ಬೆಂಗಳೂರು: ಸದಾ ಹವಾನಿಯಂತ್ರಿತ ಕಾರುಗಳಲ್ಲೇ ಓಡಾಡುವವರು ಅಲ್ಲಿ ಎಲೆಕ್ಟ್ರಿಕ್ ಆಟೋ, ಬೈಸಿಕಲ್, ಬಸ್‌ಗಳಲ್ಲಿ ಬಂದಿಳಿದರು. ನಂತರ ಅಲ್ಲಿಯೇ ಇದ್ದ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಏರಿ ಒಂದು ಸುತ್ತು ಹಾಕಿದರು. ಈ ಮೂಲಕ ಅಲ್ಲಿದ್ದವರು ಹುಬ್ಬೇರಿಸುವಂತೆ ಮಾಡಿದರು.
ಈ ಅಪರೂಪದ ದೃಶ್ಯಗಳಿಗೆ ಕಬ್ಬನ್ ಉದ್ಯಾನ ಭಾನುವಾರ ಸಾಕ್ಷಿಯಾಯಿತು. ಇದು ವಿರಳ ಸಂಚಾರ ದಿನದ ಎಫೆಕ್ಟ್! ಸಾರಿಗೆ ಇಲಾಖೆ, ಬಿಎಂಟಿಸಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಕಬ್ಬನ್ ಉದ್ಯಾನದ ಬ್ಯಾಂಡ್ ಸ್ಟ್ಯಾಂಡ್‌ನಲ್ಲಿ “ವಿರಳ ಸಂಚಾರ ದಿನ’ ಹಮ್ಮಿಕೊಂಡಿತ್ತು.
ಇದಕ್ಕೆ ಸ್ವತಃ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಎಲೆಕ್ಟ್ರಿಕ್ ಆಟೋದಲ್ಲಿ ಆಗಮಿಸಿ ಗಮನಸೆಳೆದರು.
ಬೆನ್ನಲ್ಲೇ ಸಾರಿಗೆ ಇಲಾಖೆ ಆಯುಕ್ತ ಬಿ. ದಯಾನಂದ ಬೈಸಿಕಲ್‌ನಲ್ಲಿ ಬಂದು ಅಚ್ಚರಿ ಮೂಡಿಸಿದರು. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಬಿಎಂಟಿಸಿ ಹಾಗೂ ಸಾರಿಗೆ ಇಲಾಖೆ ಆಧಿಕಾರಿಗಳು ಸರ್ಕಾರಿ ವಾಹನದ ಬದಲು ಬಿಎಂಟಿಸಿ ಬಸ್‌ಗಳಲ್ಲಿ ಬಂದರು. ಅಷ್ಟೇ ಅಲ್ಲ, ಅಲ್ಲಿಯೇ ಇದ್ದ ಎಲೆಕ್ಟ್ರಿಕ್ ಆಟೋ ಹಾಗೂ ದ್ವಿಚಕ್ರವಾಹನ ಚಲಾಯಿಸಿ ಹೊಸ ಅನುಭವ ಪಡೆದುಕೊಂಡರು.
ಬಿಗ್‌ಬಾಸ್ ಖ್ಯಾತಿಯ ನಟ ಪ್ರಥಮ ವಿರಳ ಸಂಚಾರ ದಿನ ಬೆಂಬಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಕಿರುತೆರೆ ನಟ ರಘುರಾಮಪ್ಪ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್, ಬಿಎಂಟಿಸಿ ಅಧ್ಯಕ್ಷ ಎಂ. ನಾಗರಾಜು (ಯಾದವ್) ಮತ್ತಿತರರು ಉಪಸ್ಥಿತರಿದ್ದರು.
ಬಸ್ ಏರಿದ ಅಧಿಕಾರಿಗಳು: ಕಳೆದ ತಿಂಗಳು ನಡೆದ ವಿರಳ ಸಂಚಾರ ದಿನಾಚರಣೆಯಲ್ಲಿ ಅಧಿಕಾರಿಗಳು ಸರ್ಕಾರಿ ಕಾರುಗಳಲ್ಲಿ ಬಂದಿಳಿದಿದ್ದರು. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ನಂತರ ಸಾರಿಗೆ ಸಚಿವರು, ವಿರಳ ಸಂಚಾರ ದಿನದಂದು ಸಮೂಹ ಸಾರಿಗೆ ಬಳಸುವುದನ್ನು ಕಡ್ಡಾಯಗೊಳಿಸಿದ್ದರು. ಇದರ ಪ್ರತಿಫಲವಾಗಿ ಭಾನುವಾರ ಅಧಿಕಾರಿಗಳು ಬಸ್ ಏರಿದರು.