Advertisement

ಬೇಸಿಗೆ ಕ್ರೀಡಾ ಶಿಬಿರಗಳು ಹೌಸ್‌ಪುಲ್‌

09:10 PM Apr 27, 2019 | Lakshmi GovindaRaj |

ಮೈಸೂರು: ಮಕ್ಕಳು ನಾಟಕ, ಸಂಗೀತ, ನೃತ್ಯ ಕಲಿಕಾ ತರಬೇತಿಯಲ್ಲಿ ತಲ್ಲೀನರಾಗುವುದರ ಜೊತೆಗೆ ಕ್ರೀಡಾ ತರಬೇತಿಯಲ್ಲಿ ಪಾಲ್ಗೊಂಡು ಕಲಿಕೆಯೊಂದಿಗೆ ದೈಹಿಕ ಸದೃಢತೆಗೆ ಮುಂದಾಗಿದ್ದಾರೆ.

Advertisement

ಪ್ರತಿ ವರ್ಷದಂತೆ ಈ ಬಾರಿಯೂ ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗ ನ್ಪೋರ್ಟ್ಸ್ ಪೆವಿಲಿಯನ್‌, ಮಹಾರಾಜ, ಯುವರಾಜ ಕಾಲೇಜಿನ ಒಳಾಂಗಣ ಕ್ರೀಡಾಂಗಣ, ಓವೆಲ್‌ ಮೈದಾನದಲ್ಲಿ ಮಕ್ಕಳಿಗಾಗಿ ವಿವಿಧ ಕ್ರೀಡೆಗಳ ಬೇಸಿಗೆ ತರಬೇತಿ ಶಿಬಿರ ಆಯೋಜಿಸಲಾಗಿದೆ. ಈ ಎಲ್ಲಾ ಮೈದಾನಗಳಲ್ಲಿ ನಡೆಯುವ ಶಿಬಿರಗಳು ಮಕ್ಕಳಿಂದ ಭರ್ತಿಯಾಗಿವೆ

ವಿವಿಧ ಕ್ರೀಡೆ: ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗವು ಪ್ರತಿ ಬಾರಿಯಂತೆ ಈ ಬಾರಿಯೂ ಕ್ರಿಕೆಟ್‌, ಬ್ಯಾಡ್ಮಿಂಟನ್‌, ವಾಲಿಬಾಲ್‌, ಬಾಸ್ಕೆಟ್‌ಬಾಲ್‌, ಫ‌ುಟ್‌ಬಾಲ್‌, ಅಥ್ಲೆಟಿಕ್ಸ್‌ , ಹಾಕಿ, ಖೋ-ಖೋ, ಜಿಮ್ನಾಸ್ಟಿಕ್‌, ಯೋಗ ಸೇರಿದಂತೆ ಈ ವರ್ಷ ಹೊಸದಾಗಿ ಹ್ಯಾಂಡ್‌ಬಾಲ್‌ ತರಬೇತಿಯನ್ನು ಆಯೋಜಿಸಿದೆ. ಜೊತೆಗೆ ಮೈಸೂರು ವಿವಿ ಈಜುಕೊಳದಲ್ಲಿ ಆಯೋಜಿಸಿರುವ ಈಜು ತರಬೇತಿ ಶಿಬಿರದಲ್ಲಿ ಮಕ್ಕಳ ದಂಡೇ ಇದೆ.

ವಿಷಯಾಧಾರಿತ ತರಬೇತಿ: ಬೇಸಿಗೆ ರಜೆಯಲ್ಲಿ ಪ್ರವಾಸ, ಇಲ್ಲವೇ ಅಜ್ಜಿ, ನೆಂಟರಿಷ್ಟರ ಮನೆಗೆ ಹೋಗುವುದು ಅಥವಾ ಪೋಷಕರು ತಮ್ಮ ಮಕ್ಕಳನ್ನು ಡ್ಯಾನ್ಸ್‌, ಚಿತ್ರಕಲೆ, ಸಂಗೀತ, ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ವಿಷಯಾಧಾರಿತ ತರಬೇತಿಗೆ ಸೇರಿಸುವುದು ಸಾಮಾನ್ಯವಾಗಿತ್ತು. ಆದರೆ, ಈಗ ಕಾಲ ಬದಲಾಗಿದ್ದು, ಬಹುತೇಕ ಪಾಲಕರು ಮಕ್ಕಳ ಆರೋಗ್ಯ ಮತ್ತು ಕ್ರೀಡೆಯಿಂದ ಸಿಗುವ ಉಪಯೋಗಗಳ ಬಗ್ಗೆ ಜಾಗೃತಿಗೊಂಡಿದ್ದಾರೆ.

ಈ ನಿಟ್ಟಿನಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕ್ರೀಡಾ ತರಬೇತಿಗೂ ಸೇರಿಸಲು ಪೋಷಕರು ಮುಂದಾಗುತ್ತಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ 8 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಆಯೋಜಿಸುತ್ತಿರುವ ವಿವಿಧ ಕ್ರೀಡೆಗಳ ಬೇಸಿಗೆ ತರಬೇತಿ ಶಿಬಿರಕ್ಕೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ.

Advertisement

ಬಾಲಕಿಯರೂ ಭಾಗಿ: ಈ ವರ್ಷದ ಶಿಬಿರದಲ್ಲಿ ಸಾವಿರಕ್ಕೂ ಹೆಚ್ಚು ಶಿಬಿರಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಅದರಲ್ಲಿ 200ಕ್ಕೂ ಹೆಚ್ಚು ಬಾಲಕಿಯರಿರುವುದು ವಿಶೇಷ. ಶಾಲಾ ಹಂತದಿಂದಲೇ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡುವ ಮೂಲಕ ಪರಿಪೂರ್ಣ ಕ್ರೀಡಾಪಟುವನ್ನಾಗಿಸಬೇಕೆಂಬ ಉದ್ದೇಶದಿಂದ ಮೈಸೂರು ವಿವಿಯ ದೈಹಿಕ ಶಿಕ್ಷಣ ವಿಭಾಗ ಆಯೋಜಿಸಿರುವ ಬೇಸಿಗೆ ಕ್ರೀಡಾ ಶಿಬಿರ ಯಶಸ್ವಿಯಾಗುತ್ತಿದೆ.

ಕ್ರೀಡಾ ತರಬೇತಿ ಶಿಬಿರದಲ್ಲಿ 850 ವಿದ್ಯಾರ್ಥಿಗಳು ಭಾಗವಹಿಸಿದ್ದು, 15ಕ್ಕೂ ಹೆಚ್ಚು ಕ್ರೀಡೆಗಳ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಏ.8 ರಂದು ಪ್ರಾರಂಭವಾಗಿರುವ ಈ ಶಿಬಿರ ಮೇ 8ರ ವರಗೂ ಪ್ರತಿದಿನ ಬೆಳಗ್ಗೆ 6.30 ರಿಂದ 9.30 ವರೆಗೂ ಪೆವಿಲಿಯನ್‌ನಲ್ಲಿ ನಡೆಯಲಿದೆ.

ವಾಲಿಬಾಲ್‌ ತರಬೇತಿಯಲ್ಲಿ 20, ಫ‌ುಟ್‌ಬಾಲ್‌ ತರಬೇತಿಯಲ್ಲಿ 140, ಯೋಗ ತರಬೇತಿಯಲ್ಲಿ 20, ತರಬೇತಿಯಲ್ಲಿ 30, ಕಬಡ್ಡಿ ತರಬೇತಿಯಲ್ಲಿ 40, ಕುಸ್ತಿ ಹಾಕಿಯಲ್ಲಿ 20 ಮಕ್ಕಳ ಭಾಗವಹಿಸಿರುವುದು ವಿಶೇಷ. ಕ್ರಿಕೆಟ್‌, ಹ್ಯಾಂಡ್‌ಬಾಲ್‌, ಜಿಮ್ನಾಸ್ಟಿಕ್‌, ಬ್ಯಾಸ್ಕೆಟ್‌ಬಾಲ್‌ ಹಾಗೂ ಅಥ್ಲೆಟಿಕ್ಸ್‌ ಶಿಬಿರಗಳಲ್ಲಿ ತಲಾ 100 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿರುವುದು ಗಮನಾರ್ಹ.

ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗ ಮಕ್ಕಳಲ್ಲಿನ ಪ್ರತಿಭೆ ಗುರುತಿಸಲು, ಅನೇಕ ವರ್ಷಗಳಿಂದ ಕ್ರೀಡಾ ತರಬೇತಿ ಬೇಸಿಗೆ ಶಿಬಿರ ಆಯೋಜನೆ ಮಾಡುತ್ತಿದೆ. ಶಿಬಿರದಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸುತ್ತಿದ್ದು, ಅದೇ ಉತ್ಸಾಹ ಮತ್ತು ಶ್ರಮವನ್ನು ಮುಂದುವರಿಸಿದರೆ ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟುಗಳಾಗಿ ಬೆಳೆಯಬಹುದು.
-ಡಾ.ಪಿ.ಕೃಷ್ಣಯ್ಯ, ದೈಹಿಕ ಶಿಕ್ಷಣ ವಿಭಾಗದ ಪ್ರಭಾರ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next