ಸುನೀಲ್ ಚೆಟ್ರಿ ಭಾರತ ಕಂಡ ಅಪ್ರತಿಮ ಫುಟ್‌ಬಾಲಿಗ. ಭಾರತದ ಫುಟ್‌ಬಾಲ್ ತಾರೆ ಬೈಚುಂಗ್ ಭುಟಿಯ ನಂತರ ಭಾರತಕ್ಕೆ ದೊರಕಿದ ಮಾಣಿಕ್ಯ.
ಭಾರತ ಫುಟ್‌ಬಾಲ್ ಅಭಿಮಾನಿಗಳು ಸುನೀಲ್ ಚೆಟ್ರಿಯನ್ನು ದೇವರಂತೆ ಪೂಜಿಸುತ್ತಾರೆ. ಚೆಟ್ರಿಗೆ ಸರಿಸಾಟಿ ಚೆಟ್ರಿಯೆ ಹೊರತು ಇನ್ಯಾರು ಇಲ್ಲ. ಯಾವುದೇ ಸಮಯವಾಗಿರಲಿ ಎದುರಾಳಿಯ ಮೇಲೆ ಮಿಂಚಿನಂತೆ ಎರಗಿ ತಂಡಕ್ಕೆ ಗೆಲುವು ತಂದುಕೊಡಬಲ್ಲ ಚಾಕಚಕ್ಯತೆ ಚೆಟ್ರಿಗೆ ನೀರು ಕುಡಿದಷ್ಟೇ ಸಲೀಸು. ಅಂತಹ ಚೆಟ್ರಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ವೈಯಕ್ತಿಕವಾಗಿ 100 ಪಂದ್ಯಗಳನ್ನು ಇಂಟರ್‌ಕಾಂಟಿನೆಂಟಲ್ ಪಂದ್ಯದ ವೇಳೆ ಪೂರೈಸಿದ್ದಾರೆ. ಕೀನ್ಯಾ ವಿರುದ್ಧದ ಪಂದ್ಯ ಅವರ ವೃತ್ತಿ ಜೀವನದ ಅವಿಸ್ಮರಣೀಯ ಕ್ಷಣವನ್ನಾಗಿಸಿತ್ತು.
ಒಂದೇ ಟ್ವೀಟ್‌ಗೆ ಅಭಿಮಾನಿ ಸಾಗರ: ಸುನೀಲ್ ಚೆಟ್ರಿ ಕೀನ್ಯಾ ವಿರುದ್ಧದ ಪಂದ್ಯದ ಆರಂಭಕ್ಕೂ ಮೊದಲ ದಿನ ಟ್ವೀಟರ್‌ನಲ್ಲಿ “ರೋನಾಲ್ಡೊ, ಮೆಸ್ಸಿ, ನೇಯ್ಮರ್ ಪಂದ್ಯ ವೀಕ್ಷಿಸುವ ಅಭಿಮಾನಿಗಳೇ ದಯವಿಟ್ಟು ಭಾರತದ ಪಂದ್ಯವನ್ನು ನೋಡಿ. ಇಲ್ಲಿ ಬಂದು ಬೈಯಿರಿ, ಕೂಗಿ, ಅರಚಿ, ಆದರೆ ದಯವಿಟ್ಟು ಕ್ರೀಡಾಂಗಣಕ್ಕೆ ಬನ್ನಿ’ ಎಂದು ಮನವಿ ಮಾಡಿದ್ದರು. ಇವರ ಮನವಿಗೆ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ, ಕ್ರಿಕೆಟ್ ದಿಗ್ಗಜ ಸಚಿನ್ ಸೇರಿದಂತೆ ಅನೇಕರು ಸ್ಪಂದಿಸಿದ್ದಾರೆ. ಟ್ವೀಟ್‌ನಿಂದಾಗಿ 18 ಸಾವಿರ ಆಸನವಿದ್ದ ಮುಂಬೈ ಕ್ರೀಡಾಂಗಣ ಭರ್ತಿಯಾಗಿತ್ತು. ಇದಕ್ಕೂ ಮೊದಲು ಚೈನೀಸ್ ತೈಫೆ ವಿರುದ್ಧ ನಡೆದ ಪಂದ್ಯದ ವೇಳೆ ಕ್ರೀಡಾಂಗಣ ಖಾಲಿ ಹೊಡೆದಿತ್ತು. ಇದರಿಂದ ಚೆಟ್ರಿ ತೀವ್ರ ಬೇಸರಕ್ಕೆ ಒಳಗಾಗಿದ್ದರು.
63 ಅಂತಾರಾಷ್ಟ್ರೀಯ ಗೋಲು: 33 ವರ್ಷದ ಸುನೀಲ್ ಚೆಟ್ರಿ ಒಟ್ಟಾರೆ 100 ಅಂತಾರಾಷ್ಟ್ರೀಯ ಪಂದ್ಯಗಳಿಂದ 63 ಗೋಲು ಸಿಡಿಸಿದ್ದಾರೆ. ಭಾರತದ ಪರವಾಗಿ ಇಷ್ಟೊಂದು ಗೋಲು ಸಿಡಿಸಿರುವ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.
ಐ ಲೀಗ್‌ನಲ್ಲೂ ಮಿಂಚು: ಸುನೀಲ್ ಚೆಟ್ರಿ ಐ ಲೀಗ್ ಫುಟ್‌ಬಾಲ್‌ನಲ್ಲೂ ಪ್ರಚಂಡ ಪ್ರದರ್ಶನ ತೋರಿದ್ದಾರೆ. ಪ್ರಸ್ತುತ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡವನ್ನು ಪ್ರತಿನಿಧಿಸುತ್ತಿರುವ ಚೆಟ್ರಿ 2002-2005ರಲ್ಲಿ ಮೋಹನ್ ಬಗಾನ್ ಪರ ಐ ಲೀಗ್ ಆರಂಭಿಸಿದರು. ಇದಾದ ಬಳಿಕ ಜೆಸಿಟಿ ಪರ (2005-08) , ಈಸ್ಟ್ ಬೆಂಗಾಲ್ (2008-09), ಡೆಂಪೊ (2009-10), ಕನ್ಸಾಸ್ ಟಿಟಿ ವಿಜಾರ್ಡ್ಸ್ (2010), ಚಿರಾಗ್ ಯುನೈಟೆಡ್ (2011), ಮೋಹನ್ ಬಗಾನ್ (2011-012), ನ್ಪೋರ್ಟಿಂಗ್ ಸಿಪಿ ಬಿ (2012-013), ಚರ್ಚಿಲ್ ಬ್ರದರ್ (2013), ಬೆಂಗಳೂರು ಎಫ್ಸಿ (2013-15), ಮುಂಬೈ ಸಿಟಿ (2015), ಬೆಂಗಳೂರು ಎಫ್ಸಿ (2016), ಮುಂಬೈ ಸಿಟಿ (2016) ಕ್ಲಬ್ ತಂಡದ ಪರ ಐ ಲೀಗ್ ಆಡಿದ್ದಾರೆ. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನಲ್ಲೂ ಅದ್ಭುತ ಆಟ ಪ್ರದರ್ಶಿಸಿದ್ದಾರೆ.
ಅರಸಿ ಬಂದ ಪ್ರಶಸ್ತಿಗಳು: ಅರ್ಜುನ ಪ್ರಶಸ್ತಿ (2011), ಎಐಎಫ್ಎಫ್ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿ (2007, 2011, 2013, 2014), ಎಎಫ್ಸಿ ಚಾಲೆಂಜ್ ಕಪ್ ಜನಪ್ರಿಯ ಫುಟ್ಬಾಲಿಗ ಪ್ರಶಸ್ತಿ (2008), ಸ್ಯಾಫ್ ಚಾಂಪಿಯನ್‌ಶಿಪ್ ಪಂದ್ಯ ಪುರುಷ (2011), ಹೀರೋ ಆಫ್ ಐ ಲೀಗ್ (2016-17), ಹೀರೊ ಆಫ್ ಇಂಡಿಯನ್ ಸೂಪರ್ ಲೀಗ್ (2017-18)
ಹೇಮಂತ್ ಸಂಪಾಜೆ