದ್ದಾರೆ. ಹೌದು, ಬಹಳ ವರ್ಷಗಳ ಬಳಿಕ ಸಿನಿಮಾರಂಗದಿಂದ ದೂರ ಉಳಿದಿದ್ದ, ಸುನೀಲ್‌ರಾವ್‌ ಈಗ ತಮ್ಮ ಎರಡನೇ ಇನ್ನಿಂಗ್ಸ್‌ ಶುರುಮಾಡಿದ್ದಾರೆ. ಅಂದಹಾಗೆ, ಅವರು ತಮ್ಮ ಮತ್ತೊಂದು ಹೊಸ ಇನ್ನಿಂಗ್ಸ್‌ ಶುರು ಮಾಡಿರೋದು, “ತುರ್ತುನಿರ್ಗಮನ’ ಚಿತ್ರದ ಮೂಲಕ. ಹೌದು, ಸುನೀಲ್‌ ರಾವ್‌ ಹೇಳುವಂತೆ, “ತುರ್ತುನಿರ್ಗಮನ’ ಮೂಲಕ ಎರಡನೇ ಇನ್ನಿಂಗ್ಸ್‌ ಶುರುಮಾಡಿದ್ದಾರೆ.

Advertisement

ಆ ಕುರಿತು ಸುನೀಲ್‌ರಾವ್‌ ಹೇಳುವುದಿಷ್ಟು. “ನಾನು ಬಹಳ ವರ್ಷಗಳ ಬಳಿಕ ಸಿನಿಮಾಗೆ ಮರಳಿದ್ದೇನೆ. ನನಗೂ ಸಿನಿಮಾ ಮಾಡಬೇಕು ಎಂಬ ಆಸೆಯೇನೋ ಇತ್ತು. ಆದರೆ, ಒಳ್ಳೆಯ ಕಥೆಗಳು ಬರಲಿಲ್ಲ. ಬಂದರೂ, ನನಗೆ ಸರಿಹೊಂದುವ ಕಥೆ, ಪಾತ್ರ ಇರಲಿಲ್ಲ. ಹಾಗಾಗಿ ಸುಮ್ಮನಿದ್ದೆ. “ತುರ್ತುನಿರ್ಗಮನ’ ಕಥೆ ಕೇಳಿದಾಗ, ಥ್ರಿಲ್‌ ಎನಿಸಿತು. ಪಾತ್ರದಲ್ಲೂ ವಿಶೇಷತೆ ಇತ್ತು. ಇದೊಂದು ಫ್ಯಾಂಟಸಿ ಡ್ರಾಮ ಆಗಿದ್ದರಿಂದ ಇಷ್ಟವಾಗಿ ಒಪ್ಪಿಕೊಂಡೆ.

ಈ ಚಿತ್ರಕ್ಕೆ ನಾನು ನಾಲ್ಕು ಕೆಜಿ ತೂಕ ಹೆಚ್ಚಿಸಿಕೊಂಡಿದ್ದೇನೆ. ಕಥೆ, ಪಾತ್ರ ಕೇಳಿದಾಗಲೇ, ವಿಭಿನ್ನವಾದಂತಹ ಬಣ್ಣ ತುಂಬಬಹುದು ಎಂದುಕೊಂಡು ಮಾಡಿದೆ. ಅಂದುಕೊಂಡಿದ್ದಕ್ಕಿಂತಲೂ ಅದ್ಭುತವಾಗಿ ಚಿತ್ರ ಮೂಡಿಬಂದಿದೆ. ತುಂಬ ಗ್ಯಾಪ್‌ ಬಳಿಕ ಈ ಚಿತ್ರ ಮಾಡಿದ್ದಕ್ಕೂ ಸಾರ್ಥಕ ಎನಿಸಿದೆ’ ಎಂಬುದು ಅವರ ಮಾತು. ಅಷ್ಟಕ್ಕೂ ಸುನೀಲ್‌ರಾವ್‌, ಈ ಗ್ಯಾಪ್‌ನಲ್ಲಿ ಏನು ಮಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರಿಸುವ ಅವರು, “ಸಿನಿಮಾ ಮಾಡಿ ವರ್ಷಗಳೇ ಕಳೆದಿವೆ.

ಆದರೆ, ಎರಡು ವರ್ಷಗಳ ಹಿಂದೆ ನಾನೊಂದು ವೆಬ್‌ಸೀರಿಸ್‌ ಮಾಡಿದೆ. “ಲೂಸ್‌ ಕನೆಕ್ಷನ್‌’ ಎಂಬ ವೆಬ್‌ಸೀರಿಸ್‌ಗೆ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆ ಸಿಕ್ಕಿತು. ಮೊದಲ ಬಾರಿಗೆ ಕನ್ನಡದಲ್ಲಿ ಫ‌ೂರ್ಣಪ್ರಮಾಣದ ವೆಬ್‌ಸೀರಿಸ್‌ ಮಾಡಿದ ಖುಷಿ ನನ್ನದಾಯ್ತು. ಆ ನಂತರ ಕಥೆಗಳು ಬಂದರೂ, ಇಷ್ಟವಾಗಲಿಲ್ಲ. ಸಂಗೀತ ಹಾಗು ಹಾಡುವ ಕಡೆಗೆ ಗಮನಹರಿಸಿದೆ. ಈ ನಡುವೆ ಗಜ್ಹಲ್‌ ಕಲಿತೆ. ಗಜ್ಹಲ್‌ ಕಾರ್ಯಕ್ರಮವನ್ನೂ ಕೊಟ್ಟೆ. ಹಲವು ಕಾರ್ಪೋರೆಟ್‌ ಕಂಪೆನಿಗಳಿಗೆ ಮ್ಯೂಸಿಕ್‌ ಶೋ ಮಾಡಿದೆ.

ಗೆಳೆಯರ ಜೊತೆಯಲ್ಲೂ ನಾನು ಹಲವು ಸಂಗೀತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡೆ. ಯಾವಾಗ, ನಾನು 2017 ರಲ್ಲಿ “ಲೂಸ್‌ ಕನೆಕ್ಷನ್‌’ ವೆಬ್‌ಸೀರಿಸ್‌ನಲ್ಲಿ ನಟಿಸಿದೆನೋ, ಅಲ್ಲಿಂದ ಪುನಃ ನಟಿಸುವ ಆಸೆ ಹೆಚ್ಚಾಯ್ತು. ಒಳ್ಳೆಯ ಕಥೆ ಬಂದರೆ, ಬಿಡುವುದು ಬೇಡ ಎಂಬ ನಿರ್ಧಾರ ಮಾಡಿದೆ. ಅಲ್ಲಿಂದ ನಟನೆಯಲ್ಲಿ ಸಕ್ರಿಯವಾಗಬೇಕು ಅಂದುಕೊಂಡು, ಈಗ “ತುರ್ತುನಿರ್ಗಮನ’ ಮಾಡಿದ್ದೇನೆ. ಹಾಗೆ ಹೇಳುವುದಾದರೆ, ಇದು ಸೆಕೆಂಡ್‌ ಇನ್ನಿಂಗ್ಸ್‌. ಇನ್ಮುಂದೆ ನಾಟೌಟ್‌ ಆಗಬಾರದು ಅಂದುಕೊಂಡಿದ್ದೇನೆ’ ಎನ್ನುತ್ತಾರೆ ಸುನೀಲ್‌ರಾವ್‌.

Advertisement

ಅಂದಹಾಗೆ, ತಮ್ಮ ಪಾತ್ರ ಕುರಿತು ಹೇಳುವ ಸುನೀಲ್‌ರಾವ್‌, “ಇಲ್ಲೊಂದು ಸ್ಪೆಷಲ್‌ ಎಲಿಮೆಂಟ್ಸ್‌ ಇದೆ. ಎಲ್ಲರ ಲೈಫ‌ಲ್ಲೂ ಬರುವಂತಹ ಘಟನೆಗಳು ಇಲ್ಲಿರುವ ಹೀರೋ ಬದುಕಲ್ಲೂ ಬರುತ್ತೆ. ಅದೊಂದು ರೀತಿ ಸೋಂಬೇರಿಯಾಗಿರುವ ಪಾತ್ರ. ಸದಾ ಕ್ರಿಕೆಟ್‌ ಆಡಿಕೊಂಡು, ಲೇಟ್‌ ಆಗಿ ಎದ್ದು, ಅತ್ತಿತ್ತ ಸುತ್ತಾಡುವ ಪಾತ್ರ. ಒಂದು ಘಟನೆ ಸಂಭವಿಸಿದಾಗ, ಅವನು ಹೇಗೆಲ್ಲಾ ರಿಯಾಕ್ಟ್ ಮಾಡ್ತಾನೆ ಎಂಬುದೇ ಕಥೆ. ಎಲ್ಲವನ್ನೂ ಈಗಲೇ ಹೇಳಿದರೆ ಮಜ ಇರಲ್ಲ. ಸಿನಿಮಾ ನೋಡಿ’ ಎಂದಷ್ಟೇ ಹೇಳುತ್ತಾರೆ ಅವರು.

Advertisement

Udayavani is now on Telegram. Click here to join our channel and stay updated with the latest news.

Next