ನಿರ್ದೇಶಕಿ ಕವಿತ ಲಂಕೇಶ್ “ಸಮ್ಮರ್ ಹಾಲಿಡೇಸ್’ ಎಂಬ ಮಕ್ಕಳ ಸಿನಿಮಾ ಮಾಡಿರೋದು ಗೊತ್ತೇ ಇದೆ. ಅದು ಕನ್ನಡ ಹಾಗು ಇಂಗ್ಲೀಷ್ ಭಾಷೆಯಲ್ಲಿ ತಯಾರಾಗಿದೆ ಎಂಬ ವಿಷಯವೂ ಗೊತ್ತು. ಮಕ್ಕಳ ದಿನಾಚರಣೆ ಅಂಗವಾಗಿ ಸೋಮವಾರ ಚಿತ್ರದ ಟ್ರೇಲರ್, ಪೋಸ್ಟರ್ ಪ್ರದರ್ಶಿಸಿದ್ದೂ ಆಗಿದೆ. ಆದರೆ, ಹೊಸ ಸುದ್ದಿಯೆಂದರೆ, ಇದೇ ಮೊದಲ ಬಾರಿಗೆ ಇಂಗ್ಲೀಷ್ ಭಾಷೆಯಲ್ಲಿ ಮಕ್ಕಳ ಚಿತ್ರ ಮಾಡಿದ್ದಾರೆ ಎಂಬುದು ವಿಶೇಷ.
ಕನ್ನಡದ ಹಲವರು ಈ ಹಿಂದೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಚಿತ್ರಗಳನ್ನು ಮಾಡಿರುವುದುಂಟು. ಆದರೆ, ಇಂಗ್ಲೀಷ್ ಭಾಷೆಯಲ್ಲಿ ಮಕ್ಕಳ ಚಿತ್ರಗಳು ಆಗಿಲ್ಲ ಎಂಬುದನ್ನು ಮನಗಂಡ ಕವಿತ ಲಂಕೇಶ್, “ಸಮ್ಮರ್ ಹಾಲಿಡೇಸ್’ ಎಂಬ ಮಕ್ಕಳ ಚಿತ್ರವನ್ನು ಕನ್ನಡ ಹಾಗು ಇಂಗ್ಲೀಷ್ ಭಾಷೆಯಲ್ಲಿ ತಯಾರಿಸಿದ್ದಾರೆ. ಈ ಹಿಂದೆ “ಬಿಂಬ’ ಮತ್ತು “ಕರಿಯ ಕಣ್‌ಬಿಟ್ಟ’ ಚಿತ್ರಗಳನ್ನು ನಿರ್ದೇಶಿಸಿದ್ದರೂ, ಅವುಗಳು ಗ್ರಾಮೀಣ ಭಾಗಕ್ಕಷ್ಟೇ ಸೀಮಿತವಾಗಿದ್ದವು.
ಆದರೆ, ನಗರ ಪ್ರದೇಶ ಸೇರಿದಂತೆ ಮಾರುಕಟ್ಟೆಯನ್ನೂ ವಿಸ್ತರಿಸುವ ಸಲುವಾಗಿ ಅವರು ದೊಡ್ಡ ಬಜೆಟ್ ಅಲ್ಲದಿದ್ದರೂ, ಒಂದು ನೀಟ್ ಎನಿಸುವ ನಗರಕ್ಕೂ ಸಲ್ಲುವ ಮಕ್ಕಳ ಇಂಗ್ಲೀಷ್ ಚಿತ್ರ ಮಾಡಿದ್ದಾರೆ. “ಸಮ್ಮರ್ ಹಾಲಿಡೇಸ್’ನಲ್ಲಿ ನಮ್ಮ ಕನ್ನಡದ ಸಂಸ್ಕೃತಿ, ಆಚಾರ, ವಿಚಾರಗಳನ್ನಿಟ್ಟುಕೊಂಡು ಕಥೆ ಹೆಣೆದಿದ್ದಾರಂತೆ. ಅದರಲ್ಲೂ ಮಕ್ಕಳ ಮನೋವಿಕಾಸ ಕುರಿತ ಚಿತ್ರವಿದು.
ಈಗಾಗಲೇ ಮುಂಬೈನ ಹೆಸರಾಂತ ವಿತರಣೆಯ ಕಂಪೆನಿಯೊಂದು ದೇಶಾದ್ಯಂತ ಈ ಚಿತ್ರವನ್ನು ಬಿಡುಗಡೆ ಮಾಡಲು ಮಾತುಕತೆ ನಡೆಸುತ್ತಿದೆ. ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ತಯಾರಾಗಿರುವ ಚಿತ್ರ ಪ್ರದರ್ಶನಗೊಂಡರೆ, ಬೇರೆಡೆ ಇಂಗ್ಲೀಷ್ ಭಾಷೆಯಲ್ಲಿ ಮೂಡಿ ಬಂದಿರುವ “ಸಮ್ಮರ್ ಹಾಲಿಡೇಸ್’ ರಿಲೀಸ್ ಆಗಲಿದೆ ಎಂದು ಹೇಳುವ ಕವಿತ ಲಂಕೇಶ್, ಅವರಿಗೆ ಈ ಕಥೆ ಹುಟ್ಟಿದ್ದು, ಅವರು ಚಿತ್ರೋತ್ಸವಗಳಲ್ಲಿ ಮಕ್ಕಳ ಸಿನಿಮಾ ಗಮನಿಸಿದಾಗಲಂತೆ.
ಬರೀ ಮಕ್ಕಳ ಮೇಲೆ ಚಿತ್ರ ಮೂಡಿಬಂದಿದ್ದರೂ, ಅಪ್ಪ ಕುಡುಕ, ಆ ಹುಡುಗ ಬಡ ಕುಟುಂಬದವನು, ಅವನ ಸಾಧನೆ ಇತ್ಯಾದಿ ವಿಷಯ ಬಿಟ್ಟು ಬೇರೆ ವಿಷಯದ ಮೇಲೆ ಮಕ್ಕಳ ಚಿತ್ರಗಳು ಕಾಣಿಸಿಕೊಳ್ಳಲಿಲ್ಲದ ಕಾರಣ, ಅವರೇ ಈಗಿನ ಮಕ್ಕಳ ಲೈಫ್ಸ್ಟೈಲ್, ಅವರ ಮುಗ್ಧತೆ, ಇವತ್ತಿನ ಕಾಲಮಾನದಲ್ಲಿ ಮೊಬೈಲ್, ಐಪ್ಯಾಡ್ ಹೇಗೆಲ್ಲಾ ಪೂರಕ ಎಂಬುದನ್ನೂ ಅವರಿಲ್ಲಿ ಹೇಳ ಹೊರಟಿದ್ದಾರೆ.
ಇಲ್ಲಿ ಸಂದೇಶಗಳಿವೆ, ಮನರಂಜನೆಯೂ ಇದೆ. ಕೆಲ ಸೂಕ್ಷ್ಮ ವಿಷಯಗಳೂ ಇಲ್ಲಿವೆ ಎಂಬುದು ನಿರ್ದೇಶಕರ ಮಾತು. ಚಿತ್ರದಲ್ಲಿ ಕವಿತ ಪುತ್ರಿ ಇಶಾ, ಇಂದ್ರಜಿತ್ ಲಂಕೇಶ್ ಪುತ್ರ ಸಮರ್‌ಜಿತ್, ಸೋನಿಯ, ಅಂಜ್, ಪ್ರಕಾಶ್‌ರೈ ಮತ್ತು ಸುಮನ್ ನಗರ್‌ಕರ್ ನಟಿಸಿದ್ದಾರೆ.