ಧಾರವಾಡ: ಶೈಕ್ಷಣಿಕ, ಕೈಗಾರಿಕೋದ್ಯಮ, ಅರ್ಥಶಾಸ್ತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಾಸ್ತವಿಕತೆ ಹಾಗೂ ಕರಾರುವಕ್ಕಾದ ಮೌಲ್ಯ ತಿಳಿಯಲು ಸಂಖ್ಯಾಶಾಸ್ತ್ರ ಮೂಲ ಸಾಧನವಾಗಿ ಬಳಕೆಯಾಗುತ್ತಿದ್ದು, ವಿಷಯ ವಿಶ್ಲೇಷಿಸುವಾಗ ಸಂಖ್ಯಾಶಾಸ್ತ್ರದ ಪ್ರಸಕ್ತ ಸಾಧನಗಳನ್ನು ಉಪಯೋಗಿಸಬೇಕು ಎಂದು ಪುಣೆ ವಿಶ್ವವಿದ್ಯಾಲಯದ ಸಂಖ್ಯಾಶಾಸ್ತ್ರ ವಿಭಾಗದ ಪ್ರೊ|ಡಿ.ಡಿ ಹಾನಗಲ್ ಹೇಳಿದರು.
ಕವಿವಿ ಸಂಖ್ಯಾಶಾಸ್ತ್ರ ಅಧ್ಯಯನ ವಿಭಾಗ “ಸ್ಟಾಟಿಸ್ಟಿಕಲ್ ಇನರೆನ್ಸ್ ಆ್ಯಂಡ ಸ್ಟೊಕ್ಯಾಸ್ಟಿಕ್ ಮಾಡೆಲಿಂಗ್’ ವಿಷಯ ಮೇಲೆ ಆಯೋಜಿಸಿದ್ದ ಯುಜಿಸಿ ಪ್ರಾಯೋಜಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಮ್ಮೇಳನವನ್ನು ಗಿಡಕ್ಕೆ ನೀರು ಹಾಕಿ ಉದ್ಘಾಟಿಸಿ ಅವರು ಮಾತನಾಡಿದರು.
ಅತಿಥಿಯಾಗಿದ್ದ ಕವಿವಿ ಕುಲಸಚಿವ ಪ್ರೊ| ಎಂ.ಎನ್.ಜೋಶಿ ಮಾತನಾಡಿ, ಜೀವನ ಸಾಧನೆಗೆ ಸಂಖ್ಯಾಶಾಸ್ತ್ರ ಬೇಕು. ಟೀಮ್ ವರ್ಕ್‌ನಿಂದ ಜೀವನದಲ್ಲಿ ಹೆಚ್ಚು ಯಶಸ್ಸು ಗಳಿಸಲು ಸಾಧ್ಯ ಎಂದರು. ಮಂಗಳೂರು ವಿವಿಯ ಪ್ರೊ|ಟಿ.ಪಿ.ಎಂ. ಪಕ್ಕಳ ಮಾತನಾಡಿ, ಬಹಳ ಜನರು ಸಂಖ್ಯಾಸಾಸ್ತ್ರದ ಪ್ಯಾಕೇಜ್‌ಗಳನ್ನು ವಿಶ್ಲೇಷಣೆಗಳಿಗೆ ಬಳಸುತ್ತಾರೆ.
ಆದರೆ ಅದರ ವ್ಯಾಖ್ಯಾನ ಮತ್ತು ಅರ್ಥ ವಿವರಣೆ ಬಗ್ಗೆ ವಿಚಾರ ಮಾಡದೆ ಇದ್ದರೆ ಸಂಖ್ಯಾಶಾಸ್ತ್ರವನ್ನು ಸರಿಯಾದ ರೀತಿಯಲ್ಲಿ ಬಳಸಲು ಸಾಧ್ಯವಾಗುವುದಿಲ್ಲ ಎಂದರು. ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ನಿಖಾಯದ ಡೀನ್ ಪ್ರೊ|ಎಂ.ವಿ ಕುಲಕರ್ಣಿ ಮಾತನಾಡಿ, ಕವಿವಿ ಸಂಖ್ಯಾಶಾಸ್ತ್ರ ವಿಭಾಗ ಸಂಶೋಧನೆಯಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.
ಸಮ್ಮೇಳನದಲ್ಲಿ ವಿವಿಧ ವಿಶ್ವವಿದ್ಯಾಲಯಗಳಿಂದ ಆಗಮಿಸಿದ ಅಧ್ಯಾಪಕರು ಸಂಖ್ಯಾಶಾಸ್ತ್ರ ವಿಷಯದ ವಿವಿಧ ಅಯಾಮಗಳ ಬಗ್ಗೆ ಸಂಶೋಧನಾ ಪ್ರಬಂಧ ಮಂಡಿಸಿದರು. ಸಮ್ಮೇಳನದ ಕನ್ವೇನರ ಡಾ|ಎ.ಎಸ್. ತಳವಾರ ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥೆ ಡಾ|ಶಾರದಾ ಭಟ್ಟ ವಂದಿಸಿದರು.