Advertisement

ಸೂರ್ಯ ಶಿಕಾರಿ: ಕರೆಂಟ್‌ ಬೇಕೆನ್ರೀ ಕರೆಂಟ್‌?

03:10 PM Jan 15, 2018 | |

ಸೋಲಾರ್‌ ಪ್ಯಾನಲ್‌ಗ‌ಳಿಂದ ವಿದ್ಯುತ್‌ ಉತ್ಪಾದಿಸಿ, ಅದನ್ನು ಸರ್ಕಾರಕ್ಕೇ ಮಾರಿ ಲಾಭಗಳಿಸಿರುವ ಉದ್ಯಮಿ ಹಾಗೂ ಉದ್ಯಮವೊಂದರ ಯಶೋಗಾಥೆಯಿದು. ಕೇವಲ 3 ಮಂದಿ ನೌಕರರಿಂದ ಆರಂಭವಾದ ಈ ಉದ್ಯಮ ಈಗ 102 ಮಂದಿಗೆ ಬದುಕು ನೀಡಿದೆ ಅಂದರೆ, ಆ ಯಶಸ್ಸಿನ ಕಥೆ ಹೇಗಿರಬಹುದೋ ಅಂದಾಜು ಮಾಡಿಕೊಳ್ಳಿ. 

Advertisement

ಉದ್ಯಮಗಳ ಕೇಂದ್ರೀಕರಣದಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಮನಗಂಡು ಅದಕ್ಕೆ ಪರಿಹಾರ ಕಾಣಲು ಹಲವು ಬಿಡಿ ಚಿತ್ರಣಗಳ ಕೊಲಾಜ್‌ ಮಾಡುವ ಮೂಲಕವೇ ನಾವು ಒಂದು ವ್ಯಾಖ್ಯಾನವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಬೇಕಾದ ಪರಿಸ್ಥಿತಿಯಿದೆ. ಮಲೆನಾಡಿಗೆ, ಮುಖ್ಯವಾಗಿ ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ, ಸಾಗರಗಳತ್ತ ನಾವು ಕಾಲಿರಿಸಿದರೆ ಇಲ್ಲಿ ನೀರಿದೆ, ಬೆಳಕಿದೆ, ಸ್ಥಳಾವಕಾಶವಿದೆ. ಸಂಪರ್ಕ ಹಾಗೂ ಇತರ ಸೌಕರ್ಯಗಳೂ ತಕ್ಕಮಟ್ಟಿಗೆ ಇವೆ. ಆದರೆ, ದೀಪದ ಕೆಳಗೆ ಕತ್ತಲಿದೆ. ಅಂದರೆ, ಏನೆಲ್ಲಾ ಸೌಲಭ್ಯಗಳು ಇದ್ದರೂ, ಈ ಭಾಗದಲ್ಲಿ ಉದ್ಯಮಗಳು ಹುಟ್ಟುತ್ತಿಲ್ಲ, ಬೆಳೆಯುತ್ತಿಲ್ಲ. ರಾಜ್ಯಕ್ಕೆ ಅತಿ ಕಡಿಮೆ ದರದಲ್ಲಿ ಜಲವಿದ್ಯುತ್‌ನ್ನು ಉತ್ಪತ್ತಿ ಮಾಡಿಕೊಡುತ್ತಿದ್ದರೂ ಇಲ್ಲಿನ ಎಲ್ಲ ಗ್ರಾಮೀಣ ಉದ್ಯಮಗಳು ವಿದ್ಯುತ್‌ ಕೊರತೆಯ ಕಾರಣ, ನಿರಂತರ ಲೋಡ್‌ ಶೆಡ್ಡಿಂಗ್‌ನಿಂದ ಉದ್ಯಮದ ಶಟರ್‌ ಎಳೆದು ಕೂರುವಂತಾಗಿದೆ. ಹೊಸ ಉದ್ಯಮ ಸ್ಥಾಪಿಸುವ ಉತ್ಸಾಹವನ್ನು ಯಾರೂ ತೋರುತ್ತಿಲ್ಲ.

ಸೂರ್ಯ, ಮಲೆನಾಡಿಗೂ ಶಕ್ತಿ!
ತೀರಾ ಮಳೆಗಾಲದ ಒಂದು-ಒಂದೂವರೆ ತಿಂಗಳನ್ನು ಹೊರತುಪಡಿಸಿದರೆ, ಮಲೆನಾಡು ಕೂಡ ಪ್ರಖರ ಬಿಸಿಲಿನ ಹೊಡೆತವನ್ನು ಎದುರಿಸುತ್ತದೆ. ಸೋಲಾರ್‌ ವಿದ್ಯುತ್‌ ಉತ್ಪತ್ತಿಯ ವಿಚಾರ ಬಂದರೆ ಈ ಬಿಸಿಲೂ ತಂಪು! ಭಾರತ ತನ್ನ ದೇಶದಲ್ಲಿ ಅಪಾರವಾಗಿ ಸಿಕ್ಕುವ ಸೋಲಾರ್‌ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ. ಕಳೆದ ವರ್ಷ ನ್ಯಾಷನಲ್‌ ಗ್ರಿಡ್‌ಗೆ ಸೇರ್ಪಡೆಯಾದ ಶೇ. 39ರಷ್ಟು ವಿದ್ಯುತ್‌, ಸೋಲಾರ್‌ ಶಕ್ತಿ ಮೂಲದ್ದು. 14,700 ಮೆಗಾ ವ್ಯಾಟ್‌ ವಿದ್ಯುತ್‌ ವಾರ್ಷಿಕವಾಗಿ ಸೋಲಾರ್‌ ಪರಿವರ್ತನೆಯಲ್ಲಿ ಲಭ್ಯವಾಗುತ್ತದೆ. ವರ್ಷದ 300 ದಿನ ಸೋಲಾರ್‌ ವಿದ್ಯುತ್‌ ಉತ್ಪತ್ತಿ ಸಾಧ್ಯ. ರೇಡಿಯೇಷನ್‌, ಪರಿಸರ ನಾಶ, ಬೂದಿ, ವಿಷ ಗಾಳಿಗಳ ಅಪಾಯವಿಲ್ಲದ ಸೋಲಾರ್‌ ಬಳಕೆಗೆ ಸರ್ಕಾರಗಳು ಕೂಡ ಪ್ರೋತ್ಸಾಹ ನೀಡಬೇಕಾಗಿದೆ. ಎಲ್‌ಇಡಿ ಬಲ್ಬ್, ಟ್ಯೂಬ್‌ಲೈಟ್‌ ನೀಡುವ ಯೋಜನೆ ಈ ನಿಟ್ಟಿನಲ್ಲಿ ಒಳ್ಳೆಯ ಬೆಳವಣಿಗೆ. 

ಆದರೆ ಸೋಲಾರ್‌ ವಿದ್ಯುತ್‌ ಉತ್ಪಾದನೆ ಹಗಲು ವೇಳೆಯಲ್ಲಿ ಮಾತ್ರ ಸಾಧ್ಯ. ಇದನ್ನು ಸಂಗ್ರಹಿಸಿಡುವ ವ್ಯವಸ್ಥೆ ತೀರಾ ದುಬಾರಿ. ಸದ್ಯಕ್ಕಂತೂ ಅಸಂಭವನೀಯ. ಈ ಹಿನ್ನೆಲೆಯಲ್ಲಿ ಜಿಎಂಆರ್‌, ಜಿವಿಕೆ, ರಿಲಯನ್ಸ್‌ ಪವರ್ ತರಹದ ಖಾಸಗಿ ವಿದ್ಯುತ್‌ ಉತ್ಪಾದಕರ ಕಲ್ಲಿದ್ದಲು ಆಧಾರಿತ ವಿದ್ಯುತ್‌ ಉತ್ಪಾದನಾ ಘಟಕಗಳ ಸ್ಥಾಪನೆಗೆ ಮುಂದಾಗಿದ್ದಾರೆ. ಈ ನಡುವೆ ಸೋಲಾರ್‌ಗೆ ನೀಡುವ ಪ್ರೋತ್ಸಾಹ, ವಿದ್ಯುತ್‌ ಸಮಸ್ಯೆಯನ್ನು ಪ್ರಭಾವಯುತವಾಗಿ ಕಡಿಮೆ ಮಾಡುವುದಂತೂ ನಿಶ್ಚಿತ. 

ಸಮಸ್ಯೆಯ ಪಕ್ಕದಲ್ಲೇ ಚಿಕಿತ್ಸೆ!
ಸಮಸ್ಯೆಗಳು ಇಲ್ಲದೆ ಉದ್ಯಮ ಆರಂಭಿಸುವುದು ಅಸಂಭವ. ಇಲ್ಲಿನ ಸಮಸ್ಯೆಗಳಿಗೆ ಸ್ವಂತ ನೆಲೆಯಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ.  ಸಾಗರ ತಾಲ್ಲೂಕಿನ ಬಂದಗದ್ದೆಯಂಥ ಪುಟ್ಟ ಹಳ್ಳಿಯಲ್ಲಿ 25 ವರ್ಷಗಳ ಹಿಂದೆ ಗೃಹ ಬಳಕೆ ವಸ್ತುಗಳ ತಯಾರಿಯ ಉದ್ಯಮ ಆರಂಭಿಸಿದ ಉಮೇಶ್‌ ಬಂದಗದ್ದೆಯವರಿಗೆ ವಿದ್ಯುತ್‌ ಲೋಡ್‌ ಶೆಡ್ಡಿಂಗ್‌ ದೊಡ್ಡ ಸವಾಲಾಗಿತ್ತು. ಕಾರ್ಮಿಕರನ್ನು ತೊಡಗಿಸಿಕೊಂಡರೂ ವಿದ್ಯುತ್‌ ಇಲ್ಲದೆ ಯಂತ್ರಗಳು ಕಾರ್ಯಾಚರಣೆ ನಡೆಸುವಂತಿರಲಿಲ್ಲ. ಪ್ರತಿ ತಿಂಗಳಿಗೆ 8 ಲಕ್ಷ ರೂ.ಗಳಷ್ಟು ಮೊತ್ತವನ್ನು ಕಾರ್ಮಿಕರ ವೇತನಕ್ಕಾಗಿಯೇ ವೆಚ್ಚ ಮಾಡಬೇಕಾದ ಪರಿಸ್ಥಿತಿಯಲ್ಲಿ ಕಾರ್ಮಿಕರ ದುಡಿಮೆಯ ಅವಧಿಯ ಪ್ರತಿ ನಿಮಿಷವೂ ಅಮೂಲ್ಯವೇ. ಆಗ ಸೋಲಾರ್‌ ಉಮೇಶ್‌ರಿಗೆ ಒಂದು ಪರಿಹಾರವಾಗಿ ಕಾಣಿಸಿತ್ತು.

Advertisement

ಅದಕ್ಕೂ ಒಂದು ಫ್ಲಾಶ್‌ಬ್ಯಾಕ್‌ ಇದೆ. ಅವರ ಮನೆಯ ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್‌ ಸರಬರಾಜು ಕಂಪನಿಯ ವಿದ್ಯುತ್‌ ಕಣ್ಣಾಮುಚ್ಚಾಲೆಯ ಕಾರಣ ಸಮಯಕ್ಕೆ ಸರಿಯಾಗಿ ನೀರು ಬಿಡಲಾಗುತ್ತಲೇ ಇರಲಿಲ್ಲ. ಕಳೆದ ವರ್ಷ ಸುಮಾರು ಆರು ಲಕ್ಷ ರೂ. ವೆಚ್ಚದಲ್ಲಿ ಪಂಪ್‌ಸೆಟ್‌ ಚಾಲನೆ ಮಾಡಲು ಸೋಲಾರ್‌ ವ್ಯವಸ್ಥೆಯನ್ನು ರೂಪಿಸಿದರು. ದಿನದ ಯಾವುದೇ ಸಮಯದಲ್ಲಿ ಪಂಪ್‌ ಚಾಲಿಸಬಹುದು! ಅದರ ಯಶಸ್ಸು ತಮ್ಮ ಫ್ಯಾಕ್ಟರಿಯನ್ನು ಸಂಪೂರ್ಣ ಸೋಲಾರೀಕರಣಗೊಳಿಸಲು ಸ್ಫೂರ್ತಿದಾಯಕವಾಯಿತು. ಅವರೀಗ 54 ಲಕ್ಷ ರೂ. ವೆಚ್ಚದಲ್ಲಿ ತಮ್ಮ ಮಥನ ಇಂಡಸ್ಟ್ರೀಸ್‌ನ ಕೈಗಾರಿಕಾ ಘಟಕದ ಮೇಲ್ಛಾವಣಿಯ ಮೇಲೆ ಸೌರ ವಿದ್ಯುತ್‌ ಪ್ಯಾನೆಲ್‌ಗ‌ಳನ್ನು ಅಳವಡಿಸಿದ್ದಾರೆ. ದಿನಕ್ಕೆ ಸರಿಸುಮಾರು 450 ಯೂನಿಟ್‌ ವಿದ್ಯುತ್‌ ಉತ್ಪತ್ತಿ ಮಾಡುವ ಸಾಮರ್ಥ್ಯ ಈ ಘಟಕಕ್ಕಿದೆ. ಸರಾಸರಿ 320 ಯೂನಿಟ್‌ ವಿದ್ಯುತ್‌ ಉತ್ಪಾದನೆಯಂತೂ ಖಚಿತ. ತಮಗೆ ಬೇಕಾದಷ್ಟು ವಿದ್ಯುತ್‌ ಬಳಸಿ ಹೆಚ್ಚುವರಿ ವಿದ್ಯುತ್‌ನ್ನು ಮೆಸ್ಕಾಂನ ವಿದ್ಯುತ್‌ ಸರಬರಾಜು ಗ್ರಿಡ್‌ಗೆ ಕೊಡುತ್ತಿದ್ದಾರೆ. 

ಬಡ್ಡಿಗೆ ಸಾಲ ತಂದಾದರೂ ಸೋಲಾರ್‌!
ಮೆಟ್ರೋ ಹೊರತಾದ ನಗರ, ಗ್ರಾಮೀಣ ಪ್ರದೇಶಗಳಲ್ಲಿ ಅಕ್ಕಿ ಮಿಲ್‌ಗ‌ಳು, ಕ್ರಶರ್‌ ಉದ್ಯಮಗಳು ಸೇರಿದಂತೆ ವಿವಿಧ ಉದ್ಯಮಗಳಿವೆ. ಈಗಿನ ಕರ್ನಾಟಕ ವಿದ್ಯುತ್‌ ಸರಬರಾಜು ನಿಯಂತ್ರಣ ಪ್ರಾಧಿಕಾರ ಕೆಇಆರ್‌ಸಿ ಪ್ರಕಾರ ಸುಮಾರು 7ರೂ.ಗಳನ್ನು ಪ್ರತಿ ಯೂನಿಟ್‌ಗೆ ನೀಡಲಾಗುತ್ತದೆ. ಉದ್ಯಮಗಳು ಸಾಲ ಪಡೆದು ಚಾವಣಿಗೆ ಸೋಲಾರ್‌ ಪ್ಯಾನೆಲ್‌ ಅಳವಡಿಸುವುದು ಲಾಭದಾಯಕ! ಒಂದು ವಿಶ್ಲೇಷಣೆಯ ಪ್ರಕಾರ ಮಲೆನಾಡಿನಲ್ಲಿಯೂ ಹಾಕಿದ ಬಂಡವಾಳಕ್ಕೆ ಯೂನಿಟ್‌ ವಿದ್ಯುತ್‌ ಮಾರಾಟದಿಂದ ಶೇ. 14.5ರಷ್ಟು ಬಡ್ಡಿ ಪಡೆಯಲು ಸಾಧ್ಯವಿದೆ. ಈ ಕಾರಣಕ್ಕಾಗಿಯೇ ಸಾಗರ ತಾಲ್ಲೂಕಿನ ಆವಿನಹಳ್ಳಿ ರಸ್ತೆಯ ಕಲ್ಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಪ್ರೀಂ ರೈಸ್‌ ಇಂಡಸ್ಟ್ರೀಸ್‌ ಇಂದು 400 ಕಿ.ವ್ಯಾ. ಸಾಮರ್ಥ್ಯದ ಘಟಕ ಹಾಕಿದ್ದು 1,600 ಯೂನಿಟ್‌ ಉತ್ಪಾದನೆಯ ನಿರೀಕ್ಷೆ ಮಾಡುತ್ತಿದೆ. ಒಂದೇ ಸ್ಥಳದಲ್ಲಿ ಎರಡು ಉದ್ಯಮ ನಡೆಸಿ ಎರಡನ್ನೂ ಲಾಭದಾಯಕವಾಗಿ ನೋಡಿಕೊಳ್ಳಲು ಈ ಸೋಲಾರ್‌ ಘಟಕ ಅವಕಾಶ ಮಾಡಿಕೊಡುತ್ತದೆ.

ಸೋಲಾರ್‌ ವಿದ್ಯುತ್‌ನ ಸಾಧ್ಯತೆಗಳನ್ನು ಬಳಸಿಕೊಳ್ಳದಿರಲು ಎರಡು ಮುಖ್ಯ ಕಾರಣಗಳಿದ್ದವು.  ಸೋಲಾರ್‌ ಪ್ಯಾನೆಲ್‌ಗ‌ಳ ಬೆಲೆ ತುಂಬಾ ದುಬಾರಿಯೇ. ಈ ಹಿನ್ನೆಲೆಯಲ್ಲಿ ಉದ್ಯಮ ಹಾಗೂ ವೈಯುಕ್ತಿಕ ನೆಲೆಯಲ್ಲಿ ಜನ ಹಿಂದೇಟು ಹಾಕಿದ್ದುಂಟು. ಜನರಿಂದ ಬೇಡಿಕೆ ಹೆಚ್ಚಾದಂತೆ ಸೋಲಾರ್‌ ಪ್ಯಾನೆಲ್‌ಗ‌ಳ ಬೆಲೆಯಲ್ಲಿ ಕಿಲೋವ್ಯಾಟ್‌ ಲೆಕ್ಕದಲ್ಲಿ ಗಣನೀಯ ಇಳಿಕೆಯಾಗಿದೆ. ಬಂಡವಾಳದ ಮೇಲಿನ ಬಡ್ಡಿಯ ಲೆಕ್ಕಕ್ಕೆ ಬಿದ್ದರೆ ಈಗ ಸೋಲಾರ್‌ ವಿದ್ಯುತ್‌ ಯೂನಿಟ್‌ನ ಬೆಲೆ ಮೂರು ರೂ.ಗಿಂತ ಕಡಿಮೆಗೆ ಲಭ್ಯವಾಗುತ್ತದೆ. ಅಂದರೆ ಥರ್ಮಲ್‌, ಅಣು ವಿದ್ಯುತ್‌ ಘಟಕದ ವಿದ್ಯುತ್‌ಗಿಂತ ಸೋಲಾರ್‌ ಅಗ್ಗವಾಗುತ್ತಿದೆ.

ಸೋಲಾರ್‌ ವಿದ್ಯುತ್‌ ಹಳ್ಳಿಗಳು
ಈಗಿನ ವಿದ್ಯುತ್‌ ಬೇಡಿಕೆ ಲೆಕ್ಕದಲ್ಲಿ ಸೋಲಾರ್‌ ವಿದ್ಯುತ್‌ ಕೇವಲ ಶೇ. 2ರಷ್ಟು ಬೇಡಿಕೆಯನ್ನು ಮಾತ್ರ ಪೂರೈಸುವಂತಿದೆ. ಮುಂದಿನ ಐದು ವರ್ಷಗಳಲ್ಲಿ ಒಂದು ಲಕ್ಷ ಮೆಗಾವ್ಯಾಟ್‌ನ ಉತ್ಪಾದನೆಯ ಗುರಿ ಮುಟ್ಟಿದರೂ ಶೇ. 7ರಿಂದ 8ರಷ್ಟು ವಿದ್ಯುತ್‌ ಮಾತ್ರ ಈ ಕ್ಷೇತ್ರದಿಂದ ಲಭಿಸಿದಂತಾಗುತ್ತದೆ. 2022ರ ವೇಳೆಗೆ 40 ಗಿಗಾ ವ್ಯಾಟ್‌ ವಿದ್ಯುತ್‌ನ್ನು ಮನೆಗಳ ರೂಫ್ ಟಾಪ್‌ನಿಂದಲೇ ಪಡೆಯಬಹುದು ಎಂಬ ಗುರಿಯನ್ನು ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಉತ್ತೇಜನಕಾರಿ ಯೋಜನೆಗಳನ್ನು ಜಾರಿಗೊಳಿಸಬೇಕು. ಗ್ರಾಮೀಣ ಭಾಗದಲ್ಲಿಯೇ ಉದ್ಯಮ ಆರಂಭಿಸಿ ಅವುಗಳಿಗೆ ಅಲ್ಲಿಯೇ ಉತ್ಪತ್ತಿ ಮಾಡಿ ವಿದ್ಯುತ್‌ ನೀಡುವುದರಿಂದ ಟ್ರಾನ್ಸ್‌ಮಿಷನ್‌ ನಷ್ಟವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಹಗಲು ಸಂದರ್ಭದಲ್ಲಿ ಥರ್ಮಲ್‌, ಜಲ ಅಥವಾ ಅಣು ವಿದ್ಯುತ್‌ ಉತ್ಪಾದನೆಯನ್ನು ತಗ್ಗಿಸುವ ಮೂಲಕ ಕಚ್ಚಾವಸ್ತು ಹಾಗೂ ಪರಿಸರವನ್ನು ಉಳಿಸಬಹುದು. ಇಂಥದೊಂದು ಕನಸಿಗೆ ಗ್ರಾಮೀಣ ಭಾಗದ ಅಲ್ಲಲ್ಲಿ ಪುಟ್ಟ ಪುಟ್ಟ ಉದಾಹರಣೆಗಳು ಸಿಗಲಾರಂಭಿಸಿವೆ. ಅದನ್ನು ಮಾದರಿಯಾಗಿ ಇಟ್ಟುಕೊಂಡು ಸರ್ಕಾರ ಹೆಜ್ಜೆ ಇಡಬೇಕು.

ದೃಷ್ಟಾಂತಗಳು ಬೇಕು ಎನ್ನುವವರು ಚಳಿ ದೇಶವಾಗಿಯೂ ಸೋಲಾರ್‌ ಬಳಸುವ ಜರ್ಮನಿ, ಡೆನ್ಮಾರ್ಕ್‌ಗಳತ್ತ ನೋಡಬೇಕಾಗಿಲ್ಲ. ಭಾರತದ ರಾಜಾಸ್ತಾನದ ಶ್ರೀಗಂಗಾನಗರಕ್ಕೆ ಬಂದಿಳಿದರೂ ಸಾಕು. ಇಲ್ಲಿನ ಜನ ಸಹಕಾರಿ ತತ್ವದಡಿ ಒಂದು ಸಂಘಟನೆಯನ್ನು ಕಟ್ಟಿಕೊಂಡಿದ್ದಾರೆ. ಅದರ ಮೂಲಕ ಇಡೀ ಊರಿನ ಮನೆಗಳ ಮೇಲೆ 20 ಕೆವಿ ರೂಫ್ ಟಾಪ್‌ ಸೋಲಾರ್‌ ಎನರ್ಜಿ ಉತ್ಪಾದನೆ ನಡೆಸಿದ್ದಾರೆ. ಈ ವ್ಯವಸ್ಥೆಗೆ ಅವರು ಮಾಡಿದ ವೆಚ್ಚ 12.65 ಲಕ್ಷ ರೂ. ಪೋ› ಧನವಾಗಿ ಅವರಿಗೆ ಸರ್ಕಾರದಿಂದ 3.79 ಲಕ್ಷ ರೂ. ಮರಳಿ ಸಿಕ್ಕಿದೆ. ಅದಲ್ಲ ಮುಖ್ಯ, ಪ್ರತಿ ವರ್ಷ ಅವರು ಈಗ 33 ಸಾವಿರ ಯೂನಿಟ್‌ ಉತ್ಪಾದಿಸುತ್ತಿದ್ದಾರೆ. ಅದರಲ್ಲಿ 23 ಸಾವಿರ ಯೂನಿಟ್‌ ಅವರ ಊರಿನ ಎಲ್ಲರ ಮನೆ ಬೆಳಕು ಇತ್ಯಾದಿಗೆ ಬಳಕೆಯಾಗಿ 10 ಸಾವಿರ ಯೂನಿಟ್‌ ವಿಕ್ರಯಿಸುತ್ತಾರೆ. ಕರ್ನಾಟಕದ ಸೋಲಾರ್‌ ಯೂನಿಟ್‌ ಬೆಲೆಯ ಲೆಕ್ಕದಲ್ಲಿ ಯೂನಿಟ್‌ಗೆ 7 ರೂ. ಎಂದರೂ ವಾರ್ಷಿಕ 70 ಸಾವಿರ ರೂ.ಗಳ ಆದಾಯ. ನೆನಪಿರಲಿ, ಬಳಕೆಯಾದ ಯೂನಿಟ್‌ಗಳ ಖರ್ಚು ಸುಮಾರು 1.64 ಲಕ್ಷ ರೂ. ಉಳಿಕೆಯಾಗಿರುವ ಮಾಹಿತಿಯನ್ನು ಬದಿಗಿಟ್ಟು ಈ ಲಾಭ ಹೇಳಲಾಗಿದೆ!

ಹಳ್ಳಿ ಉದ್ಯಮದ ಭವಿಷ್ಯ ಕಡೆದ ಮಥನ!
ಮನೆಯ ಹಿಂದಿನ ಶೆಡ್‌ನ‌ಲ್ಲಿ ಮೂರು ಕಾರ್ಮಿಕರ ಬಲದೊಂದಿಗೆ ಆರಂಭವಾದ ಗ್ರಾಮೀಣ ಉದ್ಯಮವೊಂದು ಗ್ರಾಮೀಣ ಜನರ ಅಗತ್ಯಗಳಿಗೆ ತಕ್ಕಂತ ಉಪಕರಣಗಳನ್ನು ತಯಾರಿಸುತ್ತಲೇ 102 ಕಾರ್ಮಿಕರ ಸಹಿತ ವಾರ್ಷಿಕ 8 ಕೋಟಿ ರೂ. ವಹಿವಾಟು ನಡೆಸುವ ಬಿಸಿನೆಸ್‌ ದಾಖಲೆ ಮಾಡಿದ ಸಾಗರ ತಾಲ್ಲೂಕಿನ ಉಮೇಶ್‌ ಬಂದಗದ್ದೆ ಅವರ ಮಥನ ಇಂಡಸ್ಟ್ರೀಸ್‌ ಈಗ ವಿದ್ಯುತ್‌ ಸ್ವಾವಲಂಬನೆಯ ವಿಚಾರದಲ್ಲೂ ಹೊಸ ಹೊಳಹು ನೀಡಿದೆ. ತಾಂತ್ರಿಕವಾಗಿ ಹೇಳುವುದಾದರೆ 750 ಕಿಲೋವ್ಯಾಟ್‌ ಸಾಮರ್ಥ್ಯದ ಸೋಲಾರ್‌ ಪ್ಯಾನೆಲ್‌ಗ‌ಳನ್ನು ತಮ್ಮ ಫ್ಯಾಕ್ಟರಿಯ ಮೇಲ್ಛಾವಣಿಗೆ ಅಳವಡಿಸಿ ದಿನಂಪ್ರತಿ ಸುಮಾರು 450 ಯೂನಿಟ್‌ ವಿದ್ಯುತ್‌ ಉತ್ಪಾದಿಸುವ ಉಮೇಶ್‌ ವಿದ್ಯುತ್‌ ಸಮಸ್ಯೆಗೆ ಪರಿಹಾರವನ್ನಷ್ಟೇ ಅಲ್ಲ, ಮೆಸ್ಕಾಂಗೆ ವಿದ್ಯುತ್‌ ಮಾರಿ ಸಂಪಾದನೆಯನ್ನೂ ಮಾಡುತ್ತಿದ್ದಾರೆ. ಮನೆ ಬಳಕೆಯ ಮಜ್ಜಿಗೆ ಕಡೆಯುವ ಯಂತ್ರದಿಂದ ಆರಂಭಗೊಂಡ ಉದ್ಯಮ ಅಡಿಕೆ ಸುಲಿಯುವ ಯಂತ್ರ, ಅಲ್ಮೆರಾ, ಮೇಜು, ಕುರ್ಚಿ, ನೀರು ಕಾಯಿಸುವ ಆಧುನಿಕ ಒಲೆ…. ಹೀಗೆ ಎಲ್ಲ ವಿಷಯದಲ್ಲೂ ನೆರವಾಗುವ ಮೂಲಕ ಜನರಿಗೆ ಹತ್ತಿರವಾಗಿದೆ. 

25 ವರ್ಷಗಳ ಸಾರ್ಥಕ ಸಾಧನೆಯ ನಂತರವೂ ಉಮೇಶ್‌, ಉದ್ಯಮಗಳು ವಿಕೇಂದ್ರೀಕರಣಗೊಳ್ಳಬೇಕು. ಆ ನಿಟ್ಟಿನಲ್ಲಿ ಸರ್ಕಾರದ ಸವಲತ್ತು, ವಿನಾಯಿತಿಗಳ ಮಾಹಿತಿಯನ್ನು ಸುಲಭವಾಗಿ ಪಡೆಯುವಂತಾದರೆ ಗ್ರಾಮೀಣ ಭಾಗದಲ್ಲಿಯೇ ಹೆಚ್ಚು ಉದ್ಯಮಗಳು ಅರಳುತ್ತವೆ. ಇದು ನಮ್ಮ ದೇಶದ ನಗರೀಕರಣ ಸಮಸ್ಯೆಗೆ ದೊಡ್ಡ ಉತ್ತರ ಆಗುತ್ತದೆ ಎಂದು ಭಾವಿಸಿದ್ದಾರೆ. ಬಹುಶಃ ಆ ನಿಟ್ಟಿನಲ್ಲಿ ಸೋಲಾರ್‌ ವಿದ್ಯುತ್‌ ಅತಿ ದೊಡ್ಡ ಪರಿಹಾರ ಸೂತ್ರ. ಹಾಗಾಗಿಯೇ ನಾನಾ ಇಂಜಿನಿಯರಿಂಗ್‌ ಮುಗಿಸಿ ನಗರಕ್ಕೆ ಉದ್ಯೋಗ ನಿಮಿತ್ತ ಸೇರುವ ಇಂಜಿನಿಯರ್‌ಗಳು ವೇತನದಲ್ಲಿ ಕಳೆದುಹೋಗುತ್ತಾರೆ. ಕೇವಲ ಪಿಯುಸಿ ಓದಿದ ಉಮೇಶ್‌ ಬಂದಗದ್ದೆ 1995ರಲ್ಲಿ ಗ್ರಾಮೀಣ ಭಾಗದ ಶ್ರೇಷ್ಟ ಉದ್ಯಮಿ ರಾಜ್ಯ ಪ್ರಶಸ್ತಿಪಡೆಯುತ್ತಾರೆ. ಮೊನ್ನೆ ಮೊನ್ನೆ ಮತ್ತೆ ರಾಜ್ಯ ಸರ್ಕಾರದ ಅತ್ಯುತ್ತಮ ಉತ್ಪಾದಕ ಘಟಕ ಪ್ರಶಸ್ತಿಗೂ ಉಮೇಶ್‌ ಭಾಜನರಾಗಿದ್ದಾರೆ.

ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next