Advertisement

ಬೇಸಗೆ ಕ್ರೀಡಾ ತರಬೇತಿಗೆ ಚಾಲನೆ; ದಿ|ಸಿ.ವಿ. ಶಂಕರ್‌ ಸ್ಮರಣೆ

06:55 PM Apr 03, 2017 | Team Udayavani |

ಮಡಿಕೇರಿ: ವಾಂಡರರ್ ನ್ಪೋರ್ಟ್ಸ್ ಕ್ಲಬ್‌ ಹಾಗೂ ಮ್ಯಾನ್ಸ್‌ ಹಾಕಿ ಅಕಾಡೆ ಮಿಯ ಜಂಟಿ ಆಶ್ರಯದಲ್ಲಿ 23ನೇ ವರ್ಷದ ಬೇಸಗೆ ಕ್ರೀಡಾ ತರಬೇತಿ ಶಿಬಿರಕ್ಕೆ ಜನರಲ್‌ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಿತು. 

Advertisement

ಒಂದು ತಿಂಗಳ ಕಾಲ ನಡೆಯುವ ಶಿಬಿರವನ್ನು ಹಿರಿಯ ಕ್ರೀಡಾಪಟು ದಿ.ಸಿ.ವಿ. ಶಂಕರ್‌ ಅವರ ಜನ್ಮದಿನದಂದು ಹಿರಿಯ ನಾಗರಿಕರ ವೇದಿಕೆಯ ಪ್ರಮುಖರಾದ ಜಿ.ಟಿ. ರಾಘವೇಂದ್ರ ಉದ್ಘಾಟಿಸಿದರು. ಅನಂತರ ಮಾತನಾಡಿದ ಅವರು, ದೇಹವನ್ನು ದಂಡಿಸುವುದರಿಂದ ಆರೋಗ್ಯ ವೃದ್ಧಿಯಾಗುವುದಲ್ಲದೆ ಸಾಧನೆ ಹಾಗೂ ಕ್ರಿಯಾಶೀಲತೆಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಏಕಾಗ್ರತೆಯಿಂದ ಮಾತ್ರ ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯವೆಂದ ಅವರು ಶಿಬಿರದ ಲಾಭವನ್ನು ಪಡೆಯುವ ಮೂಲಕ ಕ್ರೀಡಾ ಸ್ಫೂರ್ತಿಯನ್ನು ಮೆರೆದು ಹಿರಿಯರಾದ ಸಿ.ವಿ. ಶಂಕರ್‌ ಅವರ ಕನಸನ್ನು ನನಸು ಮಾಡಿ ಎಂದು ಜಿ.ಟಿ. ರಾಘವೇಂದ್ರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಒಲಂಪಿಯನ್‌ ಎಂ.ಎಸ್‌. ಮೊಣ್ಣಪ್ಪ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆ ಯೊಂದಿಗೆ ಕ್ರೀಡಾಸಕ್ತಿಯನ್ನು ಕೂಡ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು. ಗುರು ಗಳಾದ ಸಿ.ವಿ. ಶಂಕರ್‌ ಅವರ ಮಾರ್ಗದರ್ಶನ ಮತ್ತು ಕ್ರೀಡಾಸ್ಫೂರ್ತಿಯಿಂದ ತಾವು ಕ್ರೀಡಾ ಸಾಧನೆ ಮಾಡಲು ಸಾಧ್ಯವಾಯಿತೆಂದು ಸ್ಮರಿಸಿಕೊಂಡರು. 

ಹಾಕಿ, ಯೋಗ, ಅತ್ಲೆಟಿಕ್ಸ್‌ ಕ್ರೀಡೆಗಳಿಗೆ ಉಚಿತವಾಗಿ ತರಬೇತಿ ನೀಡಲಾಗುವುದು ಮತ್ತು ಶಿಬಿರದ ನಡುವೆ ಚಾರಣವನ್ನು ಕೂಡ ಆಯೋಜಿಸಲಾಗುವುದು ಎಂದು ಕ್ಲಬ್‌ನ ಪ್ರಮುಖರಾದ ಬಾಬು ಸೋಮಯ್ಯ ತಿಳಿಸಿದರು.    

    ಪ್ರಮುಖರಾದ ಎಂ.ಎಸ್‌. ಮೊಣ್ಣಪ್ಪ, ಸಿ.ವಿ. ಶಂಕರ್‌ ಅವರ ಪತ್ನಿ ಶಾಂತಿ ಶಂಕರ್‌, ಪುತ್ರ ಗುರುದತ್‌, ಹಾಕಿ ತರಬೇತುದಾರರಾದ ಕೋಟೇರ ಮುದ್ದಯ್ಯ, ಶ್ಯಾಂ ಪೂಣಚ್ಚ, ಕಿಶನ್‌ ಪೂವಯ್ಯ, ಗಣೇಶ್‌, ಯೋಗ ಶಿಕ್ಷಕ ವೆಂಕಟೇಶ್‌, ಕ್ರೀಡಾ ಶಿಕ್ಷಕರುಗಳಾದ ಲಕ್ಷ್ಮಣ್‌ ಸಿಂಗ್‌, ಬಾಬು ಸೋಮಯ್ಯ, ರಾಘವೇಂದ್ರ ಉಪಸ್ಥಿತರಿದ್ದರು.

Advertisement

    ಗಣ್ಯರು ಸಿ.ವಿ. ಶಂಕರ್‌ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಶಿಬಿರ ನಡೆಸಲು ಕಾರಣೀಭೂತರಾದ ಹಿರಿಯ ಚೇತನಕ್ಕೆ ಗೌರವ ಅರ್ಪಿಸಿದರು.  ಶಿಬಿರ ಮೇ 2ರವರೆಗೆ ನಡೆಯಲಿದ್ದು, ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next