Advertisement

ಸಜೆಯಾಗದಿರಲಿ ಬೇಸಗೆ ರಜೆ : ಮಕ್ಕಳ ನೀರಾಟದ ಬಗ್ಗೆ ಇರಲಿ ಎಚ್ಚರ

10:05 PM Apr 05, 2019 | Team Udayavani |

ಕೋಟ: ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಧಿ ಮುಗಿದು ಬೇಸಗೆ ರಜೆಯ ಮಜಾ ಆರಂಭ ಗೊಳ್ಳುತ್ತಿದೆ. ಪ್ರತಿ ವರ್ಷ ಈ ಸಂದರ್ಭಗಳಲ್ಲಿ ನೀರಿನ ಹೊಂಡ, ಕೆರೆ, ಹೊಳೆ, ಸಮುದ್ರಕ್ಕೆ ಆಡಲು ತೆರಳಿದಾಗ ಅನೇಕ ದುರಂತಗಳು ನಡೆದು ಮಕ್ಕಳ ಜೀವ ಬಲಿಯಾಗುವ ಪ್ರಕರಣಗಳು ಕರಾವಳಿಯಲ್ಲಿ ವರದಿಯಾಗುತ್ತವೆ.

Advertisement

ಈ ಬಾರಿ ಕೂಡ ಪುತ್ತೂರಿನಲ್ಲಿ ಈಗಾಗಲೇ ಇಂತಹದ್ದೇ ಘಟನೆ ಘಟಿಸಿ ಮೂರು ವಿದ್ಯಾರ್ಥಿಗಳು ಸಾವನ್ನಪ್ಪಿ ದ್ದಾರೆ. ಆದ್ದರಿಂದ ರಜೆಯಲ್ಲಿ ಹೆತ್ತವರು ತಮ್ಮ ಮಕ್ಕಳ ಚಟುವಟಿಕೆ ಬಗ್ಗೆ ತುಂಬಾ ಎಚ್ಚರದಿಂದಿರಬೇಕಾದ ಅಗತ್ಯವಿದೆ.

ನಿಗಾ ಇರಲಿ
ಬೇಸಗೆ ರಜೆಯಲ್ಲಿ ಹೆತ್ತವರು ಮಕ್ಕಳ ಆಟೋಟಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಾದ ಅಗತ್ಯವಿರುತ್ತದೆ. ಮಕ್ಕಳು ಯಾರ ಜತೆ ಆಟವಾಡುತ್ತಾರೆ, ಎಲ್ಲಿಗೆ ತೆರಳುತ್ತಾರೆ. ಆಟವಾಡುವ ಸ್ಥಳದಲ್ಲಿ ಅಪಾಯಕಾರಿ ನೀರಿನ ಹೊಂಡಗಳಿದೆಯೇ ಎನ್ನುವ ಕುರಿತು ಕಾಳಜಿ ಅಗತ್ಯ ಮತ್ತು ನೀರಿನ ಹೊಂಡಗಳಿಗೆ ಬಟ್ಟೆ ಒಗೆಯಲು ತೆರಳುವಾಗ ಚಿಕ್ಕ ಮಕ್ಕಳನ್ನು ಕರೆದೊಯ್ಯದಿರುವುದು ಒಳಿತು.

ಎಚ್ಚರ ಅಗತ್ಯ
ಗ್ರಾಮಾಂತರ ಭಾಗದ ಹಲವು ಕಡೆಗಳಲ್ಲಿ ಗಣಿಗಾರಿಕೆ ಹೊಂಡಗಳು ಮೃತ್ಯಕೂಪವಾಗಿ ಪರಿಣಮಿಸಿವೆೆ. ಪರವಾನಿಗೆ ಇರುವ ಗಣಿಗಾರಿಕೆಗೆ ಹೊಂಡಗಳಿಗೆ ಪರವಾನಿಗೆ ದಾರರು ಬೇಲಿ ಅಳವಡಿಸಬೇಕು ಅಥವಾ ಜಾಗದ ಮಾಲಕರು ಕ್ರಮ ಕೈಗೊಳ್ಳಬೇಕು.ಇಲ್ಲವಾದರೆ ಅಲ್ಲಿ ನಡೆಯುವ ದುರಂತಗಳಿಗೆ ಮಾಲಕರು, ಪರವಾನಿಗೆದಾರರು ಹೊಣೆಗಾರರಾಗು ತ್ತಾರೆ ಎನ್ನುವ ನಿಯಮವಿದೆ. ಆದರೂ ಕೆಲವು ಗಣಿಹೊಂಡಗಳು ಇನ್ನೂ ಅಪಾಯಕಾರಿ ಸ್ಥಿತಿಯಲ್ಲಿದೆ. ಇದರ ಜತೆಗೆ ಸರಕಾರಿ ಜಾಗದಲ್ಲಿ ನಡೆದ ಗಣಿಗಾರಿಕೆಗಳು, ಹೊಳೆ, ಕೆರೆ, ತೋಡು, ಟ್ಯಾಂಕ್‌ಗಳು ತೆರೆದ ಸ್ಥಿತಿಯಲ್ಲಿ ಅಪಾಯಕಾರಿಯಾಗಿದಲ್ಲಿ ಇವುಗಳ ಕುರಿತು ಎಚ್ಚರಿಕೆ ಅಗತ್ಯರಜಾ ದಿನ ಸದುಪಯೋಗಿಸಿ ಹಿಂದೆ ಬೇಸಗೆ ರಜೆಯಲ್ಲಿ ಸಂಬಂಧಿಗಳ ಮನೆಗೆ ತೆರಳಿ ಅಜ್ಜಿ,ತಾತ ಹಾಗೂ ಹಿರಿಯರಿಂದ ಜೀವನಕ್ಕೆ ಬೇಕಾಗುವ ಒಂದಷ್ಟು ವಿಚಾರ ಕಲಿಯುವ ಪದ್ಧತಿ ಇತ್ತು. ಆದರೆ ಇಂದಿನ ಮಕ್ಕಳಿಗೆ ಮೊಬೈಲ್‌, ವಿಡಿಯೋ ಗೇಮ್‌ ಸರ್ವಸ್ವವಾಗಿದೆ. ಹೀಗಾಗಿ ಸಂಬಂಧಿಗಳ ಮನೆಗೆ ತೆರಳುವುದು ಅಪರೂಪವಾಗಿದೆ. ಮಕ್ಕಳನ್ನು ಸಂಬಂಧಿಗಳ ಮನೆಗೆ ಕಳುಹಿಸುವ ಮೂಲಕ ಮೊಬೈಲ್‌, ವೀಡಿಯೋ ಗೇಮ್‌ಗಳ ದಾಸ ರಾಗುವುದನ್ನು ತಪ್ಪಿಸಬಹುದು.

ಬೇಸಗೆ , ಮಳೆಗಾಲದಲ್ಲಿ ಸಾಲು-ಸಾಲು ದುರಂತ
2015ರಿಂದ 2018 ಮೇ ತನಕ ಉಡುಪಿ ಜಿಲ್ಲೆಯಲ್ಲಿ ಬೇಸಗೆ ರಜಾ ಅವಧಿ ಹಾಗೂ ಮಳೆಗಾಲದಲ್ಲಿ ನಡೆದ ನೀರಿನ ದುರಂತಗಳು ಈ ರೀತಿ ಇವೆ. ಬ್ರಹ್ಮಾವರ ಪೊಲೀಸ್‌ ಠಾಣೆ 3 ಪ್ರಕರಣ 4ಸಾವು, ಹೆಬ್ರಿಯಲ್ಲಿ 2 ದುರಂತ 2 ಸಾವು, ಕೋಟದಲ್ಲಿ 7 ಘಟನೆಗಳಲ್ಲಿ 10 ಸಾವು, ಬೈಂದೂರಿನಲ್ಲಿ 1 ಘಟನೆ 1 ಸಾವು, ಕಾರ್ಕಳದಲ್ಲಿ 2 ಪ್ರಕರಣ 2ಸಾವು, ಕುಂದಾಪುರದಲ್ಲಿ 4 ದುರಂತ 5 ಸಾವು, ಮಣಿಪಾಲದಲ್ಲಿ 1 ಪ್ರಕರಣ 2 ಸಾವು, ಶಂಕರನಾರಾಯಣ 1 ಪ್ರಕರಣ 2ಸಾವು, ಕೊಲ್ಲೂರು 1 ಘಟನೆ 1ಸಾವು, ಮಲ್ಪೆ 1 ಪ್ರಕರಣ 1 ಸಾವು. ಹೀಗೆ 23 ಪ್ರಕರಣಗಳಲ್ಲಿ 30 ಜೀವಗಳು ಬಲಿಯಾಗಿವೆ.

Advertisement

– ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next