“ಹೂ ಮಳೆ’, “ಬೆಳದಿಂಗಳ ಬಾಲೆ’, “ನಿಷ್ಕರ್ಷ’, “ನಮ್ಮೂರ ಮಂದಾರ ಹೂವೆ’ ಮೊದಲಾದ ಹಿಟ್ ಚಿತ್ರಗಳಲ್ಲಿ ಮಿಂಚಿ ಮರೆಯಾಗಿದ್ದ ನಟಿ ಸುಮನ್ ನಗರ್‌ಕರ್ ಮತ್ತೆ ಚಂದನವನದಲ್ಲಿ ಸಕ್ರಿಯರಾಗುವ ಸುಳಿವನ್ನು ನೀಡಿದ್ದಾರೆ. ಸುಮಾರು ಹದಿನೈದು ವರ್ಷಗಳಿಂದ ಕನ್ನಡ ಚಿತ್ರರಂಗದಿಂದ ದೂರವುಳಿದಿದ್ದ ಸುಮನ್, ಕಳೆದ ವರ್ಷ ತೆರೆಕಂಡ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ “ಇಷ್ಟಕಾಮ್ಯ’ ಚಿತ್ರದಲ್ಲಿ ಅತಿಥಿ ಪಾತ್ರವೊಂದರ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದರು. ಈಗ ಸುಮನ್ ನಗರ್‌ಕರ್ ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ “ಬ್ರಾಹ್ಮಿ’ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದು, ಇತ್ತೀಚೆಗೆ ಈ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಯಿತು. ಇದೇ ವೇಳೆ “ಬ್ರಾಹ್ಮಿ’ ಚಿತ್ರದ ಬಗ್ಗೆ ಮಾತನಾಡಲು ಪತ್ರಕರ್ತರ ಮುಂದೆ ಬಂದಿದ್ದ ಸುಮನ್ ನಗರ್‌ಕರ್, ಮತ್ತು ಚಿತ್ರತಂಡ ಚಿತ್ರದ ಬಗ್ಗೆ ಒಂದಷ್ಟು ಸಂಗತಿಗಳನ್ನು ತೆರೆದಿಟ್ಟಿದೆ.
“ಬ್ರಾಹ್ಮಿ ಅಂದ್ರೆ ಸರಸ್ವತಿ ಎಂದರ್ಥ. ಇದೊಂದು ಸಂಗೀತ ಮತ್ತು ಸಂಗೀತಗಾರ್ತಿಯ ಕಥಾನಕವನ್ನು ಹೊಂದಿರುವ ಚಿತ್ರ. ಹಾಗಾಗಿ ಚಿತ್ರದ ಕಥೆಗೆ ಹೊಂದಿಕೆಯಾಗುತ್ತದೆ ಎಂಬ ಉದ್ದೇಶದಿಂದ ಈ ಶೀರ್ಷಿಕೆಯನ್ನು ಚಿತ್ರಕ್ಕೆ ಇಟ್ಟಿದ್ದೇವೆ. ಈ ಚಿತ್ರದಲ್ಲಿ ನಾನು ಮಧ್ಯ ವಯಸ್ಸಿನ ಸಂಗೀತಗಾರ್ತಿಯ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಸಂಗೀತ ಕಲಾವಿದೆಯೊಬ್ಬಳು ತನ್ನ ಬದುಕಿನಲ್ಲಿ ನಡೆದ ದುರ್ಘಟನೆಯಿಂದ ಹೇಗೆ ಕಲೆಯಿಂದ ವಿಮುಖಳಾಗುತ್ತಾಳೆ? ಮತ್ತೆ ಹೇಗೆ ತನ್ನನ್ನು ಅದೇ ಕ್ಷೇತ್ರದಲ್ಲಿ ಸಾಧನೆಯ ಕಡೆಗೆ ತೊಡಗಿಸಿಕೊಳ್ಳುತ್ತಾಳೆ? ಎನ್ನುವುದನ್ನು ನನ್ನ ಪಾತ್ರ ಹೇಳುತ್ತದೆ. ಹೆಣ್ಣೊಬ್ಬಳ ಬದುಕಿನಲ್ಲಿ ಅಚಾನಕ್ಕಾಗಿ ಎದುರಾಗುವ ತಿರುವುಗಳು ಅದನ್ನು ಆಕೆ ಹೇಗೆ ನಿರ್ವಹಿಸುತ್ತಾಳೆ ಅನ್ನೋದು ಚಿತ್ರದ ಕಥೆಯ ಒಂದು ಎಳೆ’ ಎನ್ನುತ್ತಾರೆ ಸುಮನ್ ನಗರ್‌ಕರ್.
“ಬ್ರಾಹ್ಮಿ’ ಚಿತ್ರ ಪ್ರಮುಖವಾಗಿ ಮೂರು ಪಾತ್ರಗಳ ಸುತ್ತ ನಡೆಯಲಿದ್ದು, ನಟಿ ಸುಮನ್ ನಗರ್‌ಕರ್ ಅವರೊಂದಿಗೆ ಹಿರಿಯ ನಟ ರಮೇಶ್ ಭಟ್ ಮತ್ತು ರಂಗಭೂಮಿ ಕಲಾವಿದೆ ಅನುಷಾ ಕೃಷ್ಣ ಚಿತ್ರದ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಪ್ರಾರಂಭದಲ್ಲಿ “ಉರ್ವಿ’ ಚಿತ್ರವನ್ನು ನಿರ್ದೇಶಿಸಿದ್ದ ಪ್ರದೀಪ್ ವರ್ಮಾ ಈ ಚಿತ್ರಕ್ಕೆ ನಿರ್ದೇಶನದ ಹೊಣೆ ಹೊತ್ತಿದ್ದರು. ಆದರೆ, ಕೆಲವು ವೈಯಕ್ತಿಕ ಕಾರಣಗಳಿಂದ ಸುಮಾರು 40 ದಿನ ಚಿತ್ರದ ಚಿತ್ರೀಕರಣ ನಡೆದ ಬಳಿಕ ಚಿತ್ರದಿಂದ ಹೊರ ನಡೆದಿ¨ªಾರೆ. ಹೀಗಾಗಿ ಸಹ ನಿರ್ದೇಶಕ ವಿಶ್ವನಾಥ್ ಚಿತ್ರದ ನಿರ್ದೇಶನದ ಹೊಣೆಯನ್ನು ಹೊತ್ತುಕೊಂಡು ಚಿತ್ರವನ್ನು ಮುನ್ನಡೆಸುತ್ತಿದ್ದಾರೆ. ಅಭಿಷೇಕ್ ಅಯ್ಯಂಗಾರ್ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ. ಹಿಂದೂಸ್ಥಾನಿ ಸಂಗೀತಗಾರ್ತಿ ಬಿಂದು ಮಾಲಿನಿ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದು, ಕಿರಣ್ ಕಾವ್ಯಪ್ಪ ಹಾಡುಗಳಿಗೆ ಸಾಹಿತ್ಯವನ್ನು ನೀಡಿದ್ದಾರೆ. ಇನ್ನುಳಿದಂತೆ ಗುರು ಪ್ರಸಾದ್ ಚಿತ್ರಕ್ಕೆ ಛಾಯಾಗ್ರಹಣ, ಕೆಂಪರಾಜು ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಮನ್ ನಗರ್‌ಕರ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಸುಮನ್ ಪತಿ ಗುರುದೇವ್ ಮತ್ತು ಸ್ನೇಹಿತರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬೆಂಗಳೂರು ಮತ್ತು ಚಿಕ್ಕಮಗಳೂರಿನಲ್ಲಿ ಚಿತ್ರದ ಚಿತ್ರೀಕರಣ ಮುಗಿಸಿರುವ “ಬ್ರಾಹ್ಮಿ’ ಚಿತ್ರತಂಡ ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದೆ. ಮುಂದಿನ ವರ್ಷದ ಆರಂಭದಲ್ಲಿ “ಬ್ರಾಹ್ಮಿ’ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.
ಜಿ. ಎಸ್. ಕಾರ್ತಿಕ ಸುಧನ್