Advertisement
ಹವಾಮಾನ ಇಲಾಖೆಯ ಸದ್ಯದ ಅಂಕಿ-ಅಂಶ ಪ್ರಕಾರ ಕರಾವಳಿ ಪ್ರದೇಶದಲ್ಲಿ ಈ ಬಾರಿ ವಾಡಿಕೆಗಿಂತ ಶೇ.29ರಷ್ಟು ಬೇಸಗೆ ಮಳೆಯ ಕೊರತೆಯಾಗಿದೆ.
Related Articles
Advertisement
ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಕರಾವಳಿ ಪ್ರದೇಶದಲ್ಲಿ ವಾಡಿಕೆಗಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಹವಾಮಾನ ವೈಪರಿತ್ಯದಿಂದಾಗಿ ಮಳೆ ತರುವ ಮೋಡಗಳು ದೂರ ಹೋಗಿದ್ದೇ ಮಳೆ ಕೊರತೆಗೆ ಕಾರಣ.
ಶೇ.29ರಷ್ಟು ಮಳೆ ಕೊರತೆಕರಾವಳಿ ಪ್ರದೇಶದಲ್ಲಿ ಜ.1ರಿಂದ ಎ.27ರ ವರೆಗೆ ಹೋಲಿಕೆ ಮಾಡಿದರೆ ವಾಡಿಕೆಗಿಂತಲೂ ಶೇ.29ರಷ್ಟು ಮಳೆ ಕೊರತೆಯಾಗಿದೆ. ದ.ಕ. ಜಿಲ್ಲೆಯಲ್ಲಿ 55.90 ಮಿ.ಮೀ. ಮಳೆಯಾಗಬೇಕಿದ್ದು, ಇದುವರೆಗೆ 36.47 ಮಿ.ಮೀ. ಮಾತ್ರ ಮಳೆ ಸುರಿದಿದೆ. ಉಡುಪಿ ಜಿಲ್ಲೆಯಲ್ಲಿ 28.70 ಮಿ.ಮೀ. ಮಳೆಯಾಗಬೇಕಿದ್ದರೆ, 15.52 ಮಿ.ಮೀ.ನಷ್ಟು, ಉತ್ತರ ಕನ್ನಡ ಜಿಲ್ಲೆಯಲ್ಲಿ 21.40 ಮಿ.ಮೀ. ಮಳೆಯಾಗಬೇಕಿದ್ದು, 18.14 ಮಿ.ಮೀ. ಮಳೆ ಸುರಿದಿದೆ. ಒಟ್ಟಾರೆ ಕರಾವಳಿಯಲ್ಲಿ ಈ ಅವಧಿಯಲ್ಲಿ 31.40 ಮಿ.ಮೀ. ಸರಾಸರಿ ಮಳೆಯಾಗಬೇಕಿತ್ತು. ಆದರೆ ಈವರೆಗೆ 22.42 ಮಿ.ಮೀ. ಮಾತ್ರ ಮಳೆ ದಾಖಲಾಗಿದೆ. ಮಂಗಳೂರು ತಾಲೂಕಿನಲ್ಲೇ ಮಳೆ ಕಡಿಮೆ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ತಾಲೂಕುಗಳಿಗೆ ಹೋಲಿಕೆ ಮಾಡಿದರೆ ಜ. 1ರಿಂದ ಈವರೆಗೆ ಮಂಗಳೂರು ತಾಲೂಕಿನಲ್ಲಿ ಅತೀ ಕಡಿಮೆ ಮಳೆಯಾಗಿದೆ. ವಾಡಿಕೆಯಂತೆ 32.9 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಸುರಿದದ್ದು ಕೇವಲ 4.2 ಮಿ.ಮೀ. ಎ.29ರಿಂದ ಮಳೆ ಸಾಧ್ಯತೆ
ಬಂಗಾಲಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದಿಂದಾಗಿ ದಕ್ಷಿಣ ಒಳನಾಡು ಸಹಿತ ಕರಾವಳಿ, ಮಲೆನಾಡು ಭಾಗದಲ್ಲಿ ಎ.28ರಿಂದ ಮೂರು ದಿನಗಳ ಕಾಲ ಗಾಳಿ ಮಳೆಯಾಗುವ ಸಂಭವವಿದೆ. ಇದರ ಜತೆಗೆ ಸಮುದ್ರದಲ್ಲಿ ಅಲೆಗಳ ಒತ್ತಡವೂ ಹೆಚ್ಚಿರಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಕಳೆದ ವರ್ಷ ಭರ್ಜರಿ ಮಳೆ
ಕರಾವಳಿ ಪ್ರದೇಶದಲ್ಲಿ ಕಳೆದ ವರ್ಷ ಉತ್ತಮ ಪೂರ್ವ ಮುಂಗಾರು ಮಳೆಯಾಗಿದೆ. ದ.ಕ. ಜಿಲ್ಲೆಯಲ್ಲಿ 227.1 ವಾಡಿಕೆ ಮಳೆಯ ಪೈಕಿ 616.9 ಮಿ.ಮೀ. ಸರಾಸರಿ ಮಳೆಯಾಗಿ ಶೇ.172ರಷ್ಟು ಹೆಚ್ಚಳವಾಗಿತ್ತು. ಉಡುಪಿ ಜಿಲ್ಲೆಯಲ್ಲಿ 227.3 ಮಿ.ಮೀ. ವಾಡಿಕೆ ಮಳೆ ಪೈಕಿ 396.6 ಮಿ.ಮೀ. ಮಳೆಯಾಗಿ ಶೇ.74ರಷ್ಟು ಹೆಚ್ಚಳವಾಗಿತ್ತು. ಅದೇ ರೀತಿ ಉತ್ತರ ಕನ್ನಡ ಜಿಲ್ಲೆಯಲ್ಲಿ 138.8 ಮಿ.ಮೀ. ವಾಡಿಕೆ ಮಳೆ ಪೈಕಿ 180.7 ಮಿ.ಮೀ. ಮಳೆಯಾಗಿ ಶೇ.30ರಷ್ಟು ಹೆಚ್ಚು ಮಳೆಯಾಗಿತ್ತು. ಒಟ್ಟಾರೆ ಕರಾವಳಿ ಪ್ರದೇಶದಲ್ಲಿ 178.8 ಮಿ.ಮೀ. ಮಳೆಯ ಪೈಕಿ 334.9 ಮಿ.ಮೀ. ಮಳೆಯಾಗಿ ಶೇ.87ರಷ್ಟು ಮಳೆ ಪ್ರಮಾಣ ಹೆಚ್ಚಳವಾಗಿತ್ತು. ಹವಾಮಾನ ವೈಪರಿತ್ಯ
ಈ ಬಾರಿಯ ಪೂರ್ವ ಮುಂಗಾರಿನಲ್ಲಿ ವಾಡಿಕೆಯಂತೆ ಮಳೆಯಾಗಲಿಲ್ಲ. ಹವಾಮಾನ ವೈಪರಿತ್ಯವೂ ಇದಕ್ಕೆ ಕಾರಣ. ಸದ್ಯದ ಮಾಹಿತಿಯ ಪ್ರಕಾರ ಚಂಡಮಾರುತದ ಪ್ರಭಾವದಿಂದ ಈ ತಿಂಗಳ ಕೊನೆಯಲ್ಲಿ ಉತ್ತಮ ಮಳೆಯಾಗಬಹುದು. ಬಳಿಕ ಎರಡು ವಾರಗಳ ಕಾಲ ಮಳೆಯಾಗುವುದು ಸಂಶಯ.
- ಸುನಿಲ್ ಗವಾಸ್ಕರ್, ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ - ನವೀನ್ ಭಟ್ ಇಳಂತಿಲ