Advertisement

Farmrs: ರೈತರನ್ನು ಸಾಲದ ಸುಳಿಗೆ ಸಿಲುಕಿಸಿದ ಸೂರ್ಯಕಾಂತಿ

04:15 PM Sep 11, 2023 | Team Udayavani |

ಗುಂಡ್ಲುಪೇಟೆ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಬೆಳೆ ಸೇರ್ಪಡೆಯಾಗಿದ್ದರೂ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಖರೀದಿ ಕೇಂದ್ರ ತೆರೆಯದ ಹಿನ್ನೆಲೆ ರೈತರಿಗೆ ಹೆಚ್ಚಿನ ನಷ್ಟ ಉಂಟಾಗಿದೆ.

Advertisement

ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 15 ಸಾವಿರ ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ ಬೆಳೆ ಬಿತ್ತನೆ ಮಾಡಲಾಗಿತ್ತು. ಆದರೆ, ಮಳೆ ಕೊರತೆಯಿಂದ ಇಳುವರಿ ಬಾರದೆ ಶೇ.70 ಬೆಳೆ ನೆಲ ಕಚ್ಚಿದ್ದು, ಕೇವಲ ಶೇ.30 ಮಾತ್ರ ಬೆಳೆ ಬಂದಿದೆ. ಈ ಮಧ್ಯೆ ಖರೀದಿ ಕೇಂದ್ರ ತೆರೆಯದ ಹಿನ್ನೆಲೆ ಸೂರ್ಯಕಾಂತಿ ಬೆಳೆದ ರೈತರು ಕ್ವಿಂಟಲ್‌ಗೆ 4600ರಿಂದ 4800 ರೂ. ದಲ್ಲಾಳಿಗಳ ಮೂಲಕ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರು ಮತ್ತಷ್ಟು ನಷ್ಟ ಅನುಭವಿಸುವಂತಾಗಿದೆ.

ಎಲ್ಲಾ ಹೋಬಳಿಗಳಲ್ಲಿ ಮಳೆ ಕೊರತೆ: ತಾಲೂಕಿನ ಹಂಗಳ, ತೆರಕಣಾಂಬಿ, ಕಸಬಾ, ಬೇಗೂರು ಹೋಬಳಿ ಭಾಗದಲ್ಲಿ ಮಳೆ ಕೊರತೆಯಿಂದ ಸೂರ್ಯಕಾಂತಿ ಇಳುವರಿ ಕಡಿಮೆಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಹಂಗಳ, ಕಸಬಾ ಹೋಬಳಿ ರೈತರು ಸೂರ್ಯಕಾಂತಿ ಬೆಳೆ ಬೆಳೆದು ಕೈಸುಟ್ಟುಕೊಳ್ಳವಂತಾಗಿದೆ.

ಬೆಂಬಲ ಬೆಲೆ ಅಡಿ 6760 ರೂ.: ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿಗೆ 6760 ರೂ. ಬೆಲೆ ನಿಗದಿ ಮಾಡಲಾಗಿತ್ತು. ಆದರೆ ಖರೀದಿ ಕೇಂದ್ರ ತೆರೆಯದ ಹಿನ್ನೆಲೆ ದಲ್ಲಾಳಿಗಳು ಕೇಳಿದ ಬೆಲೆಗೆ ರೈತರು ಸೂರ್ಯಕಾಂತಿ ಮಾರಾಟ ಮಾಡಿದ್ದಾರೆ.

ಹಾಕಿದ ಬಂಡವಾಳವೂ ಕೈ ಸೇರಲಿಲ್ಲ: ಸೂರ್ಯಕಾಂತಿ ಬೆಳೆಗೆ ಒಂದು ಎಕರೆಗೆ ರೈತ 15ರಿಂದ 20 ಸಾವಿರ ರೂ. ಬಂಡವಾಳ ಹಾಕಿ ಬೆಳೆಯಲಾಗಿತ್ತು. ಆದರೆ, ಮಳೆ ಕೊರತೆಯಿಂದ ಶೇ.30 ಮಾತ್ರ ಬೆಳೆ ಬಂದಿದ್ದು, ಶೇ.70 ಇಳುವರಿ ಬಾರದೆ ನೆಲ ಕಚ್ಚಿದೆ. ಇದರಿಂದ ರೈತನಿಗೆ ಹಾಕಿದ ಬಂಡವಾಳವೂ ಕೈಸೇರದ ಸಾಲದ ಸುಳಿಗೆ ಸಿಲುವಂತಾಗಿದೆ.

Advertisement

ಜೂನ್‌ ನಲ್ಲಿ ಖರೀದಿ ಕೇಂದ್ರ ತೆರೆಯಬೇಕಿತ್ತು: ಸೂರ್ಯಕಾಂತಿ ಬೆಳೆ ಜುಲೈ ಮೊದಲ ವಾರದಲ್ಲಿ ಕಟಾವಿಗೆ ಬಂದಿತ್ತು. ಎಂಎಸ್‌ಪಿ ಯೋಜನೆಯಡಿ 6760 ರೂ. ಇದ್ದರೂ ದಲ್ಲಾಳಿಗಳು 4500 ರೂ.ಗೆ ಖರೀದಿ ಮಾಡುತ್ತಿದ್ದರು. ಇದರಿಂದ ರೈತರಿಗೆ ನಿಗದಿತ ಬೆಲೆ ಇಲ್ಲದೆ ನಷ್ಟ ಉಂಟಾಗುತ್ತಿರುವ ಮಾಹಿತಿ ಇದ್ದರೂ ಅಧಿಕಾರಿಗಳು ಬೆಳೆ ಕಟಾವಿಗೂ ಮುಂಚೆಯೇ ಖರೀದಿ ಕೇಂದ್ರ ತೆರೆಯುವಲ್ಲಿ ವಿಫ‌ಲರಾಗಿದ್ದಾರೆ. ಇದು ರೈತರನ್ನು ನಷ್ಟದ ಸುಳಿಗೆ ಸಿಲುಕುವಂತೆ ಮಾಡಿದೆ.

ಗುಂಡ್ಲುಪೇಟೆ ಬರಪೀಡಿತ ಪಟ್ಟಿಗೆ ಸೇರಿಸಲು ಆಗ್ರಹ:

ಪ್ರಸ್ತಕ್ತ ಸಾಲಿನಲ್ಲಿ ಚಾಮರಾಜನಗರದ ಜಿಲ್ಲೆಯಲ್ಲಿ ಮಳೆಯಾಗದೇ ರೈತರು ಕಂಗಾಲಾಗಿದ್ದು, ಸಮರ್ಪಕವಾಗಿ ಬೆಳೆ ಬೆಳೆಯಲಾಗದ ಪರಿಸ್ಥಿತಿ ನಿರ್ಮಾ ಣವಾಗಿದೆ. ಅದರಲ್ಲಿಯೂ ಕೇರಳ ಹಾಗೂ ತಮಿಳುನಾಡು ಗಡಿ ಹಂಚಿಕೊಂ ಡಿರುವ ಗುಂಡ್ಲುಪೇಟೆ ತಾಲೂಕಿಗೆ ಮಳೆ ಇಲ್ಲದೇ, ಹೆಚ್ಚಿನ ರೀತಿಯಲ್ಲಿ ಬರದ ಛಾಯೆ ಆವರಿಸಿದೆ. ಆದ್ದರಿಂದ ಈ ಕೂಡಲೇ ಸರ್ಕಾರ ಬರಪೀಡಿತ ತಾಲೂಕಾಗಿ ಘೋಷಿಸುವ ಜತೆಗೆ ವಿಶೇಷ ಪ್ಯಾಕೇಜ್‌ ನೀಡಬೇಕೆಂದು ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಪುರ ಮಹದೇವಪ್ಪ ಒತ್ತಾಯಿಸಿದ್ದಾರೆ.

ತಾಲೂಕಿನಲ್ಲಿ ಮಳೆ ಕೊರತೆಯಿಂದ ಇಳುವರಿ ಕಡಿಮೆಯಾಗಿ ಸೂರ್ಯಕಾಂತಿಯ ಫ‌ಸಲು ಸಮರ್ಪಕವಾಗಿ ಕೈಗೆ ಬರಲಿಲ್ಲ. ಅಲ್ಲದೇ, ನಿಗದಿತ ಬೆಲೆ ಇಲ್ಲದೆ 4600ರಿಂದ 4800 ರೂ.ಗೆ ಮಾರಾಟ ಮಾಡಲಾಯಿತು. ಸರ್ಕಾರ ನೆರವಿಗೆ ಧಾವಿಸದ ಹಿನ್ನಲೆ ನಷ್ಟದ ಸುಳಿಗೆ ಸಿಲುಕುವಂತಾಗಿದೆ.-ವೀರಭದ್ರಸ್ವಾಮಿ, ರೈತ

ಮಳೆ ಇಲ್ಲದೇ ಸೂರ್ಯಕಾಂತಿ ಬೆಳೆ ನಷ್ಟವಾಗಿದೆ. ಈ ಮಧ್ಯೆ ಸೂರ್ಯ ಕಾಂತಿ ಬೆಳೆಗೆ 4500 ರೂ. ಬೆಲೆ ಇರುವು ದನ್ನು ಮನಗಂಡು ಖರೀದಿ ಕೇಂದ್ರ ತೆರೆಯು ವಂತೆ ಜು.14ರಂದು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿತ್ತು. ಡೀಸಿಯೂ ಸರ್ಕಾರಕ್ಕೆ ವರದಿ ನೀಡಿದ್ದರು. ಆದರೆ, ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ.-ಶ್ರೀಧರ್‌,ಎಪಿಎಂಸಿ, ಕಾರ್ಯದರ್ಶಿ, ಗುಂಡ್ಲುಪೇಟೆ 

-ಬಸವರಾಜು ಎಸ್‌.ಹಂಗಳ

Advertisement

Udayavani is now on Telegram. Click here to join our channel and stay updated with the latest news.

Next