Advertisement

Vijayapura: ಜಿಲ್ಲೆಯಲ್ಲಿ 5 ಗಂಟೆಗೂ ಅಧಿಕ ಕಾಲ ಸುರಿದ ಮಳೆ… ತುಂಬಿ ಹರಿದ ಹಳ್ಳ-ಕೊಳ್ಳಗಳು

10:26 AM Sep 24, 2024 | sudhir |

ವಿಜಯಪುರ: ಜಿಲ್ಲೆಯಲ್ಲಿ ಸೋಮವಾರ(ಸೆ.23) ರಾತ್ರಿ ಸತತವಾಗಿ 5 ಗಂಟೆಗೂ ಅಧಿಕ ಕಾಲ ಭಾರೀ ಮಳೆ ಸುರಿದಿದೆ. ಜನಜೀವನ ಅಸ್ತವ್ಯಸ್ತಗೊಂಡು, ಮನೆ-ಅಂಗಡಿಗಳಿಗೆ ಮಳೆ ನೀರು ನುಗ್ಗಿ ಪರದಾಡುವಂತಾಗಿದೆ. ಹಳ್ಳ-ಕೊಳ್ಳಗಳು ತುಂಬಿದ್ದು, ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ದೇವಸ್ಥಾನ ಜಲಾವೃತಗೊಂಡಿದೆ.

Advertisement

ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಆರಂಭವಾದ ಮಳೆ ಇಡೀ ರಾತ್ರಿ ಸತತವಾಗಿ ಅಬ್ಬರಿಸಿತು. ನಗರದಲ್ಲಿ ಜೋರು ಮಳೆ ಸುರಿದರೆ, ಜಿಲ್ಲೆಯ ವಿವಿಧೆಡೆ ಗುಡುಗು ಸಹಿತವಾಗಿ ಸುರಿಯಿತು. ಅದರಲ್ಲೂ ನಗರದಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ಶಾಲಿ ನಗರ, ಭಾಗವಾನ್ ಕಾಲೋನಿ, ರಹೀಂ ನಗರ, ಮುಜಾವರ್ ಪ್ಲಾಟ್, ಪ್ರೈಂ ನಗರ, ಕನ್ನಾನ್ ನಗರ, ನೆಹರೂ ನಗರದಲ್ಲಿ ಮನೆಗಳು, ಅಂಗಡಿಗಳು ಜಲಾವೃತಗೊಂಡಿವೆ. ಕುಟುಂಬಸ್ಥರು ರಾತ್ರಿ ಜಾಗರಣೆ ಮಾಡುವಂತೆ ಆಗಿತ್ತು.

ಮನೆಗಳಲ್ಲಿರುವ ಪಡಿತರ, ಇನ್ನಿತರ ವಸ್ತುಗಳು ಮಳೆ ನೀರಿಗೆ ಹಾಳಾಗಿದ್ದು, ಜನ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅಲ್ಲದೆ, ಬೈಕ್ ಗಳು ನೀರಲ್ಲಿ‌ ಮುಳುಗಿವೆ. ಮನೆಗಳಿಂದ ನೀರು ಹೊರ ಹಾಕಲು ಹರಸಾಹಸ ಪಡುವಂತಾಗಿದೆ. ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹ ಸ್ಥಳಗಳಿಗೆ ಭೇಟಿ ಕೊಟ್ಟು ನೀರು ಹೊರ ಹಾಕುವಲ್ಲಿ ನೆರವಾಗಿದ್ದಾರೆ.

ದೇವಸ್ಥಾನ ಜಲಾವೃತ: ವಿಜಯಪುರ ನಗರ ಮಾತ್ರವಲ್ಲದೇ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ನಾಲತವಾಡ, ತಿಕೋಟಾ, ನಿಡಗುಂದಿ ಸೇರಿ ಜಿಲ್ಲೆಯ ವಿವಿಧ ಭಾಗಗಳಲ್ಲೂ ಧಾರಾಕಾರ ಮಳೆ ಸುರಿದಿದೆ. ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ಹಳ್ಳ ಭರ್ತಿಯಾಗಿದೆ.

Advertisement

ಈ ಹಳ್ಳದ ನೀರಿನಿಂದ ಸಂಗಮನಾಥ ದೇವಸ್ಥಾನ ಜಲಾವೃತವಾಗಿದೆ. ಸಂಗಮನಾಥನ ಗರ್ಭಗುಡಿಗೆ ಹಳ್ಳದ ನೀರು ಹೊಕ್ಕಿದ್ದು, ಐದಾರು ಅಡಿ ಎತ್ತರ ನೀರು ನಿಂತಿದೆ. ಇದರಿಂದ ಪೂಜಾ, ಕೈಂಕರ್ಯ ಸ್ಥಗಿತಗೊಂಡಿವೆ. ಅಲ್ಲದೇ, ಸಂಗಮನಾಥ ದೇವಸ್ಥಾನದ ಬಳಿಯ ರಸ್ತೆ ಜಲಾವೃತಗೊಂಡಿದೆ.

ರೈತಾಪಿ ಜನರಿಗೆ ಸಂತಸ: ಈ ತಿಂಗಳ ಆರಂಭದಿಂದಲೂ ಮಳೆ ಕೈ ಕೊಟ್ಟಿತ್ತು. ಇದರಿಂದ ತೊಗರಿ, ಇತರ ಬೆಳೆಗಳ ರೈತರು ಮಳೆಗಾಗಿ ಮೋಡ ನೋಡುವಂತೆ ಆಗಿತ್ತು. ಕೆಲ ಕಡೆ ಮಳೆಗಾಗಿ ಪೂಜೆ ಮಾಡಿ ಪ್ರಾರ್ಥಿಸಲಾಗಿತ್ತು. ಸೋಮವಾರ ಒಂದೇ ರಾತ್ರಿ ಉತ್ತಮ ಮಳೆಯಾದ ಕಾರಣ ರೈತಾಪಿ ಜನರಿಗೆ ಸಂತಸ ತಂದಿದೆ. ಜತೆಗೆ ಹಿಂಗಾರು ಬಿತ್ತನೆಗೆ ಈ ಮಳೆಯಿಂದ ಅನುಕೂಲವಾಗಲಿದೆ.

ಎಲ್ಲೆಲ್ಲಿ ಎಷ್ಟು ಮಳೆ: ಜಿಲ್ಲೆಯ ಹಲವೆಡೆ ಮಳೆ ಆರ್ಭಟಿಸಿದೆ. ರಾತ್ರಿ 8ರಿಂದ 11, 12 ಗಂಟೆಯವರೆಗೂ ನಿಡಗುಂದಿ ತಾಲೂಕಿನ ಇಟಗಿ ಹೋಬಳಿಯಲ್ಲಿ 77 ಎಂಎಂ, ಆಲಮಟ್ಟಿಯಲ್ಲಿ 67 ಎಂಎಂ, ತಿಕೋಟಾ ತಾಲೂಕಿನ ಸಿದ್ದಾಪುರದಲ್ಲಿ 75 ಎಂಎಂ, ಘೋನಸಗಿಯಲ್ಲಿ 68 ಎಂಎಂ, ಬಸವನಬಾಗೇವಾಡಿ ತಾಲೂಕಿನ ದಿಂಡವಾರದಲ್ಲಿ 78 ಎಂಎಂ, ನರಸಲಗಿಯಲ್ಲಿ 69.5 ಎಂಎಂ, ಮುದ್ದೇಬಿಹಾಳ ತಾಲೂಕಿನ ಬಸರಕೋಡದಲ್ಲಿ 64.5 ಎಂಎಂ, ಮುದ್ದೇಬಿಹಾಳ ಹೋಬಳಿಯಲ್ಲಿ 77 ಎಂಎಂ ಮಳೆ ದಾಖಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಕೇಂದ್ರ ಮಾಹಿತಿ ನೀಡಿದೆ.

ಇದನ್ನೂ ಓದಿ: Aranthodu : ಸ್ಕೂಟಿ- ಕಂಟೈನರ್ ನಡುವೆ ಭೀಕರ ಅಪಘಾತ… ಸ್ಕೂಟಿ ಸವಾರ ಗಂಭೀರ

Advertisement

Udayavani is now on Telegram. Click here to join our channel and stay updated with the latest news.

Next