ಸುಮಂತ್ ಶೈಲೇಂದ್ರ “ಲೀ’ ಚಿತ್ರದ ಬಳಿಕ ಎಲ್ಲಿ ಹೋದರು ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಆದರೆ, ಅದಕ್ಕೆ ಉತ್ತರ “ಬ್ರಾಂಡ್ ಬಾಬು’. ಹೌದು, ಸುಮಂತ್ ಶೈಲೇಂದ್ರ ಸದ್ದಿಲ್ಲದೆಯೇ ತೆಲುಗು ಚಿತ್ರವೊಂದರಲ್ಲಿ ನಟಿಸಿದ್ದಾರೆ. ಆ ಚಿತ್ರವನ್ನು ಅವರ ತಂದೆ ಶೈಲೇಂದ್ರ ಬಾಬು ನಿರ್ಮಿಸಿದ್ದಾರೆ. ಇನ್ನು, ಚಿತ್ರ ಈಗಾಗಲೇ ಪೂರ್ಣಗೊಂಡಿದ್ದು, ಟೀಸರ್ ಸಿಕ್ಕಾಪಟ್ಟೆ ಸೌಂಡು ಮಾಡಿದೆ. ಜುಲೈ 20 ರಂದು ಟ್ರೇಲರ್ ರಿಲೀಸ್ ಆಗುತ್ತಿದ್ದು, ಆಗಸ್ಟ್ 3ರಂದು ದೇಶ, ವಿದೇಶದಲ್ಲೂ ತೆರೆಗೆ ಬರಲಿದೆ.
ಅಂದಹಾಗೆ, ಈ ಚಿತ್ರವನ್ನು ಪ್ರಭಾಕರ್ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಮಾರುತಿ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಬಹುತೇಕ ಹೈದರಾಬಾದ್‌ನಲ್ಲೇ ಚಿತ್ರೀಕರಣ ನಡೆದಿದೆ. ಇದೇ ಮೊದಲ ಸಲ ತೆಲುಗು ಚಿತ್ರದಲ್ಲಿ ನಟಿಸಿರುವ ನಾಯಕ ಸುಮಂತ್ ಶೈಲೇಂದ್ರ, “ಬ್ರಾಂಡ್ ಬಾಬು’ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. “ಇದೊಂದು ಪಕ್ಕಾ ಮನರಂಜನೆ ಚಿತ್ರವಾಗಿದ್ದು, ಹಾಸ್ಯವೇ ಪ್ರಧಾನವಾಗಿದೆ. ಆ್ಯಕ್ಷನ್‌ಗೂ ಜಾಗವಿದೆ. ಇಡೀ ಫ್ಯಾಮಿಲಿ ಕುಳಿತು ನೋಡಬಹುದಾದ ಅಪ್ಪಟ ಮನರಂಜನಾತ್ಮಕ ಚಿತ್ರ’ ಎನ್ನುತ್ತಾರೆ ಸುಮಂತ್.
ಇನ್ನು, ಚಿತ್ರದಲ್ಲಿ ಇಶಾ ನಾಯಕಿಯಾಗಿ ನಟಿಸಿದ್ದಾರೆ.
ಉಳಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಚಿತ್ರಕ್ಕೆ “ಬಾಹುಬಲಿ’ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ್ದ ಜೀವನ್ ಬಾಬು ಅವರು ಸಂಗೀತ ನೀಡಿದ್ದಾರೆ. ಐದು ಹಾಡುಗಳು ಚಿತ್ರದಲ್ಲಿವೆ. ಇನ್ನು, ಕಾರ್ತಿಕ್ ಪಳನಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ನಿರ್ಮಾಪಕ ಶೈಲೇಂದ್ರ ಬಾಬು ಅವರ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಎರಡನೇ ತೆಲುಗು ಚಿತ್ರವಿದು. ಪುತ್ರನೇ ಹೀರೋ ಆಗಿರುವುದರಿಂದ ಚಿತ್ರವನ್ನು ಅದ್ಧೂರಿಯಾಗಿಯೇ ನಿರ್ಮಿಸಿದ್ದಾರೆ.
ಕನ್ನಡದಲ್ಲಿ ಸುಮಂತ್ ಶೈಲೇಂದ್ರ ಅವರಿಗೆ ಒಂದಷ್ಟು ಕಥೆಗಳು ಬಂದವಾದರೂ, ಕಥೆ, ಪಾತ್ರ ಇಷ್ಟವಾಗದ ಕಾರಣ, ಅವನ್ನು ಪಕ್ಕಕ್ಕಿಟ್ಟಿದ್ದರು. ಅದೇ ವೇಳೆ, ತೆಲುಗಿನಲ್ಲೊಂದು ಚಿತ್ರ ಮಾಡುವ ಯೋಚನೆ ಮಾಡಿದ ಅವರಿಗೆ ಸಿಕ್ಕಿದ್ದು “ಬ್ರಾಂಡ್ ಬಾಬು’ ಕಥೆ. ಕಥೆ ಇಷ್ಟವಾಗಿದ್ದೇ ತಡ, ಸುಮಂತ್ ಹೈದರಾಬಾದ್‌ಗೆ ಜಿಗಿದು, ಚಿತ್ರ ಮುಗಿಸಿ ಇದೀಗ ಬಿಡುಗಡೆಯ ಹಂತಕ್ಕೆ ಬಂದಿದ್ದಾರೆ.