ಹೊಸದಿಲ್ಲಿ: ಉತ್ತರ ಅಮೆರಿಕದ ಕೆನಡಾ ಮತ್ತಿತರ ಕಡೆಗಳಲ್ಲಿ ಇತ್ತೀಚೆಗೆ ಎದ್ದಿದ್ದ ಉಷ್ಣಹವೆ ಉಂಟು ಮಾಡಿದ ಅನಾಹುತಗಳು ಮಾಸುವ ಮುನ್ನವೇ ಇಡೀ ಭೂಮಿಯು ಮಂಗಳವಾರ- ಬುಧವಾರ ದಂದು ಸೂರ್ಯನ ಅತ್ಯುಷ್ಣ ತರಂಗಗಳಿಗೆ ತುತ್ತಾಗುವ ಆತಂಕ ಆವರಿಸಿದೆ.
“ಕೊರೊನಲ್ ಮಾಸ್ ಎಜೆಕ್ಷನ್’ (ಸಿಎಂಇ) ಎಂದು ಕರೆಯಲ್ಪಡುವ ಇವು, ಸೂರ್ಯನ ಅಂತರ್ಯದಿಂದ ಬಿಲಿಯನ್ ಟನ್‌ಗಟ್ಟಲೆ ಪ್ಲಾಸ್ಮಾವನ್ನು ಹೊತ್ತು ತಂದು ಸೌರಮಂಡಲದಲ್ಲಿರುವ ಗ್ರಹಗಳ ಮೇಲೆ ಚೆಲ್ಲುತ್ತಾ ಸಾಗುತ್ತವೆ. ಈ ಪ್ರಕ್ರಿಯೆಗೆ “ಜಿಯೋಮೆಟ್ರಿಕ್ ಸ್ಟಾರ್ಮ್’ (ಸೌರ ಮಾರು ತ) ಎಂಬ ಹೆಸರಿದೆ.
ಭೂಮಿಯ ಮೇಲೆ ಪರಿಣಾಮವೇನು?: ಸೂರ್ಯಮಂಡಲದ ಮಧ್ಯರೇಖೆಯಲ್ಲಿ ಉಂಟಾಗಿರುವ ರಂಧ್ರಗಳಿಂದ ಹೊರಹೊಮ್ಮುವ ಈ ಉಷ್ಣ ತರಂಗಗಳು ತೀವ್ರ ಶಕ್ತಿಯನ್ನು ಹೊಂದಿದ್ದು, ಇವು ಭೂಮಿಯ ಅಯಸ್ಕಾಂತೀಯ (ಗುರುತ್ವಾಕರ್ಷಣ) ತರಂಗಗಳಿಗೆ ಸೋಕಿದಾಗ ಸೂರ್ಯನ ಉಷ್ಣ ತರಂಗಗಳ ಶಕ್ತಿ ಅಗಾಧವಾಗಿ ಹೆಚ್ಚಾಗುತ್ತವೆ. ಮಂಗಳವಾರ- ಬುಧವಾರ ಆವರಿಸಲಿರುವ ಸೂರ್ಯನ ಉಷ್ಣ ತರಂಗಗಳಿಂದಾಗಿ, ಬಾಹ್ಯಾಕಾಶದಲ್ಲಿರುವ ವಿವಿಧ ದೇಶಗಳ ಉಪಗ್ರಹಗಳು ಹಾನಿಗೀಡಾಗಬಹುದು. ಅದರಿಂದ, ಭೂಮಿಯಲ್ಲಿನ “ಡೈರೆಕ್ಟ್-ಟು-ಹೋಂ’ ಮಾದರಿಯ ಟೆಲಿವಿಷನ್ ಸೇವೆಗಳು, ಮೊಬೈಲ್ ಸೇವೆಗಳು, ಜಿಪಿಎಸ್ ಸೇವೆಗಳು ಹಾಗೂ ಇನ್ನಿತರ ಉಪಗ್ರಹ ಆಧಾರಿತ ಸೇವೆಗಳಲ್ಲಿ ವ್ಯತ್ಯಯ ಉಂಟಾಗಬಹುದು.
ಮಂಗಳ, ಶುಕ್ರ, ಚಂದ್ರರ ಸಮಾಗಮ!
ಮಂಗಳ, ಶುಕ್ರ ಗ್ರಹಗಳು ಹಾಗೂ ಚಂದ್ರರು, ತಮ್ಮ ಪರಿಭ್ರಮಣೆಯ ವೇಳೆ, ಪರಸ್ಪರ ಹತ್ತಿರಕ್ಕೆ ಬಂದು ಒಂದೇ ಸರಳರೇಖೆಯಲ್ಲಿ ನಿಲ್ಲುವ ಅಪರೂಪದ ವಿದ್ಯಮಾನವೊಂದು ಇದೇ ಮಂಗಳವಾರ- ಬುಧವಾರ ಗೋಚರಿಸಲಿದೆ. ಈ ದೃಶ್ಯವನ್ನು ಬರಿಗಣ್ಣಿಂದ ನೋಡಬಹುದು ಎಂದು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆ್ಯಸ್ಟ್ರೋಫಿಸಿಕ್ಸ್ ಸಂಸ್ಥೆಯ ವಿಜ್ಞಾನಿಗಳು ತಿಳಿಸಿದ್ದಾರೆ.