ಗೌರಿಬಿದನೂರು: ಬೇಸಿಗೆ ಬಿಸಿಯು ಈಗ ಕಾವೇರುತ್ತಿದೆ. ಬಿಸಿಯ ತಾಪದಿಂದ ಪಾರಾಗಲು ಜನರು ಹಣ್ಣು ಹಾಗೂ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಇದರ ಜತೆಗೆ ಕಲ್ಲಂಗಡಿ ಹಣ್ಣಿನ ಬೇಡಿಕೆಯೂ ಹೆಚ್ಚುತ್ತಿದೆ.
ನಗರದ ಪ್ರಮುಖ ರಸ್ತೆಗಳು, ಮಾರುಕಟ್ಟೆ, ಬೆಂಗಳೂರು-ಹಿಂದೂಪುರ ರಸ್ತೆ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಕಲ್ಲಂಗಡಿ ವ್ಯಾಪಾರ ಜೋರಾಗಿದೆ. ರಸ್ತೆ ಬದಿಯ ಅಂಗಡಿಗಳಲ್ಲಿ ಮಾರಾಟಕ್ಕಿಟ್ಟ ಹಣ್ಣು ಜನರ ಗಮನ ಸೆಳೆಯುತ್ತಿವೆ. ಬಿಸಿಲಿನ ಝಳಕ್ಕೆ ಸುಸ್ತಾಗುವ ದಾರಿಹೋಕರ ದಾಹ ತೀರಿಸಲು ಸಹಾಯ ಮಾಡುತ್ತದೆ.
ರಸ್ತೆ ಬದಿಯಲ್ಲೇ ಅಂಗಡಿಗಳು: ನಗರದ ಹಿಂದೂ ಪುರ-ಬೆಂಗಳೂರು ರಸ್ತೆಯಲ್ಲಿ 3-4 ಕಡೆ ರಸ್ತೆ ಬದಿ ಯಲ್ಲಿ ಕಲ್ಲಂಗಡಿ ಹಣ್ಣಿನ ವ್ಯಾಪಾರ ವಹಿವಾಟು ನಡೆಯುತ್ತಿದೆ. ನೀರಿನ ಅಂಶ ಹೆಚ್ಚಾಗಿದ್ದು, ಸಿಹಿ ಅಧಿಕ ವಿರುವ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ರಸ್ತೆಗೆ ಹೊಂದಿಕೊಂಡಿರುವ ಖಾಲಿ ಜಾಗಗಳಲ್ಲಿ ವ್ಯಾಪಾರಿಗಳು ಹಣ್ಣಿನ ರಾಶಿ ಹಾಕಿಕೊಂಡು ಮಾರಾಟ ಮಾಡುತ್ತಿದ್ದಾರೆ.
ಬೆಂಗಳೂರು, ಚಿಕ್ಕಬಳ್ಳಾಪುರ, ಗುಡಿಬಂಡೆ ರಸ್ತೆಯಲ್ಲೂ ಕಲ್ಲಂಗಡಿ ಅಂಗಡಿಗಳು ತಲೆ ಎತ್ತಿವೆ. ನಗರಕ್ಕೆ ಆಂಧ್ರಪ್ರದೇಶ, ತಮಿಳುನಾಡಿನ ದಿಂಡಿವಾರು, ಸತ್ಯವೀಡು ಕಡೆಯಿಂದ ಹಣ್ಣುಗಳು ಸರಬರಾಜಾಗುತ್ತವೆ. ಪ್ರಸ್ತುತ 15 ದಿನಕ್ಕೆ ಒಂದು ಲೋಡ್ ನಗರಕ್ಕೆ ಪೂರೈಕೆಯಾಗುತ್ತಿದೆ ಎಂದು ವ್ಯಾಪಾರಿ ರಿಜ್ವಾನ್ ಮಾಹಿತಿ ನೀಡುತ್ತಾರೆ.
ಆರೋಗ್ಯಕ್ಕೂ ಉತ್ತಮ: ಕಲ್ಲಂಗಡಿ ಹಣ್ಣು ಶರೀರಕ್ಕೆ ಹೆಚ್ಚಿನ ತಂಪು ಹಾಗೂ ನೀರಿನ ಅಂಶವನ್ನು ಒದಗಿಸು ವುದರ ಜತೆಗೆ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಎಂಬುದರಿಂದ ಜನರು ಇದನ್ನು ಹೆಚ್ಚು ಉಪಯೋಗಿಸುತ್ತಾರೆ. ವರ್ಷವಿಡೀ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣು ದೊರೆಯುತ್ತದೆ. ಆದರೆ ಬೇಸಿಗೆಯಲ್ಲಿ ಮಾರಾಟ ಹೆಚ್ಚು. ತಮಿಳುನಾಡಿನಿಂದ ಹಣ್ಣುಗಳನ್ನು ತರಿಸಿ ವ್ಯಾಪಾರ ಮಾಡಿದರೆ ಸ್ವಲ್ಪ ಲಾಭವನ್ನು ನಿರೀಕ್ಷೆ ಮಾಡಬಹುದು ಎನ್ನುತ್ತಾರೆ ವ್ಯಾಪಾರಿ ಪ್ರತಾಪ್ ಬಾಬು.
ತಾಲೂಕಿಗೆ ಆಂಧ್ರಪ್ರದೇಶದಿಂದ ಹಣ್ಣುಗಳ ಪೂರೈಕೆಯಾಗುತ್ತಿದೆ. ಜನವರಿಯಲ್ಲಿ ವ್ಯಾಪಾರ ಸಾಮಾನ್ಯವಾಗಿತ್ತು. ಬಿಸಿಲೇರುತ್ತಿದ್ದಂತೆ ದಿನೇ ದಿನೇ ದಿನೇ ವ್ಯಾಪಾರ ಅಧಿಕವಾಗುತ್ತಿದ್ದು, ಪರಿಶ್ರಮಕ್ಕೆ ತಕ್ಕಂತೆ ಲಾಭ ಸಿಗುತ್ತದೆ ಎನ್ನುತ್ತಾರೆ.
ಕಲ್ಲಂಗಡಿ ವ್ಯಾಪಾರಿಗಳು ಬೇಡಿಕೆಯ ಜತೆಗೆ ಬೆಲೆಯೂ ಅಧಿಕ:
ಬೇಡಿಕೆ ಏರುತ್ತಿದ್ದಂತೆ ಬೆಲೆಯೂ ಹೆಚ್ಚಾಗುತ್ತಿದೆ. 8-10 ದಿನಗಳ ಹಿಂದೆ ಕೆ.ಜಿ.ಗೆ 16ನಂತೆ ಮಾರಾಟವಾಗುತ್ತಿದ್ದ ಕಲ್ಲಂಗಡಿ ಹಣ್ಣು ಈಗ ಕೆ.ಜಿ.ಗೆ 20-25 ನಂತೆ ಮಾರಾಟವಾಗುತ್ತಿದೆ. ತಮಿಳುನಾಡಿನಿಂದ ಈಗ ಬರುತ್ತಿರುವ ಲೋಡು ಬೆಲೆ ಹೆಚ್ಚಳವಾಗಿರುವುದರಿಂದ ಒಂದು ಕೆ.ಜಿ.ಗೆ ಈಗ 25-ರಿಂದ 30ರೂ. ಮಾರಬೇಕಿದೆ ಎಂದು ವ್ಯಾಪಾರಿ ಕುರುಬರಹಳ್ಳಿ ಪ್ರತಾಪ್ ಬಾಬು ಹೇಳು ತ್ತಾರೆ. ಕತ್ತರಿಸಿದ ಹಣ್ಣಿನ ಹೋಳುಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಆಂಧ್ರಪ್ರದೇಶದ ಗಡಿಯಲ್ಲಿರುವ ನಗರದಲ್ಲಿ ಉಷ್ಣಾಂಶ ಅಧಿಕವಿದ್ದು, ಕಲ್ಲಂಗಡಿಗೆ ಹೆಚ್ಚಿನ ಬೇಡಿಕೆ ಇದೆ.