Advertisement
ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಪತನ ಹಾಗೂ ಕೆಲ ಸ್ಟಾರ್ ಆಟಗಾರರ ಗೈರು ಹಾಜರಿಯಿಂದ ಐಪಿಎಲ್‌ನ ಟಿಆರ್‌ಪಿ ಕುಸಿದಿದೆ ಎಂಬ ವಿಶ್ಲೇಷಣೆಯಿದೆ. ಅದು ಸಂಪೂರ್ಣ ನಿಜವಲ್ಲ. ವೀಕ್ಷಕ ದಿನಬೆಳಗಾಗುವುದರೊಳಗಾಗಿ ಹುಟ್ಟುವ ತಾರೆಯರತ್ತ ವಲಸೆ ಹೋಗಬಲ್ಲ, ಅವರನ್ನು ಆರಾಧಿಸಬಲ್ಲ. ಅವರನ್ನು ಹಿಂಬಾಲಿಸಲು ಶುರು ಮಾಡಲೂ ಓಕೆ. ಆತನಿಗೆ ಕ್ರಿಸ್ ಗೇಲ್, ಯುವರಾಜ್‌ಸಿಂಗ್, ಡಿವಿಲಿಯರ್, ಮೆಕಲಂ ಮಾತ್ರ ಬ್ಯಾಟ್ ಬೀಸಬೇಕು ಎಂದಿಲ್ಲ. ಆದರೆ ತಾರೆಯರು ಒನ್‌ಶೋ ವಂಡರ್‌ಗಳಾಗಬಾರದು. ಸಫಲತೆಯ ಮಾತು ಬದಿಗಿಟ್ಟರೂ ಕೊನೆಪಕ್ಷ ಹೊಸ ಹೊಸ ಪ್ರಯೋಗಗಳಾಗಬೇಕು. ಅಂತಹವುಗಳ ಕೊರತೆಯೇ ಐಪಿಎಲ್‌ಗೆ ಟಿವಿ ವೀಕ್ಷಕರ ಸಂಖ್ಯೆಯನ್ನು ಕಡಿತಗೊಳಿಸಿದೆ.
Related Articles
Advertisement
ಕಳೆದ ವರ್ಷಗಳ ಐಪಿಎಲ್‌ನಲ್ಲಿ ಬ್ಯಾಟಿಂಗ್‌ನ ಹೊಸ ಹೊಡೆತಗಳ ಪ್ರಯೋಗ ನಡೆದಿದೆ. ಸ್ವಿಚ್ ಹಿಟ್ಟಿಂಗ್, ಥರ್ಡ್ ಮ್ಯಾನ್ ಮೇಲೆ ಸಿಕ್ಸ್ “ಹಾರಿಸುವ ತಂತ್ರ, ಪ್ಯಾಡಲ್ ಸ್ವೀಪ್ ಮಾದರಿಯ ಸಂಶೋಧನೆಗಳು ಈಗ ಕ್ರಿಕೆಟ್ ಬ್ಯಾಟಿಂಗ್ ಮ್ಯಾನುಯಲ್‌ನ ಭಾಗಗಳಾಗಿವೆ. ಹೊಸದಾದ ಹೊಡೆತ, ಫೀಲ್ಡಿಂಗ್‌ನ ನೂತನ ಆ್ಯಕ್ಷನ್ ಈ ಋತುವಿನಲ್ಲಿ ನಾವು ನೋಡಿಲ್ಲ. ಈ ಮಧ್ಯೆ ಗುಜರಾತ್ ವಿರುದ್ಧ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮ ಸೂಪರ್ ಓವರ್‌ನಲ್ಲಿ ಅನನುಭವಿ ಬುಮ್ರಾ ಕೈಗೆ ಚೆಂಡು ಕೊಟ್ಟಿದ್ದು ಒಂದು ಅನಿರೀಕ್ಷಿತ ಕ್ರಮವಾಗಿತ್ತು. ತಂಡದಲ್ಲಿ ಶ್ರೀಲಂಕಾದ ಲಸಿತ್ ಮಾಲಿಂಗ ಇದ್ದರು, ಹರ್ಭಜನ್ ಸಿಂಗ್ ಲಭ್ಯರಿದ್ದರು. ಫಾರಂನಲ್ಲಿರುವ ಬೌಲರ್ ಮೈಕೆಲ್ ಮೆಕ್ಲೆನಗನ್ ಸಿದ್ಧರಿದ್ದರು. ಬುಮ್ರಾ ಆಯ್ಕೆ ಎದುರಾಳಿಗಳನ್ನು ಗಲಿಬಿಲಿಗೊಳಿಸಿದ್ದರಿಂದಲೇ ಕೇವಲ 12 ರನ್ ಬೇಕಿದ್ದಲ್ಲಿ ಬ್ರೆಂಡನ್ ಮೆಕಲಂ ಹಾಗೂ ಏರಾನ್ ಫಿಂಚ್‌ಗೆ ಆರು ರನ್ ಕೂಡಿಸಲಷ್ಟೇ ಸಾಧ್ಯವಾಯಿತು.
ಪಿಂಚ್ ಹಿಟ್ಟಿಂಗ್ ಕಳೆದುಕೊಳ್ಳುವುದು ಏನೂ ಇಲ್ಲದ ಒಂದು ಅಸ್ತ್ರ. ಈ ನಡೆಯನ್ನು ಐಪಿಎಲ್ ತಂಡಗಳು ಸಮರ್ಥವಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಅಂಶ ವ್ಯಕ್ತವಾಗುತ್ತಿದೆ. ಆಡುವ 11 ಜನ ಎಂದರೇ ಹೊಡಿಬಡಿಯ ಆಟಗಾರರ ಸಂಯೋಜನೆಯಾಗಿರುವಾಗ ಪಿಂಚ್ ಹಿಟ್ಟರ್ ಅಸ್ತ್ರ ವ್ಯರ್ಥ ಎಂಬ ಭಾವನೆಯಿರಬಹುದು. ಏಕದಿನ ಕ್ರಿಕೆಟ್‌ನಲ್ಲಿ ಈ ಪಿಂಚ್ ಹಿಟ್ಟರ್ ವಿಕೆಟ್ ನಡುವಿನ ಓಟದಲ್ಲಿ ಗೊಂದಲಕಾರಿ ಆಗಿರುವುದರಿಂದ ತನ್ನೊಂದಿಗಿನ ಅಗ್ರ ಬ್ಯಾಟ್ಸ್‌ಮನ್‌ರನ್ನು ರನ್‌ಔಟ್ ಮಾಡಿಬಿಡುವ ಅಪಾಯವಿರುತ್ತದೆ. ಹಾಗಾಗಿ ಈ ತಂತ್ರ ಬೂಮರ್‍ಯಾಂಗ್ ಆಗಿಬಿಡಬಹುದು ಎಂಬ ಶಂಕೆಯನ್ನು ಕ್ರಿಕೆಟ್ ತಜ್ಞರು ಮಂಡಿಸುತ್ತಾರೆ. ಆ ಮಟ್ಟಿಗೆ ಟಿ20ಯಲ್ಲಿ ಆ ಅಪಾಯ ಕಡಿಮೆ. ಮುಂಬೈ ತಂಡ ಹರ್ಭಜನ್ ಸಿಂಗ್ ಥರದವರನ್ನು ಇದ್ದಕ್ಕಿದ್ದಂತೆ ಟಾಪ್ ಆರ್ಡರ್ ಬ್ಯಾಟಿಂಗ್‌ಗೆ ಕಳುಹಿಸಬಹುದಿತ್ತು. 10 ಓವರ್‌ಗಳ ನಂತರವೂ 10 ಚೆಂಡಿಗೆ ಬೀಸಿ ಹೊಡೆಯಲು ಆಕ್ರಮಣಕಾರಿ ಬೌಲಿಂಗ್ ಆಲ್‌ರೌಂಡರ್ ಬಳಸುವ ಯೋಚನೆ ಮಾಡಬಹುದಿತ್ತು. ಆಟಗಾರರಿದ್ದರು, ಅವಕಾಶ ಮುಕ್ತವಾಗಿತ್ತು. ಆದರೆ ಹೊಸದು ಅನ್ನುವಂತಹ ಪ್ರಯೋಗಗಳೇ ನಡೆಯಲಿಲ್ಲ. ಆ ಮಟ್ಟಿಗೆ 2017ರ ಐಪಿಎಲ್ ನಿರಾಸೆ ಮೂಡಿಸುತ್ತದೆ.
ನಾರಾಯಣ್ ಯಶಸ್ಸು, ಧವನ್‌ಗೆ ಬೌನ್ಸರ್!ಸುನಿಲ್ ನಾರಾಯಣ್ ಯಶಸ್ಸನ್ನು ಆನಂದಿಸುತ್ತಿರುವ ಕ್ರಿಕೆಟ್ ವಿಶ್ಲೇಷಕ ಅಭಿಮಾನಿಗಳು ಉಳಿದವರೆಡೆ ಟ್ವೀಟ್ ಬಾಣಗಳನ್ನು ಬಿಡುತ್ತಿದ್ದಾರೆ. ಸುನೀಲ್ ತಮ್ಮ ಅಗ್ರ ಕ್ರಮಾಂಕಕ್ಕೆ ಅನುರೂಪವಾದ ಬ್ಯಾಟಿಂಗ್ ಮಾಡಿ ಈ ಸ್ಥಾನಕ್ಕೆ ಗೌರವ ನೀಡಿದ್ದಾನೆ. ಶಿಖರ್ ಧವನ್ ಏಕೆ 9ನೇ ಕ್ರಮಾಂಕದಲ್ಲಿ ಆಡಿ ಆ ಸ್ಥಾನದ ಗೌರವ ಉಳಿಸಬಾರದು? ಹಾಗಂತ ಟ್ವೀಟ್ ಒಂದು ಕಾಲೆಳೆದಿದೆ. ಮಾ.ವೆಂ.ಸ.ಪ್ರಸಾದ್