Advertisement

ಸಂಡೇ ಲಾಕ್‌ಡೌನ್‌ ಯಶಸ್ವಿ

12:28 PM Jul 20, 2020 | Suhan S |

ವಿಜಯಪುರ: ಕೋವಿಡ್ ನಿಯಂತ್ರಿಸಲು ಸರ್ಕಾರ ಸಂಡೆ ಲಾಕ್‌ಡೌನ್‌ ಮಾಡಿದ್ದಕ್ಕೆ ಜಿಲ್ಲೆಯ ಜನಜೀವನ ಸಂಪೂರ್ಣ ಸ್ತಬ್ಧವಾಗಿತ್ತು. ಕಳೆದ ರವಿವಾರ ಲಾಕ್‌ಡೌನ್‌ ವೇಳೆ ಕಂಡು ಬಂದ ದೃಶ್ಯಾವಳಿಗಳು ಪುನರಾವರ್ತನೆಗೊಂಡವು. ಕೋವಿಡ್ ಅಟ್ಟಹಾಸ ದಿನದಿಂದ ದಿನಕ್ಕೆ ವೇಗವಾಗಿ ಹರಡುತ್ತಿದ್ದು, ಇದ್ದರಿಂದ ಇಡಿ ಜಿಲ್ಲೆಯಲ್ಲಿ ಆತಂಕ ಮನೆ ಮಾಡಿದೆ. ರವಿವಾರದ ಒಂದು ದಿನದ ಮೂರನೇ ಲಾಕ್‌ಡೌನ್‌ ವಿಜಯಪುರ ಜಿಲ್ಲೆಯಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.

Advertisement

ನಗರದ ರಸ್ತೆಯಲ್ಲಿ ಎಲ್ಲಿಯೋ ಒಬ್ಬಿಬ್ಬರು ನಡೆದುಕೊಂಡು, ಬೈಕ್‌ ಮೇಲೆ ಹೋಗುತ್ತಿರುವ ದೃಶ್ಯ ಗೋಚರಿಸಿದ್ದು ಬಿಟ್ಟರೆ ಬಹುಪಾಲು ಜನತೆ ಮನೆಯಿಂದ ಹೊರ ಬರಲಿಲ್ಲ. ಕೆಲವು ದಿನಗಳ ಹಿಂದೆ ಮತ್ತೆ ಗತ ವೈಭವಕ್ಕೆ ಮರಳಿ ಸಾಮಾನ್ಯವಾಗಿ ಇರುತ್ತಿದ್ದ ಜನಸಂದಣಿ ರಸ್ತೆಗಳು ಸಹ ಸಂಪೂರ್ಣ ಬಿಕೋ ಎನ್ನುತ್ತಿದ್ದವು.

ನಗರದ ಹೃದಯ ಭಾಗವಾದ  ಗಾಂಧಿವೃತ್ತ, ಕೇಂದ್ರ ಬಸ್‌ ನಿಲ್ದಾಣ, ಕೆ.ಸಿ. ಮಾರುಕಟ್ಟೆ, ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಮುಖ್ಯ ರಸ್ತೆಗಳಲ್ಲಿ ಜನ, ವಾಹನಗಳ ಸಂಚಾರವಿರಲಿಲ್ಲ. ಅಗತ್ಯ ಸೇವೆಗಳಾದ ಆಸ್ಪತ್ರೆ, ಪೆಟ್ರೋಲ್‌ ಬಂಕ್‌, ಕಿರಾಣಿ ಅಂಗಡಿಗಳು, ಕೋಳಿ ಮತ್ತು ಕುರಿ ಮಾಂಸ, ಹಾಲು ಮಾರಾಟ ಮಳಿಗೆಗಳು ಮಾತ್ರ ಬಾಗಿಲು ತೆರೆದಿದ್ದವು. ಆದರೆ, ಗ್ರಾಹಕರಿಲ್ಲದೇ ವ್ಯಾಪಾರ ಕ್ಷೀಣವಾಗಿತ್ತು. ಎಲ್ಲ ಅಂಗಡಿ, ಮುಂಗಟ್ಟು, ವಾಣಿಜ್ಯ ಮಳಿಗೆಗಳು ಬಾಗಿಲು ಬಂದ್‌ ಆಗಿದ್ದವು. ಬಸ್‌, ಆಟೊ ಸೇರಿದಂತೆ ಜನ, ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಜನರು ಸಹ ಹೊರಗೆ ಬರಲಿಲ್ಲ. ಹೋಟೆಲ್‌ಗ‌ಳು ಸಂಡೆ ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಬಾಗಿಲು ಬಂದ್‌ ಮಾಡಿದ್ದವು.

ಸಾರ್ವಜನಿಕರು ಅನವಶ್ಯಕವಾಗಿ ಹೊರಗೆ ಬಾರದಂತೆ ನೋಡಿಕೊಳ್ಳಲು ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ವಿವಿಧ ಪ್ರಮುಖ ಸ್ಥಳಗಳಲ್ಲಿ ಪೊಲೀಸ್‌ ಅಧಿ ಕಾರಿಗಳು ಪೆಟ್ರೋಲಿಂಗ್‌ ಮಾಡಿ ಅನವಶ್ಯಕವಾಗಿ ಹೊರಗೆ ಬಂದವರಿಗೆ ಬುದ್ಧಿವಾದ ಹೇಳಿ ಮರಳಿ ಕಳುಹಿಸಿದರು ಪ್ರಮುಖ ರಸ್ತೆ ಮಧ್ಯದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ತುರ್ತು ಸೇವೆಗಳಿಗೆ ತೆರಳುವವರ ಐಡಿ ಕಾರ್ಡ್‌ ಪರಿಶೀಲನೆ ನಡೆಸಿದ ನಂತರವಷ್ಟೇ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟರು. ವಿಜಯಪುರ, ಸಿಂದಗಿ, ಮುದ್ದೇಬಿಹಾಳ, ಬಸವನಬಾಗೇವಾಡಿ, ಇಂಡಿ, ಚಡಚಣ, ಹೊರ್ತಿ, ದೇವರಹಿಪ್ಪರಗಿ, ತಿಕೋಟಾ, ಕೊಲ್ಹಾರ, ನಾಲತವಾಡ, ಆಲಮಟ್ಟಿ, ನಿಡಗುಂದಿ, ತಾಳಿಕೋಟೆ ಸೇರಿದಂತೆ ಜಿಲ್ಲೆಯ ನಗರ, ಪಟ್ಟಣಗಳಲ್ಲಿ ಪ್ರಮುಖ ವೃತ್ತಗಳಲ್ಲಿ ಪೊಲೀಸರು ಬ್ಯಾರಿಕೇಡ್‌ ಹಾಕುವ ಮೂಲಕ ಸಂಚಾರಕ್ಕೆ ತಡೆಯೊಡ್ಡಿದ್ದರು. ಬೈಕ್‌, ಕಾರುಗಳಲ್ಲಿ ಅಡ್ಡಾಡುವವರನ್ನು ಪೊಲೀಸರು ತಡೆದು, ವಿಚಾರಣೆ ಮಾಡಿದ ಬಳಿಕ ತುರ್ತು ಇದ್ದವರಿಗೆ ಮಾತ್ರ ಹೋಗಲು ಬಿಟ್ಟರು. ಕೆಲವೆಡೆ ಅನಗತ್ಯವಾಗಿ ಸಂಚರಿಸುವವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next