1 ತೀವ್ರ ಬಿಸಿಲಿಗೆ ಚರ್ಮವಷ್ಟೇ ಅಲ್ಲ, ಕೂದಲೂ ಹಾಳಾಗುತ್ತದೆ. ಧೂಳು ಮೆತ್ತಿಕೊಂಡು ಕೂದಲು ಹಳದಿಬಣ್ಣಕ್ಕೆ ತಿರುಗುವುಂಟು. ಆದ್ದರಿಂದ ವಾರಕ್ಕೊಮ್ಮೆ “ಹೇರ್ ಮಾಸ್ಕ್’ ಬಳಸಿ, ಮಾಲೀಷು ಮಾಡಿ ಕೂದಲಿನ ಆರೈಕೆ ಮಾಡಿಕೊಳ್ಳುವುದು ಉತ್ತಮ. ದಾಸವಾಳದ ಎಲೆಯನ್ನು ಅರೆದು ತಯಾರಿಸಿದ ರಸ ಅಥವಾ ನಿಂಬೆ ರಸವನ್ನು ಆಗಾಗ ಕೂದಲಿಗೆ ಹಚ್ಚಿಕೊಳ್ಳಬಹುದು.
2 ಇನ್ನು ಉಷ್ಣತೆ ಹೆಚ್ಚಾದಾಗ ತುಟಿಗಳು ಬಿಳುಚಿಕೊಂಡಿರುವುದು, ಒಡೆದು ಹೋಗುವುದು ಸಾಮಾನ್ಯ. ಹಲವು ಬಣ್ಣಗಳ ಲಿಪ್‌ಸ್ಟಿಕ್ ಬಳಕೆಯಿಂದ ತುಟಿಗಳು ಸೋತು ಹೋದಂತೆ ಕಾಣಿಸಬಹುದು. ಲಿಪ್‌ಬಾಮ್‌ಗಳು ತುಟಿಗಳ ತಾಜಾತನವನ್ನು ಕಾಪಾಡುತ್ತವೆ. ತೀವ್ರ ಸೆಕೆಯ ದಿನಗಳಲ್ಲಿ ಲಿಪ್‌ಸ್ಟಿಕ್ ಬಳಸದೇ, ಲಿಪ್‌ಬಾಮ್ ಬಳಸಿದರೆ ತುಟಿಯ ಬಣ್ಣ ಕಲೆಸಿ ಹೋಗುವ ಸಂಭವ ಕಡಿಮೆ.
3 ಬೆವರುವಿಕೆಯು ಚರ್ಮದ ಸೊಬಗನ್ನು ಕಡಿಮೆ ಮಾಡುತ್ತವೆ. ಪದೇ ಪದೇ ಬೆವರು ಒರೆಸಿಕೊಂಡು ಚರ್ಮ ಕೆಂಪಗಾಗುವುದೂ ಇದೆ. ಮುಖ ಮಾತ್ರವಲ್ಲದೆ, ಬೆನ್ನು, ಕೈಗಳು, ತೋಳುಗಳಲ್ಲಿ ಬೆವರು ಶೇಖರಣೆಯಾಗಿ ಮಧ್ಯಾಹ್ನದ ವೇಳೆಗೆ ಬಹಳ ಕಿರಿಕಿರಿಯಾಗುವುದುಂಟು. ಆದ್ದರಿಂದ ಸ್ನಾನಕ್ಕೆ ಮುನ್ನ “ಸðಬರ್’ ಬಳಸಿ ಮೈ ತಿಕ್ಕಿಕೊಳ್ಳುವುದು ಒಳಿತು. ಇದರಿಂದ ಬೆವರಿನ ಅಂಟು, ಘಮಲು ಹೊರಟು ಹೋಗುತ್ತದೆ. ಆದರೆ, ಮೃದುವಾದ ಬ್ರಶ್ ಅಥವಾ ಸðಬರ್ ಬಳಸುವುದನ್ನು ಮರೆಯಬಾರದು.
4 ಸುಗಂಧ ದ್ರವ್ಯಗಳು ಹಿಂದಿನಕಾಲದಿಂದಲೂ ಬಳಕೆಯಲ್ಲಿದ್ದ ವಸ್ತುಗಳು. ಅವು ಮನಸ್ಸಿನ ಆಹ್ಲಾದವನ್ನು ಹೆಚ್ಚಿಸುತ್ತವೆ. ದಣಿವನ್ನು ತುಸು ಹೊತ್ತು ಮಾಯವಾಗಿಸಿಬಿಡುತ್ತವೆ. ಬೇಸಿಗೆಯಲ್ಲಿ ಇವುಗಳ ಅಗತ್ಯ ಖಂಡಿತಾ ಇರುತ್ತದೆ. ಓಡಾಟದ ವೃತ್ತಿಯವರಿಗಂತೂ ದಿನಕ್ಕೆರಡು ಬಾರಿ ಸುಗಂಧದ್ರವ್ಯ ಬಳಸಬೇಕು ಎನಿಸುತ್ತದೆ. ಆದರೆ, ಸುಗಂಧದ್ರವ್ಯ ಅಥವಾ ಡ್ಯುಯೋಡರೆಂಟ್‌ಗಳು ಇತರರ ಮೂಗಿಗೆ ಅಡರುವಂತೆ ಕಡುವಾಸನೆ ಬೀರದೇ, ಹಿತವಾದ ಕಂಪು ಸೂಸುವಂತೆ ಇರಲಿ. ಸುಗಂಧವು ಸ್ವಯಂ ಮನಸ್ಸಿಗೂ ಆಹ್ಲಾದಕರ ಭಾವನೆಯನ್ನು ಮೂಡಿಸುತ್ತದೆ.
5 ಬಾಹ್ಯ ಸೌಂದರ್ಯವೇನಿದ್ದರೂ ಅಂತರಂಗವನ್ನು ಅವಲಂಬಿಸಿಯೇ ಇರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ. ಬೇಸಿಗೆಯಲ್ಲಿ ಬಳಸುವ ಆಹಾರವೂ ಆದಷ್ಟು ಸರಳವಾಗಿರಬೇಕು. ಸಿಹಿ ಮತ್ತು ಎಣ್ಣೆಯ ಪದಾರ್ಥ ಸೇವಿಸಿದಾಗ, ದೇಹವು ವ್ಯಾಯಾಮವನ್ನು ಬೇಡುತ್ತದೆ. ಅದು ಸಾಧ್ಯವಾಗದೇ ಇದ್ದಾಗ ಮೈಕೈಯಲ್ಲಿ ಆಲಸ್ಯಉಂಟಾಗುತ್ತದೆ. ಆದ್ದರಿಂದ ಸಿಹಿ ಮತ್ತು ಎಣ್ಣೆಯ ಪದಾರ್ಥವನ್ನು ಆದಷ್ಟು ಕಡಿಮೆ ಸೇವಿಸಿದರೆ ಮನಸ್ಸು ಉಲ್ಲಸಿತವಾಗಿರುತ್ತದೆ.
6 ಇತ್ತೀಚೆಗೆ ಯುವಜನತೆಗೆ ಪಾದಗಳ ಸೌಂದರ್ಯದ ಬಗೆಗಿನ ಕಾಳಜಿ ಹೆಚ್ಚು. ಬೇಸಿಗೆ ಸಂದರ್ಭದಲ್ಲಿ ಬಟ್ಟೆಯ ಕಾಲುಚೀಲಗಳನ್ನೇ ಧರಿಸಿದರೆ ಕಾಲಿನ ಚರ್ಮದ ಆರೋಗ್ಯಕ್ಕೆ ಉತ್ತಮ.
ವೀಣಾ ಕೆ.