ಮಂಗಳೂರು: ಜಿಲ್ಲೆಯಲ್ಲಿ ಕೋವಿಡ್ -19 ಸೋಂಕು ಹರಡುವುದನ್ನು ತಡೆಗಟ್ಟಲು ಒಂದು ವಾರದ ಲಾಕ್ ಡೌನ್ ವಿಧಿಸಿದ್ದರೂ ಇಂದು ಭಾನುವಾರದ ಲಾಕ್ ಡೌನ್ ಅನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಹೀಗಾಗಿ ಇಂದು ಮುಂಜಾನೆಯಿಂದಲೇ ಜಿಲ್ಲೆ ಬಹುತೇಕ ಸ್ಥಬ್ದವಾಗಿದೆ.
ಹಾಲು, ಮೆಡಿಕಲ್, ತುರ್ತು ಸೇವಾ ಕೇಂದ್ರಗಳಿಗಷ್ಟೇ ವಿನಾಯತಿ ನೀಡಲಾಗಿದೆ. ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಮಾರುಕಟ್ಟೆ ಪ್ರದೇಶಗಳು ಜನರು ವ್ಯಾಪಾರಿಗಳಿಲ್ಲದೆ ಬಿಕೋ ಎನ್ನುತ್ತಿವೆ.
ಲಾಕ್ ಡೌನ್ ಇದ್ದರೂ ಬೆಳಿಗ್ಗೆ ತರಕಾರಿ ಸೇರಿದಂತೆ ಅಗತ್ಯ ಸಾಮಗ್ರಿ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ ಇಂದು ಅದಕ್ಕೆ ಅನುಮತಿ ನೀಡಲಾಗಿಲ್ಲ. ಬೆಳಿಗ್ಗೆ 11ರ ವರೆಗೆ ಹಾಲು ಖರೀದಿಗೆ ಅವಕಾಶ ನೀಡಲಾಗಿದೆ.
ಮಂಗಳೂರು ನಗರ ಪ್ರವೇಶಿಸಲು ನಿರ್ಬಂಧ ವಿಧಿಸಲಾಗಿದ್ದು, ನಗರದ ಹಲವೆಡೆ ನಾಕಾಬಂಧಿ ಮಾಡಿ ಬಂದೋಬಸ್ತು ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡದ್-19 ಸೋಂಕಿತರ ಸಂಖ್ಯೆ ತೀವ್ರ ಗತಿಯಲ್ಲಿ ಏರಿಕೆ ಕಾಣುತ್ತಿದೆ. ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 3306ಕ್ಕೆ ಏರಿಕೆಯಾಗಿದೆ. ಸದ್ಯ ಜಿಲ್ಲೆಯಲ್ಲಿ 2183 ಸಕ್ರಿಯ ಪ್ರಕರಣಗಳಿವೆ.