ಕಾರ್ಕಳ: ಕಾರ್ಕಳ-ಬೆಳ್ಮಣ್-ಪಡುಬಿದ್ರಿ 27 ಕಿ.ಮೀ. ರಸ್ತೆಯಲ್ಲಿ ಬೆಳ್ಮಣ್‌ನಲ್ಲಿ ಸರಕಾರ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದನ್ನು ಕೈಬಿಡುವಂತೆ ಕಾರ್ಕಳ ಶಾಸಕ, ವಿರೋಧ ಪಕ್ಷದ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್ ಅವರು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಲಿಖೀತ ಮನವಿ ಮಾಡಿದ್ದಾರೆ.
ಕಾಮಗಾರಿ ಪೂರ್ಣಗೊಂಡು 4 ವರ್ಷಗಳ ಬಳಿಕ ಸರಕಾರವು ಟೋಲ್ ಸಂಗ್ರಹಕ್ಕೆ ಮುಂದಾಗಿರುವುದು ಸರಿಯಲ್ಲ.
ಈಗಾಗಲೆ 60 ಕಿ.ಮೀ. ಅಂತರದಲ್ಲಿ ಟೋಲ್ ಸಂಗ್ರಹ ಕೇಂದ್ರಗಳಿದ್ದು ಬೆಳ್ಮಣ್‌ನಲ್ಲಿಯೂ ಹೊಸದಾಗಿ ಟೋಲ್ ಸಂಗ್ರಹ ಕೇಂದ್ರವನ್ನು ಪ್ರಾರಂಭಿಸಿದಲ್ಲಿ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗಲಿದೆ ಎಂದು ಮನವಿಯಲ್ಲಿ ಉಲ್ಲೇಖೀಸಲಾಗಿದೆ.
ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಈ ಪ್ರಸ್ತಾವನೆಗೆ ಹಿಂದಿನ ಸರಕಾರದ ಅವಧಿಯಲ್ಲಿ ಅನುಮೋದನೆ ನೀಡಲಾಗಿದೆ. ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಯನ್ನು ಕೂಡ ಗಮನಿಸಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಸಮಸ್ಯೆ ಬಗೆಹರಿಸುವುದು ಹೇಗೆಂದು ಮಾಹಿತಿ ಪಡೆದು ತಿಳಿಸುವುದಾಗಿ ಭರವಸೆ ನೀಡಿದ್ದಾರೆ.
ಬೆಳ್ಮಣ್: ಟೋಲ್‌ಗೇಟ್ ನಿರ್ಮಾಣ ಪ್ರಸ್ತಾವನೆಯನ್ನು ಕೈಬಿಡುವಂತೆ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಮತ್ತು ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ. ಈ ರಸ್ತೆಯ ದುರಸ್ತಿ ಮತ್ತು ವಿಸ್ತರಣೆಗೆ ಸ್ಥಳೀಯ ರೈತರು ತಮ್ಮ ಭೂಮಿ ನೀಡಿ ಸಹಕರಿಸಿದ್ದರು. ಈಗ ಟೋಲ್ ಗೇಟ್ ಅಳವಡಿಸುವುದು ಎಷ್ಟು ಸರಿ ಎಂದು ನಿಯೋಗ ಸಚಿವರನ್ನು ಪ್ರಶ್ನಿಸಿದೆ. ಈ ಬಗ್ಗೆ ವಿವರಣೆ ನೀಡಿದ ಸಚಿವರು ಮಾ. 7ರಂದು ನಡೆದ ಒಪ್ಪಂದದಂತೆ ಟೋಲ್ ಅಳವಡಿಸಲು ನಿರ್ಣಯಿಸಲಾಗಿದೆ. ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವೆ ಎಂದು ಭರವಸೆ ನೀಡಿದರು. ಹೋರಾಟ ಸಮಿತಿ ಸದಸ್ಯ ಕ್ಸೇವಿಯರ್ ಡಿ’ಮೆಲ್ಲೋ ಮೊದಲಾದವರು ಉಪಸ್ಥಿತರಿದ್ದರು.