ಒರಿಸ್ಸಾದ ಕೊನಾರ್ಕ ಸೂರ್ಯ ದೇಗುಲ ವಿಶ್ವಖ್ಯಾತಿ. ಜಗತ್ತಿನ ಏಕೈಕ ಸೂರ್ಯ ದೇಗುಲ ಅಂತಲೇ ಅದನ್ನು ಕರೆಯಲಾಗುತ್ತದೆ. ನಿಮಗೆ ಗೊತ್ತೇ? ಸೂರ್ಯನಿಗೆ ಇನ್ನೊಂದು ದೇಗುಲವಿದೆ. ಅದಿರುವುದು ನಮ್ಮ ಕರುನಾಡಿನ, ಕಾವೇರಿ ನದಿಯ ತಟದಲ್ಲಿ…
ಸೂರ್ಯದೇವನ ಆ ಕತೆ ಬಲು ಜನಪ್ರಿಯ. ಸೂರ್ಯನು ಛಾಯಾದೇವಿಯನ್ನು ಮದುವೆಯಾಗಿ, ಯಮ ಮತ್ತು ಶನಿಯ ಜನನಕ್ಕೆ ಕಾರಣನಾಗುತ್ತಾನೆ. ಶುಕ್ರಾಚಾರ್ಯರ ಪುತ್ರಿ ಸಂಜ್ಞಾದೇವಿಯ ಜೊತೆ 2ನೇ ಮದುವೆಯಾಗುತ್ತಾನೆ. ಇವರಿಗೆ ವೈವಸುತ ಎಂಬ ಮಗ, ಯಮುನೆ ಎಂಬ ಪುತ್ರಿ ಜನಿಸುತ್ತಾರೆ. ಯಮುನೆ ಪ್ರಾಪ್ತ ವಯಸ್ಸಿಗೆ ಬಂದಾಗ, ಜಗದೇಕ ಸುಂದರಿಯಾಗಿ ಖ್ಯಾತಿ ಪಡೆಯುತ್ತಾಳೆ. ಈಕೆಯ ಸೌಂದರ್ಯಕ್ಕೆ ಸೂರ್ಯ ದೇವನೇ ಮೋಹಪರವಶನಾಗುತ್ತಾನೆ. ಇದರಿಂದಾಗಿ ಸೂರ್ಯ ತನ್ನ ಸಹಚರ ದೇವತೆಗಳಿಂದಲೇ ಬಹಿಷ್ಕಾರಕ್ಕೆ ಒಳಗಾಗುವನು.
ಸೂರ್ಯನು ತನ್ನ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಪಾಪವನ್ನು ಕಳಕೊಳ್ಳಲು ಶಿವನನ್ನು ಕುರಿತು ತಪಸ್ಸು ಮಾಡಲು ದಂಡಕಾರಣ್ಯ ಸೇರುತ್ತಾನೆ. ನರ್ಮದಾ ನದಿಯಲ್ಲಿ ಸ್ನಾನ ಮಾಡಿ ನದಿಯಿಂದ ಲಿಂಗವೊಂದನ್ನು ತೆಗೆದುಕೊಂಡು ಸಾಧ್ಯವಾದಷ್ಟು ದೂರ ಪ್ರಯಾಣ ಮಾಡುವನು. ಮುಂದೆ ಸಾಗಲಾಗದೆ, ಪ್ರಯಾಣವನ್ನು ಮೊಟಕುಗೊಳಿಸಿ ಲಿಂಗ ಪ್ರತಿಷ್ಠಾಪಿಸುತ್ತಾನೆ. ಹೀಗಾಗಿ, ಸೂರ್ಯ ಪ್ರತಿಷ್ಠಾಪಿಸಿದ ಲಿಂಗ ಅರ್ಕೇಶ್ವರ ಎಂದಾಯಿತಂತೆ. ಇದುವೇ ಮೈಸೂರು ಸನಿಹದ ಎಡತೊರೆಯ ಅರ್ಕೇಶ್ವರ ದೇವಾಲಯ ಎಂಬುದು ಪುರಾಣ ಕತೆ.
ಅರ್ಕೇಶ್ವರ ದೇವಾಲಯದ ಸಮೀಪ 9ನೇ ಶತಮಾನದ ಗಂಗರ ಶಾಸನ ದೊರೆತಿದೆ. ಅಂಗೈಕಾರನ್ ಎಂಬಾತ ಈಶ್ವರ ದೇವಾಲಯಕ್ಕೆ ಭೂಮಿಯನ್ನು ದಾನ ಕೊಟ್ಟ. ನಂತರ 11ನೇ ಶತಮಾನದಲ್ಲಿ ರಾಜೇಂದ್ರ ಚೋಳ ಈ ಪ್ರದೇಶವನ್ನು ವಶಪಡಿಸಿಕೊಂಡನು. ಈ ಕಾಲದಲ್ಲಿ ಮೀನಾಕ್ಷಿ ಅಮ್ಮನವರ ದೇಗುಲವನ್ನು ನಿರ್ಮಿಸಿರಬಹುದೆಂದು ಹೇಳಲಾಗಿದೆ. ದೇವಾಲಯವು ಚೋಳರ ಕಾಲದಲ್ಲಿಯೇ ಬಹುತೇಕ ನಿರ್ಮಾಣವಾಗಿದೆ ಎನ್ನಲಾಗಿದೆ. ಮೈಸೂರು ಅರಸರ ಕಾಲದಲ್ಲಿ ಪ್ರವೇಶ ದ್ವಾರ ರಾಜಗೋಪುರ ನಿರ್ಮಾಣವಾಗಿದ್ದು, 5 ಅಂತಸ್ತುಗಳ ಗೋಪುರದಲ್ಲಿ ದ್ವಾರಪಾಲಕರ ಗಾರೆಯ ಶಿಲ್ಪಗಳು ಅತ್ಯಾಕರ್ಷಕವಾಗಿವೆ. ಮೇಲ್ಭಾಗದಲ್ಲಿ ಪಂಚಕಲಶ ಹಾಗೂ ಕೊಂಬುಗಳಿವೆ.
ಗರ್ಭಗುಡಿಯಲ್ಲಿ ಅರ್ಕೇಶ್ವರನ ಶಿವಲಿಂಗವಿದೆ. ಒಳಾಂಗಣದ ಸುತ್ತಲೂ 40 ಲಿಂಗಗಳಿದ್ದು, ಮೂಲ ಶೈವಾಗಮದ ರೀತಿಯಲ್ಲಿ ಇಲ್ಲಿ ನಿತ್ಯವೂ ಪೂಜೆ ನಡೆಯುತ್ತಿದೆ. ದೇವಾಲಯದ ಪ್ರಾಕಾರದಲ್ಲಿ ಮೀನಾಕ್ಷಿ ಅಮ್ಮನವರ ಗುಡಿ ಇದ್ದು, ದೇವಾಲಯದ ಮುಂದೆ ಮಂಟಪ, ಗರುಡಗಂಭವಿದೆ. ಪ್ರತಿವರ್ಷ ಶಿವರಾತ್ರಿಯಂದು ಬೆಳಗ್ಗೆ ಸೂರ್ಯನ ಕಿರಣಗಳು ಗರ್ಭಗುಡಿಯ ಅರ್ಕೇಶ್ವರ ಲಿಂಗದ ಮೇಲೆ ಬೀಳುವುದನ್ನು ಕಾಣಲು ಜನರು ಆಗಮಿಸುವರು. ರಥಸಪ್ತಮಿಯಂದು ರಥೋತ್ಸವವು ವಿಜೃಂಭಣೆಯಿಂದ ಜರುಗುವುದು.
ದರುಶನಕೆ ದಾರಿ…: ಎಡತೊರೆಯು ಮೈಸೂರು- ಹಾಸನ ರಾಜ್ಯ ಹೆದ್ದಾರಿಯ ಲ್ಲಿದ್ದು, ಕೃಷ್ಣರಾಜನಗರದಿಂದ 3 ಕಿ.ಮೀ ದೂರದಲ್ಲಿದೆ. ಬಸ್ ಹಾಗೂ ಆಟೋ ಸೌಲಭ್ಯಗಳಿವೆ.
* ಸಿದ್ದೇಶ್ ಸಣ್ಣಗಿರಿ