ಬೆಂಗಳೂರು : ವಾಸ್ತವ್ಯ ಪ್ರಮಾಣಪತ್ರ ಇಲ್ಲದ ಕಾರಣಕ್ಕೆ ವಿದ್ಯುತ್ ಸಂಪರ್ಕ ನಿರಾಕರಿಸಲ್ಪಟ್ಟಿದ್ದ ಸುಮಾರು 5 ಲಕ್ಷ ಜನರ ಮನೆಯಲ್ಲಿ “ಬೆಳಕು” ಮೂಡಿಸುವ ಕಾರ್ಯಕ್ಕೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಅವರು, ನಿರ್ಮಾಣ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂಬ ನೆಪ ನೀಡಿ ಮನೆ, ವಸತಿ ಸಮುಚ್ಚಯಗಳಿಗೆ ಬಿಬಿಎಂಪಿ ವಾಸ್ತವ್ಯ ಪ್ರಮಾಣ ಪತ್ರ
ನಿರಾಕರಿಸಿದ್ದರು. ಈ ಹಿನ್ನೆಲೆ ಕೆಲ ದಿನಗಳ ಹಿಂದೆ ಬಿಜೆಪಿಯ ನಗರ ಶಾಸಕರು ನನ್ನನ್ನು ಭೇಟಿ ಮಾಡಿ ನಿಯಮ ಬದಲಾವಣೆಗೆ ಮನವಿ ಸಲ್ಲಿಸಿದ್ದರು.
ಮುಖ್ಯಮಂತ್ರಿಯವರ ಜತೆ ಚರ್ಚಿಸಿ, ವಿದ್ಯುತ್ ಸಂಪರ್ಕ ನೀಡುವ ಪ್ರಸ್ತಾಪಕ್ಕೆ ಒಪ್ಪಿಗೆ ಪಡೆಯಲಾಯಿತು ಎಂದರು.
ಬೆಳಕು ಯೋಜನೆಯು ನಗರ ಪ್ರದೇಶದ ವಿದ್ಯುತ್ ವಂಚಿತರಿಗೂ ಸಂಪರ್ಕ ಕಲ್ಪಿಸುವ ಮಹತ್ವದ ನಿರ್ಧಾರ ಹೊಂದಿದ್ದು, ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಲಾಗುತ್ತದೆ ಎಂದು ತಿಳಿಸಿದರು. ವಾಸ್ತವ್ಯ ಪ್ರಮಾಣಪತ್ರ ಇಲ್ಲ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕ ವಂಚಿತರಾದವರ ಬವಣೆಯ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಬೆಂಗಳೂರು ನಗರದ ಶಾಸಕರೂ ಮನವಿ ಸಲ್ಲಿಸಿದ್ದರು.
ಆಕ್ಯುಪೇಷನ್ ಸರ್ಟಿಫಿಕೇಟ್(ಒಸಿ) ಇಲ್ಲದವರಿಗೂ ಸಂಪರ್ಕ ನೀಡುವ ಬಗ್ಗೆ ಸದ್ಯದಲ್ಲೇ ಆದೇಶ ಪ್ರಕಟಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ : ಆರೋಗ್ಯ ಕೇಂದ್ರದ ಸುತ್ತ ಅನಾರೋಗ್ಯ ವಾತಾವರಣ: ಕೇಂದ್ರದ ಸುತ್ತಲೂ ಕುಡುಕರ ಹಾವಳಿ